Latest

ಕೈಗಾರಿಕಾ ಪ್ರದೇಶಗಳ ಮೂಲಸೌಕರ್ಯ ಸುಧಾರಣೆಗೆ ಕ್ರಮ : ಮಹೇಶ್ವರ ರಾವ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:
ಇಲ್ಲಿನ ವಿಜಯನಗರ ಮಾಗಡಿ ಕಾರ್ಡ್ ರಸ್ತೆಯ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ಕಾರ್ಯಾಲಯದಲ್ಲಿ ಕೈಗಾರಿಕಾ ಸಂವಾದ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಕಾಸಿಯಾ ಅಧ್ಯಕ್ಷ ಬಸವರಾಜ ಜವಳಿ, ಪ್ರಸ್ತುತ ಕೆಎಸ್‌ಎಫ್‌ಸಿ ಮೂಲಕ ಶೇ.೪ ಬಡ್ಡಿದರದ ಸಹಾಯಧನ ಯೋಜನೆ, ಎಸ್‌ಐಡಿಬಿಐ ಮತ್ತು ಷೆಡ್ಯೂಲ್ ಬ್ಯಾಂಕುಗಳಿಗೂ ಬಡ್ಡಿ ಸಹಾಯಧನ ವಿಸ್ತರಣೆ, ಮಹಿಳಾ ಉದ್ಯಮಿಗಳಿಗೆ ವಿಶೇಷ ಆದ್ಯತೆ, ವಿದ್ಯುತ್ ಪೂರೈಕೆ, ಇಂಧನ ಸುಂಕ, ಉದ್ಯಮಿಗಳಿಗೆ ವಿಮಾ ಸೌಲಭ್ಯ, ಖಾಸಗಿ ಕೈಗಾರಿಕಾ ಪ್ರದೇಶಗಳಲ್ಲಿ ಎಸ್‌ಎಂಇ ಅಭಿವೃದ್ಧಿಗಾಗಿ ಹಣಕಾಸು ನಿಧಿ ನೀಡುವಿಕೆ ಹಾಗೂ ಎಸ್‌ಎಂಇ ಗಳಿಗೆ ಪ್ರತ್ಯೇಕ ಕೈಗಾರಿಕಾ ನೀತಿ ರಚನೆ ಕುರಿತು ವಿವರಿಸಿದರು. 
ಇದೇ ಸಂದರ್ಭದಲ್ಲಿ ಕೈಗಾರಿಕಾ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ದಿ ಕುರಿತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್ ಅವರಿಗೆ ಬಸವರಾಜ ಜವಳಿ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸ್ವೀಕರಿಸಿದ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಮಹೇಶ್ವರ ರಾವ್, ಮೂಲಸೌಕರ್ಯಗಳ ಅಭಿವೃದ್ಧಿ ಪರಿಶೀಲನೆಗಾಗಿ ರಾಜಾಜಿನಗರದ ಪ್ರಕಾಶನಗರ, ಕೈಗಾರಿಕಾ ಪ್ರದೇಶ, ಕಾಮಾಕ್ಷಿಪಾಳ್ಯ, ಸುಂಕದಕಟ್ಟೆ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಿಗೆ ವೈಯಕ್ತಿಕವಾಗಿ ಭೇಟಿ ನೀಡಿ ಪರಿಹಾರೋಪಾಯ ಕೈಗೊಳ್ಳುವ ಭರವಸೆ ನೀಡಿದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ನಿರ್ದೇಶನಾಲಯದ ಅಪರ ಕಾರ್ಯದರ್ಶಿ ಎಚ್.ಎಂ. ಶ್ರೀನಿವಾಸ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್.ಪಿ. ಪ್ರಕಾಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದಲಿಂಗಪ್ಪ ಬಿ. ಪೂಜಾರಿ ಸಂವಾದದಲ್ಲಿ ಭಾಗವಹಿಸಿದರು. ಕಾಸಿಯಾ ಗೌರವ ಉಪಾಧ್ಯಕ್ಷ ಆರ್. ರಾಜು, ಗೌರವ ಜಂಟಿ ಕಾರ್ಯದರ್ಶಿ ಸುರೇಶ ಸಾಗರ, ಶ್ರೀನಾಥ್ ಭಂಡಾರಿ ಉದ್ಯಾವರ ಹಾಗೂ ಕಾಸಿಯಾದ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.  ಕಾಸಿಯಾ ಗೌರವ ಕಾರ್ಯದರ್ಶಿ ರವಿಕಿರಣ ಕುಲಕರ್ಣಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button