ಪ್ರಗತಿವಾಹಿನಿ ಸುದ್ದಿ, ಮಾಂಜರಿ:
ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 4 ಟಿಎಂಸಿ ನೀರು ಬಿಡುವಂತೆ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.
ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಈ ವಿಷಯ ತಿಳಿಸಿದ್ದು, ಬೆಳಗಾವಿ, ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗೆ ಜೀವನದಿಯಾದ ಕೃಷ್ಣಾನದಿ ಕಳೆದ ಎರಡು ತಿಂಗಳಿಂದ ಪೂರ್ಣವಾಗಿ ಬತ್ತಿ ಹೋಗಿದ್ದರಿಂದ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ಉಂಟಾಗಿದೆ. ಸಮಸ್ಯೆಯನ್ನು ಪರಿಹಾರ ಮಾಡಲಿಕ್ಕೆ ಮಹಾರಾಷ್ಟ್ರ ರಾಜ್ಯದ ಕೊಯ್ನಾ ಜಲಾಶಯದ ಮುಖಾಂತರ ಕರ್ನಾಟಕಕ್ಕೆ ನಾಲ್ಕು ಟಿಎಂಸಿ ಕುಡಿಯುವ ನೀರು ಬಿಡಬೇಕೆಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಇವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ದೂರವಾಣಿ ಮುಖಾಂತರ ಸೂಚಿಸಿದ್ದಾರೆ ಎಂದು ಕೋರೆ ಮಾಹಿತಿ ನೀಡಿದ್ದಾರೆ.
ಬೆಳಗಾವಿಗೆ ಬಂದಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಜತೆಗೆ ಮಾತನಾಡುವಾಗ ನಾನು ಕೃಷ್ಣಾ ನದಿ ತೀರದಲ್ಲಿ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಪರಿಸ್ಥಿತಿ ಗಂಭೀರ ಉಂಟಾಗಿದ್ದರಿಂದ ಜನ ಮತ್ತು ಜಾನುವಾರುಗಳಿಗೆ ಬಹಳ ತೊಂದರೆ ಉಂಟಾಗಿದೆ. ಅದಕ್ಕಾಗಿ ತಕ್ಷಣ ಮಹಾರಾಷ್ಟ್ರ ರಾಜ್ಯದ ಜೊತೆ ಮಾತನಾಡಬೇಕೆಂದು ವಿನಂತಿಸಿದಾಗ ತಕ್ಷಣವೇ ಅವರು ಬೆಳಗಾವಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲಿಯೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜೊತೆಗೆ ಮಾತನಾಡಿದರು. ಕೊಯ್ನಾ ಜಲಾಶಯದ ಮುಖಾಂತರ ಕರ್ನಾಟಕ ರಾಜ್ಯಕ್ಕೆ ನಾಲ್ಕು ಟಿಎಂಸಿ ಕುಡಿಯುವ ನೀರು ಒದಗಿಸಬೇಕೆಂದು ಸೂಚಿಸಿದರು ಎಂದು ಕೋರೆ ಹೇಳಿದರು.
ಕಳೆದ ತಿಂಗಳಿಂದ ನಾನು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಯ ಸಚಿವರ ಜೊತೆಗೆ ಸತತವಾಗಿ ಮಾತನಾಡುತ್ತಿದ್ದೇನೆ. ಅದರ ಜೊತೆಗೆ ಉಪರಾಷ್ಟ್ರಪತಿಗಳಿಂದಲೂ ಹೇಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ