*ಗಾಂಧಿ ಭಾರತ 100 : ದೀಪಾಲಂಕಾರದ ಫೋಟೋ ಕ್ಲಿಕ್ಕಿಸುವಾಗ ಇವುಗಳನ್ನು ಪಾಲಿಸಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಅಧಿವೇಶನಕ್ಕೀಗ ಶತಮಾನೋತ್ಸವದ ಸಂಭ್ರಮ. ಈ ಶತಮಾನೋತ್ಸವ ಪ್ರಯುಕ್ತ ಇಂಧನ ಇಲಾಖೆಯಿಂದ ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿದೆ.
ಬೆಳಗಾವಿ ಹಾಗೂ ಕರ್ನಾಟಕದ ಐತಿಹಾಸಿಕ ಘನತೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಬಗೆಯ ವಿದ್ಯುದೀಪಾಲಂಕಾರಗಳು ಜನರನ್ನು ಸೆಳೆಯುತ್ತಿದ್ದು, ಈ ದೀಪಾಲಂಕಾರಗಳನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ತಮ್ಮ ಕ್ಯಾಮರಾಗಳಲ್ಲೂ ಸೆರೆ ಹಿಡಿಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ವಜನಿಕರ ಸುರಕ್ಷತೆ ಕೂಡ ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಭ್ರಮದ ಜತೆಗೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ಆದ್ದರಿಂದ ಈ ಕೆಳಗಿನ ಕೆಲವು ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೆಸ್ಕಾಂ ಮನವಿ ಮಾಡಿದೆ.
ಮಾರ್ಗಸೂಚಿಗಳು
ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಯಾವುದೇ ವಿದ್ಯುತ್ ಸಲಕರಣೆಗಳು, ದೀಪಾಲಂಕಾರಗಳು ಅಥವಾ ಬೆಳಕು ಅಲಂಕಾರಗಳನ್ನು ಮುಟ್ಟಬೇಡಿ. ಸೆಲ್ಫಿ ತೆಗೆದುಕೊಳ್ಳುವಾಗ ಅಥವಾ ಫೋಟೋ ಕ್ಲಿಕ್ಕಿಸುವಾಗ ವಿದ್ಯುತ್ ಅಲಂಕಾರದಿಂದ ದೂರದಲ್ಲಿ ನಿಲ್ಲಿರಿ. ವಿದ್ಯುತ್ ಚಾಲಿತ ದೀಪಾಲಂಕಾರಗಳಿಗೆ ಉಪಯೋಗಿಸಿದ ಕಂಬಗಳು, ಬೇಲಿಗಳು ಅಥವಾ ಚೌಕಟ್ಟಿನಲ್ಲಿ ನಿಲ್ಲಬೇಡಿ ಅಥವಾ ಕಂಬಗಳನ್ನು ಹತ್ತಬೇಡಿ. ಜನಸಂದಣಿ ಪ್ರದೇಶಗಳಲ್ಲಿ , ವಿದ್ಯುತ್ ದೀಪಾಲಂಕರಗಳ ಸುತ್ತಲಿನ ಪ್ರದೇಶದಲ್ಲಿ ಎಚ್ಚರಿಕೆ ವಹಿಸಿ. ರಸ್ತೆ ಮಾರ್ಗಗಳಲ್ಲಿ ಅಡ್ಡಿಪಡಿಸದೆ ಅಥವಾ ರಸ್ತೆಯಲ್ಲಿ ನಿಲ್ಲದೆ ದೀಪಾಲಂಕಾರಗಳನ್ನು ವೀಕ್ಷಿಸಿ. ಮಕ್ಕಳು ವಿದ್ಯುತ್ ಅಲಂಕಾರಗಳಿಂದ ದೂರವಿರಲಿ ಮತ್ತು ಸದಾ ಹಿರಿಯರ ಮೇಲ್ವೆಚಾರಣೆಯಲ್ಲಿರಲಿ. ಹಾನಿಯಾದ ವಿದ್ಯುತ್ ಕೇಬಲ್‌ಗಳು, ಸಡಿಲ ಅಲಂಕಾರಗಳು ಅಥವಾ ಯಾವುದೇ ಅಸಹಜ ಚಟುವಟಿಕೆಗಳು ಕಂಡುಬಂದಲ್ಲಿ, ತಕ್ಷಣವೇ ಹತ್ತಿರದ ಹೆಸ್ಕಾಂ ಕಚೇರಿಯ ಅಧಿಕಾರಿಗಳಿಗೆ ಅಥವಾ ಹೆಸ್ಕಾಂ 24×7 ಸಹಾಯವಾಣಿ 1912 ಗೆ ಕರೆಮಾಡಿ ಮಾಹಿತಿ ನೀಡಿ ಎಂದು ಕೋರಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ