ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕಳೆದ ಸುಮಾರು 6 ತಿಂಗಳಿನಿಂದ ದುಃಸ್ವಪ್ನವಾಗಿರುವ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಕುರಿತು ಕೊನೆಗೂ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಹಂತಕ್ಕೆ ಕಾಂಗ್ರೆಸ್ ಪಕ್ಷ ಬಂದಿದೆ.
ಲೋಕಸಭಾ ಚುನಾವಣೆ ವೇಳೆ ರಮೇಶ ಜಾರಕಿಹೊಳಿ ಪಕ್ಷದ ಪರವಾಗಿ ಕೆಲಸ ಮಾಡಬಹುದು ಇಲ್ಲವೇ ಕೊನೆಯ ಪಕ್ಷ ತಟಸ್ಥವಾಗಿರಬಹುದು ಎನ್ನುವ ಕಾಂಗ್ರೆಸ್ ನಿರೀಕ್ಷೆ ಹುಸಿಯಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ ವಿಳಂಬ ಮಾಡಿದರೆ ಭದ್ರಕೋಟೆಯಾಗಿದ್ದ ಗೋಕಾಕನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ನಿರ್ಧಾರಕ್ಕೆ ಬಂದಿರುವ ಪಕ್ಷ ರಮೇಶ ಕೈ ಬಿಟ್ಟು ಅಲ್ಲಿಗೆ ಉತ್ತರಾಧಿಕಾರಿಯನ್ನು ನೇಮಕ ಮಾಡಿದೆ.
ಸತೀಶ್ ಜಾರಕಿಹೊಳಿ ಸ್ವತಃ ಈ ವಿಷಯ ತಿಳಿಸಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಷಯ ಸ್ಪಷ್ಟಪಡಿಸಿದ್ದಾಗಿ ತಿಳಿಸಿದ್ದಾರೆ. ಲಖನ್ ಜಾರಕಿಹೊಳಿಗೆ ಗೋಕಾಕ ಕ್ಷೇತ್ರದ ಸಂಪೂರ್ಣ ಜವಾಬ್ದಾರಿ ವಹಿಸಲಾಗಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ. ರಮೇಶ ಬಿಜೆಪಿಯಿಂದ ಸ್ಪರ್ಧಿಸಿದರೆ ಲಖನ್ ಅವರ ವಿರುದ್ಧ ಕಣಕ್ಕಿಳಿಯಲಿದ್ದಾರೆ ಎಂದು ಸತೀಶ್ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಲಖನ್ ಕಾಂಗ್ರೆಸ್ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿನಿಂದಲೂ ರಮೇಶ ಜೊತೆ ಗುರುತಿಸಿಕೊಂಡಿದ್ದ ಲಖನ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಸತೀಶ್ ಜಾರಕಿಹೊಳಿ ಮಾತುಕತೆ ನಡೆಸಿದ್ದರು. ರಮೇಶ ಕೈ ಬಿಟ್ಟು ಲಖನ್ ತಮ್ಮ ಜೊತೆ ಬರುವಂತೆ ಮಾಡುವಲ್ಲಿ ಸತೀಶ್ ಯಶಸ್ವಿಯಾಗಿದ್ದರು.
ಇದೀಗ ಗೋಕಾಕ ಜಾರಕಿಹೊಳಿ ಸಹೋದರರ ರಾಜಕೀಯ ನಿರ್ಣಾಯಕ ಹಂತಕ್ಕೆ ಬಂದಿದ್ದು, ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ನಡೆಯಲಿರುವ ರಾಜಕೀಯ ಧೃವೀಕರಣದಲ್ಲಿ ಸಹೋದರರ ಆಟ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆ ಇದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಹಾಗೂ ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ