ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಅನುಚಿತ ವ್ಯಾಪಾರ ಪದ್ದತಿ ಇಂದು ಹೆಚ್ಚಾಗುತ್ತಿದೆ. ಯಾವುದೇ ವಸ್ತುವಿನ ಖರೀದಿ ಹಾಗೂ ದೋಷ ಕಂಡುಬಂದಲ್ಲಿ ಪರಿಹಾರ ಪಡೆಯಲು ಗ್ರಾಹಕರಲ್ಲಿ ಹೆಚ್ಚಿನ ಜಾಗೃತಿ ಅವಶ್ಯ. ಮೋಸ, ಸಮಾಜ ವಿರೋಧಿ ಚಟುವಟಿಕೆಗಳನ್ನು ತಡೆಗಟ್ಟಲು ನಮ್ಮಲ್ಲಿ ಸಾಕಷ್ಟು ಕಾನೂನುಗಳಿವೆ. ಆದರೆ ಎಲ್ಲಿಯವರೆಗೆ ಬಳಕೆದಾರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವದಿಲ್ಲವೋ ಅಲ್ಲಿಯವರೆಗೆ ಯಾವುದೇ ಕಾನೂನುಗಳು ಸಹಾಯಕ್ಕೆ ಬರುವುದಿಲ್ಲ ಎಂದು ಬೆಳಗಾವಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಹೆಚ್ಚುವರಿ ಅಧ್ಯಕ್ಷೆ ಹೆಚ್.ಡಿ.ಏಕತಾ ಅಭಿಪ್ರಾಯಪಟ್ಟರು.
ಕರ್ನಾಟಕ ಸರಕಾರ ಜಿಲ್ಲಾಡಳಿತ, ಆಹಾರ ನಾಗರಿಕರ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಡಾ.ಎಸ್.ಜೆ.ನಾಗಲೋಟಿಮಠ ವಿಜ್ಷಾನ ಕೇಂದ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕ ದಿನಾಚರಣೆ-2018 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಗ್ರಾಹಕ ಸಮಸ್ಯೆಗಳು ವೇದಿಕೆಯಲ್ಲಿ ನೋಂದಣಿಯಾಗುತ್ತಿವೆ. ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿದಾಗ ಮಾತ್ರ ಗ್ರಾಹಕರ ಮೇಲಿನ ಶೋಷಣೆಯನ್ನು ತಪ್ಪಿಸಬಹುದು ಎಂದು ಅವರು ಹೇಳಿದರು.
ನ್ಯಾಯವಾದಿ ಹಾಗೂ ಬೆಳಗಾವಿ ಜಿಲ್ಲಾ ಗ್ರಾಹಕ ಸಂಘಧ ಅಧ್ಯಕ್ಷ ಎನ್.ಆರ್.ಲಾತೂರ ಮಾತನಾಡಿ, ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಬ್ಬರು ಗ್ರಾಹಕರೇ. ಅಧುನಿಕ ಯುಗದಲ್ಲಿ ಗ್ರಾಹಕರ ಮೇಲೆ ಹಲವಾರು ವಂಚನೆಗಳು ನಡಿಯುತ್ತಿವೆ. ವಂಚನೆಗಳನ್ನು ತಡೆಗಟ್ಟಲು ಸರಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಬೆಳಗಾವಿ ನಗರದಲ್ಲಿ ಬಹಳಷ್ಟು ಪ್ರಕರಣಗಳು ವಿಲೇವಾರಿ ಆಗಬೇಕಾಗಿದ್ದು, ಗ್ರಾಹಕ ವೇದಿಕೆಗೆ ಸೂಕ್ತ ಸಿಬ್ಬಂದಿ, ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ಸರಕಾರ ಪ್ರಯತ್ನಿಸಿದಾಗ ಮಾತ್ರ ಶೀಘ್ರ ವಿಲೇವಾರಿ ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಪಿ.ಹಿರೇಮಠ ವಹಿಸಿದ್ದರು. ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಸೈಯದಾ ಆಫ್ರೀನ್ ಭಾನು ಬಳ್ಳಾರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸದಸ್ಯರಾದ ಜಯಶ್ರೀ ಕಾಜಗಾರ, ಸುನೀತಾ ಬಾಗೇವಾಡಿ, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಗಾರ್ಗಿ, ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಎಸ್.ಎಸ್.ಉಪ್ಪಾರ, ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿ ವೈಜಯಂತಿ ಚೌಗಲಾ , ಗ್ರಾಹಕ ಮಾಹಿತಿ ಕೇಂದ್ರದ ಎಂ.ಎಂ.ಗಡಗಲಿ ಉಪಸ್ಥಿತರಿದ್ದರು. ಇಲಾಖೆಯ ಸಹಾಯಕ ನಿರ್ದೇಶಕರಾದ ಪುರುಷೋತ್ತಮ ಇಲಾಖೆಯ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಕವಿತಾ ಅಕ್ಕಿ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ
ಗ್ರಾಹಕರಿಗಾಗುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ ಪ್ರಾರಂಭಿಸಲಾಗಿದೆ. ಜಿಲ್ಲೆಯ 74 ಸರಕಾರಿ ಫ್ರೌಢಶಾಲೆಗಳಲ್ಲಿ ಗ್ರಾಹಕರ ಕ್ಲಬ್‌ಗಳನ್ನು ಪ್ರಾರಂಭಿಸಿ ಸಾವಿರಾರು ವಿಧ್ಯಾರ್ಥಿಗಳಿಗೆ ಗ್ರಾಹಕ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನೊಂದ ಗ್ರಾಹಕರು ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ