ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಬೇಡಿಕೆಗೆ ಅನುಗುಣವಾಗಿ ತಕ್ಷಣವೇ ಅಗತ್ಯ ಸ್ಮಶಾನ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ತಹಶೀಲ್ದಾರರಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಪರಿಶಿಷ್ಟ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಥಣಿ ಹಾಗೂ ಹುಕ್ಕೇರಿ ತಾಲ್ಲೂಕಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರು ಸಲ್ಲಿಸಿರುವ ಸ್ಮಶಾನ ಭೂಮಿ ಬೇಡಿಕೆ ಹಾಗೂ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ನಿಪ್ಪಾಣಿ ತಾಲ್ಲೂಕಿನಲ್ಲಿ ಖಾಸಗಿಯವರು ಸ್ಮಶಾನಕ್ಕೆ ಜಾಗೆ ನೀಡಲು ಒಪ್ಪಿಗೆ ನೀಡಿದ್ದಾರೆ ಎಂದು ಸಮಿತಿಯ ನೂತನ ಸದಸ್ಯ ಅಶೋಕ ಅಸೋದೆ ಸಭೆಯ ಗಮನಕ್ಕೆ ತಂದರು. ತಕ್ಷಣವೇ ಪ್ರಸ್ತಾವ ಸಲ್ಲಿಸಲು ತಹಶೀಲ್ದಾರ ಅವರಿಗೆ ಸೂಚನೆ ನೀಡಿದರು.
ಆರ್.ಟಿ.ಇ ಅಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ಪಡೆಯುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದರು.
ತಹಶೀಲ್ದಾರ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಬಿಸಿಯೂಟದ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದರು. ಅದೇ ರೀತಿ ಅಂಗನವಾಡಿಗಳಲ್ಲೂ ಆಹಾರ ಪದಾರ್ಥಗಳನ್ನು ಪರಿಶೀಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಕಾರಣಕೇಳಿ ನೋಟಿಸ್: ಸಭೆಗೆ ಗೈರುಹಾಜರಾಗಿದ್ದ ಕೆ.ಐ.ಎ.ಡಿ.ಬಿ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು. ಕೆ.ಐ.ಎ.ಡಿ.ಬಿ ಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪ ಯೋಜನೆಯಡಿ ಅನುದಾನ ಬಿಡುಗಡೆ ಆಗದಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಅನುಸರಣಾ ವರದಿ ನೀಡಿರಲಿಲ್ಲ. ಸಭೆಗೂ ಹಾಜರಾಗದಿರುವುದರಿಂದ ಕಾರಣಕೇಳಿ ನೋಟಿಸ್ ನೀಡುವಂತೆ ತಿಳಿಸಿದರು.
ಸಾಕ್ಷಿಗಳಿಗೆ ಅನುಕೂಲ ಕಲ್ಪಿಸಲು ನಿರ್ದೇಶನ: ದೌರ್ಜನ್ಯ ಪ್ರಕರಣಗಳಲ್ಲಿ ಸಾಕ್ಷಿದಾರರು ಪದೇ ಪದೆ ನ್ಯಾಯಾಲಯಕ್ಕೆ ಅಲೆದಾಡುವ ಪರಿಸ್ಥಿತಿ ಇರುವುದರಿಂದ ಸಾಕ್ಷಿದಾರರು ವಿಮುಖರಾಗುತ್ತಿದ್ದು, ಪ್ರಕರಣಗಳು ಬಿದ್ದು ಹೋಗುತ್ತಿವೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಸಮಿತಿಯ ಸದಸ್ಯ ಅಸೋದೆ ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸಾಕ್ಷಿದಾರರಿಗೆ ಮುಂಚಿತವಾಗಿಯೇ ಮಾಹಿತಿ ನೀಡುವ ಮೂಲಕ ಅನುಕೂಲ ಕಲ್ಪಿಸುವಂತೆ ಸಾರ್ವಜನಿಕ ಅಭಿಯೋಜಕರಿಗೆ ತಿಳಿಸಿದರು.
ದೌರ್ಜನ್ಯ ಮತ್ತು ಪೋಸ್ಕೋ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ಸಭೆ ನಡೆಸುವಂತೆ ಕೂಡ ಜಿಲ್ಲಾಧಿಕಾರಿ ಹೇಳಿದರು. ಪ್ರಕರಣಗಳ ತನಿಖೆಯನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದರು.
ದೌರ್ಜನ್ಯ ಪ್ರಕರಣಗಳಲ್ಲಿ ಯಾವುದೇ ಪ್ರಕರಣದ ಪರಿಹಾರ ಬಾಕಿ ಉಳಿದಿಲ್ಲ. ಎಲ್ಲರಿಗೂ ಪರಿಹಾರ ಪಾವತಿಸಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿಯ ನೂತನ ಸದಸ್ಯರಾದ ಅಶೋಕ ಅಸೋದೆ, ಸುರೇಶ್ ತಳವಾರ, ಅಣ್ಣಾಸಾಹೇಬ್ ಹಂಚಿನಮನಿ, ವಿಜಯ ತಳವಾರ, ಗಂಗಾಬಾಯಿ ಸಿಂಗನವರ, ಲೆವಿನಾ, ಮಹಾದೇವ, ಮಲ್ಲಿಕಾರ್ಜುನ ಖೋತ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಅನುದಾನ ಬಳಸದಿದ್ದರೆ ಕಠಿಣ ಕ್ರಮ
ಪರಿಶಿಷ್ಟ ಜಾತಿ ವಿಶೇಷ ಘಟಕ ಮತ್ತು ಗಿರಿಜನ ಉಪ ಯೋಜನೆಯಡಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿರುವ ಅನುದಾನವನ್ನು ಪ್ರತಿಯೊಂದು ಇಲಾಖೆಯು ನೂರಕ್ಕೆ ನೂರರಷ್ಟು ಬಳಕೆ ಮಾಡಬೇಕು. ಇದಕ್ಕೆ ತಪ್ಪಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಎಚ್ಚರಿಕೆ ನೀಡಿದರು.
ಸೋಮವಾರ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅನುಷ್ಠಾನ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಭೌತಿಕ ಮತ್ತು ಆರ್ಥಿಕ ಗುರಿ ಗೊತ್ತು ಮಾಡಲಾಗಿದೆ. ಬಹುತೇಕ ಅನುದಾನ ಕೂಡ ಬಿಡುಗಡೆಗೊಂಡಿದ್ದು, ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸಬೇಕು. ಮಾರ್ಚ್ ವೇಳೆಗೆ ಚುನಾವಣೆ ಕೆಲಸ ಆರಂಭಗೊಳ್ಳಲಿರುವುದರಿಂದ ಈಗಿನಿಂದಲೇ ಕಾಮಗಾರಿಗಳನ್ನು ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದುವರೆಗಿನ ಸಾಧನೆ ತೃಪ್ತಿಕರವಾಗಿದ್ದು, ಕಡಿಮೆ ಸಾಧನೆಗೈದಿರುವ ಇಲಾಖೆಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಅನುದಾನ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆ, ಹೆಸ್ಕಾಂ, ನೀರಾವರಿ ನಿಗಮ, ಸಾರ್ವಜನಿಕ ಶಿಕ್ಷಣ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಸಾರಿಗೆ, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳು ಮತ್ತು ನಿಗಮ-ಮಂಡಳಿಗಳ ಪ್ರಗತಿಯನ್ನು ಪರಿಶೀಲಿಸಿದರು.
ಅತೀ ಕಡಿಮೆ ಸಾಧನೆಗೈದಿರುವ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಕಾರಣಕೇಳಿ ನೋಟಿಸ್ ನೀಡಬೇಕು ಹಾಗೂ ಜನವರಿ ಅಂತ್ಯದೊಳಗೆ ಅನುದಾನ ಖರ್ಚು ಮಾಡಬೇಕು ಎಂದು ಸೂಚಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಭರತಸಿಂಗ್ ಮೀನಾ, ಡಿಸಿಪಿ ಸೀಮಾ ಲಾಟ್ಕರ್, ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ.ಅಮರನಾಥ್ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಸಭೆ ನಿರ್ವಹಿಸಿದರು.
————————————————————————————————————————————–
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ