ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದು, ತಮ್ಮೆಲ್ಲರ ಸಹಕಾರವಿರಲಿ ಎಂದು ಕೆಎಲ್ಇ ಸಂಸ್ಥೆಯ ನಿರ್ದೇಶಕರಾಗಿರುವ ಬೈಲಹೊಂಗಲದ ಡಾ.ವಿ.ಎಸ್.ಸಾಧುನವರ್ ಜಿಲ್ಲೆಯ ಪ್ರಮುಖರಿಗೆ ಪತ್ರ ಬರೆದಿದ್ದಾರೆ.
ನಾನು ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದಾಗಿ ಪಕ್ಷದ ಮುಖಂಡರಿಗೆ ತಿಳಿಸಿದ್ದೇನೆ. ನನಗೆ ಟಿಕೆಟ್ ನೀಡಿದರೆ ತಮ್ಮೆಲ್ಲರ ಸಹಕಾರ ಬಯಸುತ್ತೇನೆ ಎಂದು ಅವರು ಕ್ಷೇತ್ರದ ಹಲವಾರು ಜನರಿಗೆ, ವಿವಿದ ಸಂಘಸಂಸ್ಥೆಗಳ ಮುಖಂಡರಿಗೆ ಪತ್ರ ಬರೆದು ವಿನಂತಿಸಿದ್ದಾರೆ.
ನಾನು ಶಿಕ್ಷಣ, ಆರೋಗ್ಯ ಗ್ರಾಮೀಣಾಭಿವೃದ್ಧಿ, ಬ್ಯಾಂಕಿಂಗ್, ಗ್ರಾಮೀಣ ಕುಡಿಯುವ ನೀರಿನ ಕ್ಷೇತ್ರಗಳಲ್ಲಿ, ಸಂಘಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಈಗ ಚುನಾವಣೆಯಲ್ಲಿ ಸ್ಪರ್ಧಿಸಬಯಸಿದ್ದೇನೆ. ಪಕ್ಷದ ಮುಖಂಡರು ನನಗೆ ಟಿಕೆಟ್ ನೀಡಿದಲ್ಲಿ ತಾವೆಲ್ಲ ನನಗೆ ಬೆಂಬಲಿಸಿ ಆಶಿರ್ವಾದ ಮಾಡಬೇಕು ಎಂದು ಅವರು ಕೋರಿದ್ದಾರೆ.
ಇದರಿಂದಾಗಿ ಬೆಳಗಾವಿ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಟ್ಟಿಗೆ ಮತ್ತೊಬ್ಬರು ಸೇರ್ಪಡೆಯಾದಂತಾಗಿದೆ. ಸಾಧುನವರ್ ಕಳೆದ ಹಲವಾರು ವರ್ಷಗಳಿಂದಲೂ ಕಾಂಗ್ರೆಸ್ ಟಿಕೆಟ್ ಕೇಳುತ್ತಲೇ ಬಂದಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ದೆಹಲಿಗೆ ಕಳುಹಿಸಿರುವ ಪಟ್ಟಿಯಲ್ಲಿ ಸಾಧುನವರ್ ಹೆಸರಿರುವುದು ಸಂಶಯಾಸ್ಪದವಾಗಿದೆ. ಶಿವಕಾಂತ ಸಿದ್ನಾಳ, ಅಂಜಲಿ ನಿಂಬಾಳ್ಕರ್, ರಮೇಶ ಕುಡಚಿ, ನಾಗರಾಜ ಯಾದವ, ವಿವೇಕರಾವ್ ಪಾಟೀಲ, ಚನ್ನರಾಜ ಹಟ್ಟಿಹೊಳಿ ಮೊದಲಾದವರ ಹೆಸರಷ್ಟೆ ಕೇಂದ್ರಕ್ಕೆ ಕಳುಹಿಸಲ್ಪಟ್ಟಿದೆ ಎನ್ನಲಾಗಿದೆ.
ಹಾಗಂತೆ ಕಾಂಗ್ರೆಸ್ ರಾಜ್ಯದಿಂದ ಶಿಫಾರಸ್ಸಾದ ಹೆಸರನ್ನಷ್ಟೆ ಪರಿಗಣಿಸಬೇಕು, ಪರಿಗಣಿಸುತ್ತದೆ ಎನ್ನುವ ಯಾವ ಖಾತರಿಯೂ ಇಲ್ಲ. ದೆಹಲಿಯಲ್ಲೇ ಹೆಸರು ನಿರ್ಧರಿಸಿ ನೇರವಾಗಿ ಅಭ್ಯರ್ಥಿ ಕಣಕ್ಕಿಳಿಸಿದರೂ ಆಶ್ಚರ್ಯವಿಲ್ಲ.
ಬೆಳಗಾವಿ: ಕಾಂಗ್ರೆಸ್ ನಿಂದ ಶಿವಕಾಂತ ಸಿದ್ನಾಳಗೆ ಟಿಕೆಟ್ ಸಾಧ್ಯತೆ
(ಪ್ರಗತಿವಾಹಿನಿ ಸುದ್ದಿಗಳನ್ನು ಇತರರೊಂದಿಗೆ ಶೇರ್ ಮಾಡಿ)