ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ
ನಿಪ್ಪಾಣಿ ಬಳಿ ಭೀಕರ ಅಪಘಾತಕ್ಕೆ ಬಲಿಯಾದ ಕೊಲ್ಲಾಪುರದ ಕುಟುಂಬ ಬೆಳಗಾವಿಯಲ್ಲಿ ನಡೆಯಲಿದ್ದ ನಾಮಕರಣ ಕಾರ್ಯಕ್ರಮಕ್ಕೆಂದು ಬರುತ್ತಿತ್ತು.
ವೆಗನಾರ್ ಕಾರಿನಲ್ಲಿ ಬರುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಎಲ್ಲ 6 ಜನ ಸ್ಥಳದಲ್ಲೇ ಸಾವಿಗೀಡಾದರು.
ಅಪಘಾತದ ರಭಸಕ್ಕೆ ಲಾರಿ ಮತ್ತು ಕಾರು ಗುರುತು ಸಿಗದಷ್ಟು ನಜ್ಜು ಗುಜ್ಜಾಗಿವೆ.
ಮಗುವಿನ ನಾಮಕರಣಕ್ಕಾಗಿ ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ ಜಿಲ್ಲೆಯ ಮುರಗೋಡ ಗ್ರಾಮದಿಂದ ಬೆಳಗಾವಿ ನಗರಕ್ಕೆ ಹೊರಟಿದ್ದರು. ಬೆಳಗಾವಿಯಿಂದ ಕೊಲ್ಹಾಪುರದತ್ತ ಹೊರಟಿದ್ದ ಲಾರಿಗೆ ಡಿಕ್ಕಿಯಾಗಿದೆ. ದಿಲಾವರ ಜಮಾದಾರ (56), ರಹೀನಾ ಜಮಾದಾರ (55) ದಂಪತಿಗಳು, ಮೋಸಿನಖಾನ್ (37) ಹಾಗೂ ಆಫ್ರಿನ್ (33) ದಂಪತಿ ಹಾಗೂ ಐದು ವರ್ಷದ ಮಗು ಅಯಾನ್ ಹಾಗೂ ಜುನೀದಖಾನ್ ಜಮಾದಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಭಾನುವಾರ ಬೆಳಗಾವಿ ನಗರದಲ್ಲಿ ದಿಲಾವರ ಮೊಮ್ಮಗಳ ( ಪುತ್ರಿಯ ಮಗಳು) ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು.
ಕಾರ್ ಮತ್ತು ಲಾರಿ ನಡುವೆ ನಡೆದ ಅಪಘಾತದ ಬಳಿಕ ಅಪಘಾತ ಸ್ಥಳದಿಂದ 100 ಮೀಟರ್ ನಷ್ಟು ದೂರ ಹೋಗಿ ಲಾರಿ ಮತ್ತು ಕಾರ್ ಪಲ್ಟಿಯಾಗಿ ಬಿದ್ದಿವೆ. ಅಪಘಾತದ ರಭಸಕ್ಕೆ ಎರಡೂ ವಾಹನಗಳು ನುಜ್ಜುಗುಜ್ಜಾಗಿವೆ. ಲಾರಿಯು ಟೈಲ್ಸ್ ತೆಗೆದುಕೊಂಡು ಹೋಗುತ್ತಿದ್ದು, ಅಪಘಾತದ ತೀವ್ರತೆಯಿಂದಾಗಿ ಲಾರಿಯ ಎಲ್ಲ ಭಾಗಗಳು ಬಿಡಿ ಬಿಡಿಯಾಗಿ ಎಲ್ಲೆಂದರಲ್ಲಿ ಬಿದ್ದುಕೊಂಡಿವೆ. ಅಪಘಾತದಿಂದಾರಿ ಲಾರಿ ಮತ್ತು ಕಾರ್ ಎಂಜಿನ್ ಸುಟ್ಟು ಭಸ್ಮವಾಗಿವೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಎಸ್ಪಿ ಸುಧೀರಕುಮಾರ ರೆಡ್ಡಿ, ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಅಪಘಾತದಲ್ಲಿ ಲಾರಿ ಚಾಲಕ ತೀವ್ರವಾಗಿ ಗಾಯಗೊಂಡಿದ್ದು, ನಿಪ್ಪಾಣಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ದೃಶ್ಯಾವಳಿ ದಾಬಾವೊಂದರ ಸಿಸಿ ಕ್ಯಾಮರಾದಲ್ಲಿ ದಾಖಲಾಗಿವೆ.
ಮೇಲಿಂದ ಮೇಲೆ ಸ್ತವನಿಧಿ ಘಾಟ್ ಬಳಿ ಅಪಘಾತ ನಡೆಯುತ್ತಲೇ ಇರುತ್ತವೆ. ಅಪಘಾತ ತಪ್ಪಿಸಲು ಇಲ್ಲಿ ಸೂಕ್ರ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ