ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಾನಪದ ಸಂಸ್ಕೃತಿಯಲ್ಲಿರುವ ಸಂಪ್ರದಾಯಗಳು, ಆಚಾರ-ವಿಚಾರಗಳು ನಮ್ಮ ಬದುಕಿನಲ್ಲಿ ಮೌಲ್ಯಗಳನ್ನು ತುಂಬುತ್ತವೆ. ಬುದ್ಧಿ ಮನಸ್ಸುಗಳು ವಿಕಾಸವಾದಂತೆಲ್ಲಾ ಜಾನಪದ ಕಲೆಗಳು ಹೊರಹೊಮ್ಮುತ್ತವೆ. ಮನುಷ್ಯನ ನಾಲಿಗೆಯ ಮೇಲೆ ಮಾತು ಕುಣಿದಾಗಲೇ ಜಾನಪದ ಸಾಹಿತ್ಯ ಉದ್ಭವವಾಗುತ್ತದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ಬಾಳನಗೌಡ ಪಾಟೀಲ ಅಭಿಪ್ರಾಯಪಟ್ಟರು.
ಬೆಳಗಾವಿಯ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಕನ್ನಡ ಜಾನಪದ ಪರಿಷತ್ ಬೆಳಗಾವಿ ಜಿಲ್ಲಾ ಘಟಕ ಹಮ್ಮಿಕೊಂಡ ಸನ್ಮಾನ ಹಾಗೂ ಜಾನಪದ ಜೋಗುಳ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ, ಸಂಸ್ಕೃತಿಯನ್ನು ಮುಂದಿನ ಯುವಪೀಳಿಗೆಗೆ ದೇಶೀಯ ಶೈಲಿಯಲ್ಲಿ ಜೀರ್ಣೋದ್ಧಾರ ಮಾಡುವ ಅವಶ್ಯಕತೆ ಇಂದು ಇದೆ. ಅದನ್ನು ಭವಿಷ್ಯದ ಹೊಸ ಪೀಳಿಗೆಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಭಾರತೀಯ ಸಂಸ್ಕೃತಿ ಹೊಂದಿದ ನಮ್ಮೆಲ್ಲರ ಮೇಲಿದೆ. ಇದು ನಮ್ಮ ಆದ್ಯ ಕರ್ತವ್ಯವಾಗಿರುತ್ತದೆ ಎಂದರು.
ತೊಟ್ಟಿಲು ತೂಗುವ ಮೂಲಕ ಮಗುವಿನ ನಾಮಕರಣ ಮಾಡುವ ಹುಮ್ಮಸ್ಸಿನ ಕಾರ್ಯಕ್ರಮ ಉದ್ಘಾಟಿಸಿ ಜಾನಪದ ವಿದ್ವಾಂಸ ಪ್ರೊ.ಕೆ.ಎಸ್.ಕೌಜಲಗಿ, ನಮ್ಮ ಬದುಕಿನ ಎಲ್ಲ ರೀತಿ-ನೀತಿಗಳು ಜಾನಪದ ಸಾಹಿತ್ಯದಲ್ಲಿ ವ್ಯಕ್ತವಾಗಿವೆ. ಅಲ್ಲದೆ ಶ್ರಮಜೀವಿಗಳು ತಮ್ಮ ಬದುಕಿನ ಆಗುಹೋಗುಗಳನ್ನು ಸುಖ-ದುಃಖಗಳನ್ನು, ಕನಸು-ಕಲ್ಪನೆಗಳನ್ನು ಹಾಡು, ನೃತ್ಯ ಹಾಗೂ ನಾಟಕ, ಆಟ ಮೊದಲಾದವುಗಳ ಮುಖಾಂತರ ಅಭಿವ್ಯಕ್ತಿಪಡಿಸಿದ್ದಾರೆ. ಸ್ವಾವಲಂಬಿ ಬದುಕನ್ನು ಬದುಕಲು ಮತ್ತು ನೈತಿಕತೆಯಿಂದ ಬಾಳಲು, ಭಾವೈಕ್ಯತೆಯಿಂದ ಕೂಡಲು ಜಾನಪದ ಸಾಹಿತ್ಯ ಪ್ರೇರಣೆ ನೀಡುತ್ತದೆ ಎಂದರು.
ಅತಿಥಿ ಜಾನಪದ ಸಾಹಿತಿ ಶಿವಾನಂದ ಮಂಗಾನವರ, ಜಾನಪದ ಸಂಪ್ರದಾಯ ಒಂದು ಜನಸಮುದಾಯದ ಸಮಷ್ಠಿ ಸೃಷ್ಟಿ, ಸಾಮಾಜಿಕ ಜೀವನದ ಸಂಕೇತ, ರಾಷ್ಟ್ರೀಯ ಸಂಸ್ಕೃತಿಯ ತಾಯಿಬೇರು. ಅದು ಜನಸಾಮಾನ್ಯರ ಶೃತಿಯೂ ಹೌದು, ಸ್ಮೃತಿಯೂ ಹೌದು. ಭಾರತೀಯತ್ವದ ಅಥವಾ ದೇಶೀಯತೆಯ ರಕ್ಷಣೆಗಾಗಿ ಜಾನಪದ ಸಂಪ್ರದಾಯದ ಜೀರ್ಣೋದ್ಧಾರದ ಕಾರ್ಯ ನಡೆಯಬೇಕಾಗಿದೆ. ಜಾನಪದ ಕಲಾವಿದರು ಬೆಳಕಿನ ಕಂಬಗಳಾಗಿ ರಾರಾಜಿಸಬೇಕಾಗಿದೆ ಎಂದರು.
ಜಾನಪದ ಸಾಹಿತಿ, ಆರಕ್ಷಕ ನಿರೀಕ್ಷಕ ಜ್ಯೋತಿರ್ಲಿಂಗ ಹೊನಕಟ್ಟಿ, ಜಾನಪದ ತತ್ವದ ಮಾರ್ಮಿಕ ಹಾಡುಗಳನ್ನು ಹಾಡುತ್ತಾ ಸಾಹಿತ್ಯವಾಗಲಿ ಕಲೆಯಾಗಲಿ ಯಾವ ಜೀವನ ವ್ಯಾಪಾರವೇ ಆಗಲಿ ದಿಕ್ಕು ತಪ್ಪಿದಾಗ ಜಾನಪದ ಸಂಪ್ರದಾಯ ದೃವತಾರೆಯಾಗುತ್ತದೆ. ಜಾನಪದ ತಾಯಿ ರೆಂಬೆಯ ಮೇಲೆ ಅನ್ಯ ವೃಕ್ಷದ ರೆಂಬೆಯನ್ನು ಕಸಿಕಟ್ಟಿದಾಗ ಮಾತ್ರ ಫಲ ಯಶಸ್ವಿಯಾಗುತ್ತದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಎಮ್.ಆರ್. ಉಳ್ಳಾಗಡ್ಡಿ ಅಧ್ಯಕ್ಷತೆವಹಿಸಿ, ಸಾಹಿತ್ಯವಾಗಲಿ ಕಲೆಯಾಗಲಿ ಜಾನಪದ ಸಂಪ್ರದಾಯದ ಕುಟುಂಬ. ಅದು ಬಹುದೊಡ್ಡದು. ಅಷ್ಟೆ ವ್ಯಾಪಕವಾದುದು. ಅದರ ಬೇರುಗಳು ಪ್ರಾಚೀನತೆಯ ಗರ್ಭಾಂತರಾಳದಲ್ಲಿ ಹುದುಗಿಕೊಂಡಿರುವಂತೆಯೇ ಅದರ ಕೊಂಬೆಗಳು ಸಂಕೀರ್ಣ ಸ್ವರೂಪದ ಆಧುನಿಕತೆಯಲ್ಲಿ ಲಯವಾಗಿವೆ. ಅದು ಪ್ರವೇಶಿಸದ ಜೀವನ ವ್ಯಾಪಾರವೇ ಇಲ್ಲ ಎಂದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ಬೆಳಗಾವಿ ವತಿಯಿಂದ ಕನ್ನಡ ಜಾನಪದ ಪರಿಷತ್ತಿನ ಉತ್ತರ ಕರ್ನಾಟಕದ ಸಂಚಾಲಕರಾಗಿ ನೇಮಕಗೊಂಡ ಪ್ರೊ. ಕೆ.ಎಸ್. ಕೌಜಲಗಿ, ಬಾಳನಗೌಡ ಪಾಟೀಲ, ಶಿವಾನಂದ ಮಂಗಾನವರ, ಜ್ಯೊತಿರ್ಲೀಂಗ ಹೊನಕಟ್ಟಿ, ಮೋಹನ ಗುಂಡ್ಲುರ, ಪ್ರೊ.ಎಮ್.ಆರ್.ಉಳ್ಳೇಗಡ್ಡಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಯೋತಿ ಭಾವಿಕಟ್ಟಿ, ಚಂದ್ರಶೇಖರ ಕೊಪ್ಪದ, ಜಗಾಪೂರ, ರಾಮಲಿಂಗ ಕಾಡಪ್ಪನವರ, ಶಿವಾನಂದ ಸಂಜೀವಗೋಳ, ಶಂಕರ ಗುಡಗನಟ್ಟಿ, ಶಂಕರ ಕುಂದ್ರಾಳ ಇತರರು ಇದ್ದರು. ಪ್ರಾರಂಭದಲ್ಲಿ ಗಾಯನಾ ಹೊನಕಟ್ಟಿ ಪ್ರಾರ್ಥನೆ ಹಾಡಿದರು. ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮೋಹನ ಜಿ. ಗುಂಡ್ಲೂರ ಸ್ವಾಗತಿಸಿದರು.ಆರ್. ಪಿ. ಪಾಟೀಲ ವಂದಿಸಿದರು. ಸುನಂದಾ ಎಮ್ಮಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ