ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಲೋಕಸಭೆ ಚುನಾವಣೆ ಪ್ರಚಾರಾರ್ಥ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ (ಏಪ್ರಿಲ್ 19) ಗೋಕಾಕ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ.
ರಾತ್ರಿ 8 ಗಂಟೆಗೆ ಅವರು ನ್ಯೂ ಇಂಗ್ಲೀಷ್ ಸ್ಕೂಲ್ ಮೈದಾನದಲ್ಲಿ ಬಹಿರಂಗ ಭಾಷಣ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ. ಎಸ್. ಸಾಧುನವರ, ಶಾಸಕರಾದ ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಬಾಳಕರ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಳ್ಳುವರು ಎಂದೂ ಸತೀಶ್ ತಿಳಿಸಿದ್ದಾರೆ.
ರಮೇಶ್ ಔಟ್
ವಿಶೇಷವೆಂದರೆ ಸತೀಶ್ ಜಾರಕಿಹೊಳಿ ಹೊರಡಿಸಿರುವ ಈ ಪ್ರಕಟಣೆಯಲ್ಲಿ ರಮೇಶ ಜಾರಕಿಹೊಳಿ ಹೆಸರು ಹಾಕಿಲ್ಲ. ಮಹಾಂತೇಶ ಕೌಜಲಗಿ, ಲಕ್ಷ್ಮಿ ಹೆಬ್ಬಾಳಕರ, ಲಖನ್ ಜಾರಕಿಹೊಳಿ ಪಾಲ್ಗೊಳ್ಳಲಿದ್ದಾರೆಂದು ಹೇಳಿರುವ ಅವರು ರಮೇಶ ಹೆಸರನ್ನು ಕೈಬಿಟ್ಟಿದ್ದಾರೆ.
ಈ ಹಿಂದೆ ಹಲವು ತಿಂಗಳಿನಿಂದ ರಮೇಶ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರೂ ಅವರ ಹೆಸರನ್ನು ಕೈಬಿಡುತ್ತಿರಲಿಲ್ಲ. ಆದರೆ ಇದೀಗ ಅವರ ಮೇಲಿದ್ದ ಎಲ್ಲ ನಿರೀಕ್ಷೆಗಳೂ ಮುಗಿದಂತಾಗಿದೆ. ರಮೇಶ ಕೆಲವು ಕಡೆ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಸತೀಶ್ ನಿನ್ನೆ ಹೇಳಿದ್ದರು. ಅಲ್ಲದೆ ಅವರ ವಿರುದ್ಧ ಪಕ್ಷದ ಹೈಕಮಾಂಡ್ ಗೆ ಲಿಖಿತವಾಗಿ ದೂರು ನೀಡಲಾಗಿದೆ ಎಂದು ತಿಳಿಸಿದ್ದರು.
ಈ ಎಲ್ಲ ಬೆಳವಣಿಗೆಗಳು ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಧೃವೀಕರಣವಾಗಲಿದೆ ಎನ್ನುವ ಸ್ಪಷ್ಟ ಸಂದೇಶ ನೀಡಿವೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲಾ ಗ್ರುಪ್ ಗಳಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ