Latest

ನಿಯತ್ತು ಇಲ್ಲದ ಜನ ಅಮೇಥಿಯಿಂದ ಗೆದ್ದು ಹೋಗಿ ಜನರಿಗೆ ಮೋಸ ಮಾಡಿದರು

ಪ್ರಗತಿವಾಹಿನಿ ಸುದ್ದಿ, ಅಮೇಥಿ :

ನಿಯತ್ತು ಇಲ್ಲದ ಜನ ಅಮೇಥಿಯಿಂದ ಗೆದ್ದು ಹೋಗಿ ಜನರಿಗೆ ಮೋಸ ಮಾಡಿದರು. ನಾವು ಅಮೇಥಿಯಲ್ಲಿ ಗೆದ್ದಿರಲಿಕ್ಕಿಲ್ಲ, ಆದರೆ ಅಮೇಥಿಯ ಜನರ ಮನಸ್ಸನ್ನು ಗೆದ್ದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಉತ್ತರ ಪ್ರದೇಶದ ಅಮೇಥಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ಸಮಾವೇಶ ನಡೆಸಿದರು. 2014ರ ಬಳಿಕ ಅಮೇಥಿಗೆ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಭೇಟಿ ನೀಡಿದ್ದಾರೆ. ‘2014ರ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರನ್ನು ನೀವು ಅಮೇಥಿಯಲ್ಲಿ ಸೋಲಿಸಿದಿರಿ. ನಾವು ಕ್ಷೇತ್ರದಲ್ಲಿ ಗೆಲುವು ಸಾಧಿಸಿಲ್ಲ. ಆದರೆ, ನಿಮ್ಮ ಹೃದಯವನ್ನು ಗೆದ್ದಿದ್ದೇವೆ’ ಎಂದು ನರೇಂದ್ರ ಮೋದಿ ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ತವರು ಕ್ಷೇತ್ರ ಅಮೇಥಿ. ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ನರೇಂದ್ರ ಮೋದಿ ಅವರು ಚಾಲನೆ ನೀಡಿದರು. ಮತಗಳನ್ನು ಪಡೆದ ಬಳಿಕ ಬಡವರನ್ನು ಮರೆತು ಬಿಡುವುದು ಕೆಲವು ಕುಟುಂಬಗಳ ಸಾಮಾನ್ಯ ಪ್ರಕ್ರಿಯೆ. ಆದರೆ, ಬಡವರನ್ನು ಮರೆತ ಅವರು ಬಡವರ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
‘ಜಗತ್ತಿನಲ್ಲಿಯೇ ಅತ್ಯಾಧುನಿಕ ಬಂದೂಕು ಅಮೇಥಿಯಲ್ಲಿ ತಯಾರಾಗಲಿದೆ. ನಮ್ಮ ಯೋಧರು ಮೇಡ್ ಇನ್ ಅಮೇಥಿ ಬಂದೂಕು ಹಿಡಿದು ಉಗ್ರರ ವಿರುದ್ಧ, ನಕ್ಸಲರ ವಿರುದ್ಧ ಹೊರಾಡಲಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಅಮೇಥಿಜನ ದೇಶದಲ್ಲಿ ಹೊಸ ಇತಿಹಾಸವನ್ನು ನಿರ್ಮಾಣ ಮಾಡಲಿದ್ದೀರಿ. ಅಮೇಥಿಯ ಜನರ ತೀರ್ಪನ್ನು ಇಡೀ ದೇಶವೇ ನೋಡಲಿದೆ. ನಿಯತ್ತು ಇಲ್ಲದ ಜನರು ಅಮೇಥಿಗೆ ಏನು ದ್ರೋಹ ಮಾಡಿದರು ಎಂಬುದು ನಿಮಗೆ ಬಿಟ್ಟು ಬೇರೆ ಯಾರಿಗೂ ಉತ್ತಮವಾಗಿ ಗೊತ್ತಿರಲು ಸಾಧ್ಯವಿಲ್ಲ ಎಂದರು ಮೋದಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button