Kannada NewsKarnataka NewsLatest

*ಪುತ್ರಿಯರ ಕೆಎಎಸ್ ಹುದ್ದೆಗಾಗಿ ₹2 ಕೋಟಿ ಡೀಲ್*: *ಕೆಪಿಎಸ್​ಸಿ ಹಗರಣದ ಇಡಿ ಚಾರ್ಜ್‌ಶೀಟ್‌ನಲ್ಲಿ ಮತ್ತೊಬ್ಬ ಐಪಿಎಸ್ ಅಧಿಕಾರಿ ಹೆಸರು ಬಹಿರಂಗ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಜಾರಿ ನಿರ್ದೇಶನಾಲಯ (ED) ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಹೆಸರು ಉಲ್ಲೇಖವಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಅವರ ಹೆಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಇಬ್ಬರು ಪುತ್ರಿಯರಿಗೆ ಕೆಎಎಸ್ ಹುದ್ದೆ ಕೊಡಿಸಲು ಚಂದ್ರಕಾಂತ್ ಅವರು ಎರಡು ಕೋಟಿ ರೂಪಾಯಿ ನೀಡಿದ್ದರು ಎಂಬ ಅಂಶ ಚಾರ್ಜ್‌ಶೀಟ್‌ನಲ್ಲಿ ಪ್ರಸ್ತಾಪವಾಗಿದೆ.

ಈ ಪ್ರಕರಣದಲ್ಲಿ ಆರೋಪಿ ಬಸವರಾಜ್ ಕನ್ನಾಳೆ ನೀಡಿರುವ ಹೇಳಿಕೆಯ ಆಧಾರದಲ್ಲಿ ಚಂದ್ರಕಾಂತ್ ಅವರ ಹೆಸರು ಉಲ್ಲೇಖವಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಕನ್ನಾಳೆಯಿಂದ ಇಡಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದರು.

ಚಂದ್ರಕಾಂತ್ ಅವರ ಪುತ್ರಿಯರಾದ ತೇಜಸ್ವಿನಿ ಮತ್ತು ಪಲ್ಲವಿ ಕೆಎಎಸ್ ಪರೀಕ್ಷೆ ಬರೆದಿದ್ದರು. ಈ ಪೈಕಿ ಒಬ್ಬರು ಸಂದರ್ಶನಕ್ಕೆ ಅರ್ಹತೆ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಹತೆ ಗಿಟ್ಟಿಸಿಕೊಳ್ಳಲು ಎರಡು ಕೋಟಿ ರೂಪಾಯಿ ನೀಡಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಜ್ಞಾನೇಂದ್ರ ಕುಮಾರ್ ಸೂಚನೆಯಂತೆ ತಾನು ಎರಡು ಕೋಟಿ ರೂಪಾಯಿ ಹಣ ಪಡೆದಿದ್ದೆ. ಚಂದ್ರಕಾಂತ್ ಅವರ ಮನೆ ಸಮೀಪಕ್ಕೆ ತೆರಳಿ ಹಣ ಪಡೆಯುವಂತೆ ಜ್ಞಾನೇಂದ್ರ ಕುಮಾರ್ ತಿಳಿಸಿದ್ದರು. ಅದರಂತೆ ಎರಡು ಕೋಟಿ ರೂಪಾಯಿ ಪಡೆದು ಜ್ಞಾನೇಂದ್ರ ಕುಮಾರ್ ಅವರಿಗೆ ನೀಡಿದ್ದಾಗಿ ಕನ್ನಾಳೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

Related Articles

Back to top button