*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಶಿಸ್ತು ಕಡಿಮೆಯಾಗುತ್ತಿದ್ದು, ಇದೇ ನಡವಳಿಕೆ ಮುಂದುವರೆದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ಅವರು ಎಚ್ಚರಿಕೆ ನೀಡಿದರು.
ದೇವರ ಜೀವನಹಳ್ಳಿ ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಶಿಸ್ತು ಕಡಿಮೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇಂದು ಶಿಸ್ತು ಕೇವಲ ಮಿಲಿಟರಿ ಹಾಗೂ ಪೊಲೀಸ್ ಇಲಾಖೆಯಲ್ಲಿ ಮಾತ್ರ ಉಳಿದಿದೆ. ಈಗ ಪೊಲೀಸರು ಶಿಸ್ತು ಮರೆತರೆ ಅದನ್ನು ಸಹಿಸಲು ಆಗದು.
ಕಿರಿಯ ಅಧಿಕಾರಿ ಹಾಗೂ ಸಿಬ್ಬಂದಿಯಲ್ಲಿ ಶಿಸ್ತು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದರು.
ವರ್ಷದ ಹಿಂದೆ ನಾನೇ ಶಂಕುಸ್ಥಾಪನೆ ನೆರವೇರಿಸಿದ್ದ ಡಿ.ಜಿ. ಹಳ್ಳಿ ಪೊಲೀಸ್ ಠಾಣೆಯ ಕಟ್ಟಡವನ್ನು ಇಂದು ನಾನೇ ಉದ್ಘಾಟಿಸುತ್ತಿರುವುದು ಸಂತಸ ನೀಡಿದೆ.
ಮೂರು ಕೋಟಿ ರು. ನಲ್ಲಿ ಪೊಲೀಸ್ ಠಾಣೆ, ಉರ್ದು ಶಾಲೆ ಹಾಗೂ ಒಳಚರಂಡಿ ನಿರ್ಮಾಣ ಮಾಡಲಾಗಿದೆ. ಮಾದರಿ ಪೊಲೀಸ್ ಕಟ್ಟಡದಂತೆ ಕೆಲಸದಲ್ಲಿಯೂ ಮಾದರಿಯಾಗುವಂತೆ ಇಲ್ಲಿನ ಸಿಬ್ಬಂದಿಗೆ ಕಿವಿಮಾತು ಹೇಳಿದರು.
ಇಲ್ಲಿನ ಟ್ಯಾನರಿ ರಸ್ತೆ , ದಿಣ್ಣೂರು ರಸ್ತೆ ಅಗಲೀಕರಣ, ಸ್ಯಾನಿಟರಿ ಲೈನ್ ರಿಪೇರಿ ಮಾಡುವುದು, ಸೇರಿ ಹಲವು ಬೇಡಿಕೆ ಇಟ್ಟಿದ್ದು, ಈ ಎಲ್ಲವನ್ನು ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇತ್ತೀಚೆಗೆ ನಿಧನರಾದ ಏಳುಮಲೈ , ಅಂಬರೀಶ್, ಜಾಫರ್ ಷರೀಫ್, ಅನಂತಕುಮಾರ್ ಅವರಿಗೆ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
——————
ಕಾರ್ಯಕ್ರಮದ ಬಳಿಕ ಹತ್ತಿರದಲ್ಲೇ ಇದ್ದ ಇಂದಿರಾ ಕ್ಯಾಂಟೀನ್ಗೆ ತೆರಳಿದ ಪರಮೇಶ್ವರ್ ಅಲ್ಲಿಯೇ ಊಟ ಮಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ