ಪ್ರಗತಿವಾಹಿನಿ ಸುದ್ದಿ, ರಾಮದುರ್ಗ
ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ತಮ್ಮ ಗುರಿಯತ್ತ ಗಮನ ಹರಿಸಬೇಕು ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಕರೆ ನೀಡಿದ್ದಾರೆ.
ತಾಲೂಕಿನ ಹುಲಕುಂದ ರಾಮೇಶ್ವರ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಮಕ್ಕಳು ತಮ್ಮ ತಂದೆ ತಾಯಿಗೆ ಗೌರವ ನೀಡಬೇಕು. ಯಾವುದೇ ಕಾರಣದಿಂದ ಅವರನ್ನು ನಿರ್ಲಕ್ಷಿಸಬಾರದು. ಅವರನ್ನು ವೃದ್ದಾಶ್ರಮಕ್ಕೆ ಕಳಿಸುವಂತಹ ನೀಚ ಕೆಲಸಕ್ಕೆ ಇಳಿಯಬಾರದು ಎಂದ ಅವರು, ಹುಲಕುಂದದಲ್ಲಿ ಪದವಿ ಕಾಲೇಜು ಆರಂಭಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಇನ್ನೋರ್ವ ಅತಿಥಿ ಉದ್ಯಮಿ ಪಾಂಡುರಂಗ ರಡ್ಡಿ, ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಜೀವನದ ಅತ್ಯಂತ ಮಹತ್ವದ ಘಟ್ಟಗಳು. ಎಲ್ಲರೂ ನಡೆದ ದಾರಿಯಲ್ಲೇ ನಡೆಯುವ ಬದಲು ವಿದ್ಯಾರ್ಥಿಗಳು ತಮ್ಮ ಆಸಕ್ತಿ ನೋಡಿ ಆಯ್ಕೆ ಮಾಡಿಕೊಳ್ಳಬೇಕು. ಪ್ರಕೃತಿಯೇ ಒಂದು ದೊಡ್ಡ ವಿಶ್ವವಿದ್ಯಾಲಯವಾಗಿದ್ದು, ಜೀವನ ಪೂರ್ತಿ ನಾವು ವಿದ್ಯಾರ್ಥಿಗಳಾಗಿದ್ದರೆ ಮಾತ್ರ ನಿರಂತರ ಕಲಿಕೆ ಸಾಧ್ಯ ಎಂದರು.
ತಂದೆ ತಾಯಿ ಒಳ್ಳೆಯ ಸಂಸ್ಕಾರ ನೀಡುತ್ತಾರೆ. ಅದನ್ನು ಅರ್ಥಮಾಡಿಕೊಂಡು ಅಳವಡಿಸಿಕೊಂಡಾಗ ಮಾತ್ರ ಉತ್ತಮ ಸಾಧಕರಾಗಲು ಸಾಧ್ಯ ಎಂದು ಅವರು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಸಹ ಅತಿಥಿಯಾಗಿ ಆಗಮಿಸಿದ್ದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ.ಎಚ್.ಮುಂಬರಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಇದೇ ವೇಳೆ, ಶಾಲೆಯ ಲೈಬ್ರರಿಗೆ ಕಟ್ಟಡ ಸಾಮಗ್ರಿ ದೇಣಿಗೆ ನೀಡಿದ ಕಮಲದಿನ್ನಿಯ ರಂಗಪ್ಪ ಹನುಮಂತಪ್ಪ ರಡ್ಡಿ ಹಾಗೂ ಲಕ್ಷ್ಮಿಬಾಯಿ ರಂಗಪ್ಪ ರಡ್ಡಿ, ಚಿಂಚಕಂಡಿ ಶ್ರೀಪತಿ ಗೌಡ ಪಾಟೀಲ ದಂಪತಿ, ಬಾಗಲಕೋಟೆಯ ಅಪ್ಪಣ್ಣ ಮುಂಬರಡ್ಡಿ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪುರಸ್ಕರಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ