ಶಿಕ್ಷಕರ ಆಕ್ರೋಶ ತಣಿಸಲು ದಾರಿ ಹುಡುಕುತ್ತಿರುವ ಅಧಿಕಾರಿಗಳು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಶಿಕ್ಷಕರ ವರ್ಗಾವಣೆ ಸಂಬಂಧ ಸೋಮವಾರ ಪ್ರಗತಿವಾಹಿನಿ ಪ್ರಕಟಿಸಿರುವ ವರದಿ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಎದ್ದು ಕುಳಿತಿರುವ ಅಧಿಕಾರಿಗಳು, ಲೋಕಸಭಾ ಚುನಾವಣೆ ನೀತಿ ಸಂಹಿತೆ ಆರಂಭಕ್ಕೆ ಮುನ್ನವೇ ವರ್ಗಾವಣೆ ಅಧಿಸೂಚನೆ ಹೊರಡಿಸುವುದಾಗಿ ಹೇಳಿದ್ದಾರೆ.
ಆದರೆ, ಕಳೆದ 3 ವರ್ಷದಿಂದ ಶಿಕ್ಷಕರ ವರ್ಗಾವಣೆ ಮಾಡದೆ ಶಿಕ್ಷಕ ಸಮುದಾಯದ ಆಕ್ರೋಶಕ್ಕೆ ತುತ್ತಾಗಿರುವ ಸರಕಾರ, ಈಗಲೂ ನೆಪಕ್ಕೆ ಮಾತ್ರ ಪ್ರಕ್ರಿಯೆ ಆರಂಭಿಸುವ ಮೂಲಕ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ತಂತ್ರವನ್ನಷ್ಟೇ ಮಾಡುತ್ತಿದೆ.
ಲೋಕಸಭಾ ಚುನಾವಣೆ ಮಾರ್ಚ್ ತಿಂಗಳಲ್ಲಿ ಘೋಷಣೆಯಾಗಲಿದೆ. ಈಗಾಗಲೆ ಚುನಾವಣೆ ಆಯೋಗ ಎಲ್ಲ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆಯ ಕೆಲಸಗಳಲ್ಲಿ ಶಿಕ್ಷಕರನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಆಯೋಗ, ಈ ಹಂತದಲ್ಲಿ ವರ್ಗಾವಣೆ ಪ್ರಕ್ರಿಯೆಗೆ ಅನುಮತಿ ನೀಡುವುದು ಅನುಮಾನ. ಚುನಾವಣೆ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಕ್ರಮಗಳನ್ನೂ ನಡೆಸಬೇಕಿರುವುದರಿಂದ ವರ್ಗಾವಣೆ ಪ್ರಕ್ರಿಯೆ ಕಷ್ಟ. ಆಯೋಗದ ಅನುಮತಿ ಪಡೆಯದೆ ಸರಕಾರ ವರ್ಗಾವಣೆ ಅಧಿಸೂಚನೆ ಹೊರಡಿಸಿದರೂ ಆಯೋಗ ತಡೆಹಿಡಿಯಬಹುದು.
ಈ ವರ್ಷ ಸರಕಾರಕ್ಕೆ ವರ್ಗಾವಣೆ ಮಾಡುವ ಮನಸ್ಸಿದ್ದಿದ್ದರೆ ಡಿಸೆಂಬರ್ ಅಥವಾ ಜನೆವರಿ ತಿಂಗಳಲ್ಲೇ ಪ್ರಕ್ರಿಯೆ ಆರಂಭಿಸಬಹುದಿತ್ತು. ರಾಜಕೀಯ ಗೊಂದಲ ಹೊರತುಪಡಿಸಿ ವರ್ಗಾವಣೆ ಪ್ರಕ್ರಿಯೆ ಮಾಡದಿರಲು ಯಾವುದೇ ಕಾರಣವಿರಲಿಲ್ಲ. ಆದರೆ ಇಲ್ಲಿಯವರೆಗೂ ಈ ಬಗ್ಗೆ ಚಕಾರವೆತ್ತದ ಅಧಿಕಾರಿಗಳು, ಪ್ರಗತಿವಾಹಿನಿ ಸೋಮವಾರ ವಿಶೇಷ ವರಗಿ ಪ್ರಕಟಿಸಿದ ತಕ್ಷಣ ವರ್ಗಾವಣೆ ಪ್ರಕ್ರಿಯೆ ಆರಂಬಿಸಲು ತರಾತುರಿಯ ಕ್ರಮ ಕೈಗೊಂಡಿದ್ದಾರೆ. ಎರಡು ಹಂತದಲ್ಲಿ ವರ್ಗಾವಣೆ ನಡೆಸುವುದಾಗಿ ಹೇಳಿದ್ದರೂ, ಎರಡು ಹಂತದಲ್ಲಿ ವರ್ಗಾವಣೆ ನಡೆಸುವ ಕಾರಣ ಮತ್ತು ಈ ಹಂತಗಳನ್ನು ನಿರ್ಧರಿಸುವ ಅಂಶಗಳ್ಯಾವುವು? ಎನ್ನುವ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಈ ಮಧ್ಯೆ ರಾಜ್ಯದಲ್ಲಿ ಮತ್ತೆ ರಾಜಕೀಯ ಗೊಂದಲ ಆರಂಭವಾಗಿದ್ದು, 8ರಂದು ನಡೆಯಲಿರುವ ಬಜೆಟ್ ಅಧಿವೇಶನದ ನಂತರವೇ ಸ್ಪಷ್ಟ ಚಿತ್ರಣ ಸಿಗಲಿದೆ.
ಈಗಾಗಲೆ 6 ಬಾರಿ ವರ್ಗಾವಣೆ ಪ್ರಕ್ರಿಯೆ ಮುಂದಕ್ಕೆ ಹಾಕಿರುವ ಸರಕಾರ, ಈಗ 7ನೇ ಬಾರಿ ಆರಂಭಿಸಿ ಮತ್ತು ಮುಂದೂಡಲು ಸಿದ್ಧತೆ ಮಾಡಿಕೊಂಡಂತೆ ತೋರುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ