ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಕರ್ನಾಟಕ ರಾಜ್ಯದ ರೈತರ ಸಾಲಮನ್ನಾ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿಕೆ ರಾಜ್ಯದ ರೈತರೂ ಸೇರಿದಂತೆ ಇಡೀ ದೇಶದ ಜನರ ದಾರಿ ತಪ್ಪಿಸುವಂತಿದೆ. ಪ್ರಧಾನಿಗಳ ಇಂತಹ ಹೇಳಿಕೆ ಅತ್ಯಂತ ದುರದೃಷ್ಟಕರ ಹಾಗೂ ದೇಶದ ದೌರ್ಭಾಗ್ಯ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ.
“ರಾಜ್ಯದ ರೈತರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಸಾಲ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ಇದು ರೈತರ ಬಗ್ಗೆ ಮೈತ್ರಿ ಸರ್ಕಾರ ಹೊಂದಿರುವ ಬದ್ಧತೆಯಾಗಿದೆ. ಸಾಲ ಮನ್ನಾ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅಲ್ಪ ಸಮಯದಲ್ಲೇ ಗಣನೀಯ ಪ್ರಗತಿ ಸಾಧಿಸಲಾಗಿದೆ. ಅದಾಗ್ಯೂ ಪ್ರಧಾನಿಯವರು ವಾಸ್ತವದ ಅರಿವಿಲ್ಲದೆ, ಸಾಲ ಮನ್ನಾ ಯೋಜನೆಯ ಬಗ್ಗೆ ತಪ್ಪಾಗಿ ಅರ್ಥೈಸಿಕೊಂಡು ರಾಜ್ಯ ಸರ್ಕಾರ ರೈತರ ಮೇಲೆ ಮಾಡಿರುವ ‘ಕ್ರೂರ ವ್ಯಂಗ್ಯ’ ಎಂದು ಲೇವಡಿ ಮಾಡಿರುವುದಲ್ಲದೆ, ದೇಶದ ಜನತೆಯನ್ನು ತಪ್ಪುದಾರಿಗೆಳೆಯುತ್ತಿರುವುದು ಅತ್ಯಂತ ಬೇಸರದ ಸಂಗತಿ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
1. ಸಾಲ ಮನ್ನಾ ಯೋಜನೆ ತೆರೆದ ಪುಸ್ತಕದಂತಿದೆ. ಮೊದಲ ಬಾರಿಗೆ ನಮ್ಮ ರಾಜ್ಯ ಸಾಲ ಮನ್ನಾ ಯೋಜನೆಯ ಮಾಹಿತಿಗಳನ್ನು ಎಲ್ಲರಿಗೂ ಆನ್ ಲೈನ್ ನಲ್ಲಿ ಮುಕ್ತವಾಗಿ ಒದಗಿಸಲಾಗಿದೆ. ಯಾವ ರಾಜ್ಯದಲ್ಲೂ ಈವರೆಗೆ ಈ ವ್ಯವಸ್ಥೆ ರೂಪಿಸಿದ ನಿದರ್ಶನವಿಲ್ಲ.
2. ಕರ್ನಾಟಕ ಸರ್ಕಾರ ಸಾರ್ವಜನಿಕರ ಮತ್ತು ತೆರಿಗೆದಾರರ ಹಣ ಪೋಲಾಗದಂತೆ, ಅತಿ ಎಚ್ಚರಿಕೆಯಿಂದ ಈ ಯೋಜನೆಯನ್ನು ಜಾರಿಗೊಳಿಸಿ ಅರ್ಹ ರೈತರಿಗೇ ಹಣ ಸೇರುವಂತೆ ಮಾಡುತ್ತಿದೆ.
3. ಪ್ರತಿಯೊಬ್ಬ ಅರ್ಹ ರೈತನಿಗೆ ಈ ಯೋಜನೆಯ ಲಾಭ ದೊರೆಯುತ್ತದೆ ಎನ್ನುವುದಕ್ಕೆ ಖಾತ್ರಿ ಇದೆ.
4. ಎಲ್ಲ ಮಧ್ಯವರ್ತಿಗಳು, ವಿಶೇಷವಾಗಿ ಸಹಕಾರಿ ವಲಯದ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಡೆಗಟ್ಟಲಾಗಿದೆ.
5. ರಾಜ್ಯದಲ್ಲಿ ಜಾರಿಗೆ ತಂದಿರುವ ಈ ವಿನೂತನ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಇತರ ರಾಜ್ಯಗಳೂ ಮುಂದೆ ಬಂದಿವೆ. ಆಧಾರ್ ಮತ್ತು ಭೂ ದಾಖಲಾತಿಗಳ ಡಿಜಿಟಲ್ ದೃಢೀಕರಣ ಮತ್ತು ಪಡಿತರ ಚೀಟಿ ಇವುಗಳಿಂದ ಕೂಡಿರುವ ಮನ್ನಾ ಪ್ರಕ್ರಿಯೆ ವ್ಯವಸ್ಥೆಯು ಅತ್ಯಂತ ಸುರಕ್ಷಿತ ಮತ್ತು ದುರುಪಯೋಗಕ್ಕೆ ಅಸ್ಪದ ನೀಡುವುದಿಲ್ಲ. ಅರ್ಹ ರೈತರ ಖಾತೆಗೆ ಹಣ ಜಮೆಗೊಳ್ಳುತ್ತದೆ.
6. ಈವರೆಗೆ ಸುಮಾರು 60 ಸಾವಿರ ರೈತರ 350 ಕೋಟಿ ರೂ. ಸಾಲ ಮನ್ನಾದ ಮೊತ್ತವನ್ನು ನೇರವಾಗಿ ಅವರ ಖಾತೆಗೆ ವಿದ್ಯುನ್ಮಾನ (ಇಲೆಕ್ಟ್ರಾನಿಕ್) ಮಾದರಿಯಲ್ಲಿ ಜಮಾ ಮಾಡಲಾಗಿದೆ.
7. ಪ್ರತಿ ವಾರ ಸಾಲ ಮನ್ನಾದ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ವಿದ್ಯುನ್ಮಾನ ಮಾದರಿಯಲ್ಲಿ ತುಂಬಲಾಗುತ್ತಿದೆ.
8. ಮುಂದಿನ ವಾರದಲ್ಲಿ ಇನ್ನೂ 1 ಲಕ್ಷ ರೈತರಿಗೆ 400 ಕೋಟಿ ರೂ.ಗಳನ್ನು ಅವರ ಖಾತೆಗೆ ಜಮೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ.
9. ವಾಣಿಜ್ಯ ಬ್ಯಾಂಕುಗಳಲ್ಲಿ ಬೆಳೆ ಸಾಲ ಪಡೆದ ಸುಮಾರು 21 ಲಕ್ಷ ರೈತರಲ್ಲಿ ಕೇವಲ 10 ದಿನಗಳಲ್ಲಿ 8.5 ಲಕ್ಷ ರೈತರು ತಮ್ಮ ಆಧಾರ್, ರೇಷನ್ ಕಾರ್ಡ್ ಹಾಗೂ ಪಹಣಿಯ ಮಾಹಿತಿಗಳನ್ನು ಒದಗಿಸಿದ್ದಾರೆ.
10. ಈ ಪ್ರಕ್ರಿಯೆ 2019ರ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಈ ಅವಧಿಯೊಳಗೆ ಎಲ್ಲಾ ಅರ್ಹ ರೈತರನ್ನು ನೊಂದಾಯಿಸಲಾಗುವುದು.
11. ಈ ಯೋಜನೆಯ ಪಾರದರ್ಶಕ ಹಾಗೂ ಯಶಸ್ವಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಅತ್ಯಂತ ಬದ್ಧತೆಯಿಂದ ಹಗಲಿರುಳು ಶ್ರಮಿಸುತ್ತಿದ್ದಾರೆ.
ವಾಸ್ತವ ಅಂಶಗಳು ಕಣ್ಣು ಮುಂದೆಯೇ ಇವೆ. ಹೀಗಿದ್ದರೂ ಪ್ರಧಾನಿ ಹುದ್ದೆಯಲ್ಲಿರುವವರು ಜವಾಬ್ದಾರಿ ಮರೆತು ಇಂತಹ ಹೇಳಿಕೆ ನೀಡಿದ್ದು ದೇಶದ ದೌರ್ಭಾಗ್ಯ ಎಂದು ಮುಖ್ಯಮಂತ್ರಿ ಬೇಸರ ವ್ಯಕ್ತ ಪಡಿಸಿದ್ದಾರೆ.
ರಾಜ್ಯ ರೈತರ ನೆರವಿಗೆ ಬರುವಂತೆ ಹಲವಾರು ಬಾರಿ ಮೇಲಿಂದ ಮೇಲೆ ಮನವಿ ಮಾಡಿದರೂ ಕೇಂದ್ರ ಸರ್ಕಾರ ಅದನ್ನು ಕಡೆಗಣಿಸಿತ್ತು. ಈಗ ರಾಜಕೀಯ ಲಾಭಕ್ಕಾಗಿ ದೇಶದ ಜನತೆಯ ದಿಕ್ಕುತಪ್ಪಿಸುವಂತ ಹೇಳಿಕೆ ನೀಡಿರುವುದು ವಿಷಾದನೀಯ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಹತಾಶೆಗೊಂಡಿದ್ದ ರೈತರು ದೆಹಲಿಗೆ ಹೋಗಿ ಪ್ರತಿಭಟನೆ ನಡೆಸಿದಾಗಲೂ ಕೇಂದ್ರ ಸರ್ಕಾರ ದಿವ್ಯ ಮೌನ ವಹಿಸಿತ್ತು. ಈಗ ಏಕಾಏಕಿಯಾಗಿ ರಾಜ್ಯ ಕೈಗೊಂಡಿರುವ ಸಾಲಮನ್ನಾದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಲ್ಲದೆ ರಾಜ್ಯ ಸರ್ಕಾರವು ಸಂಕಷ್ಟದಲ್ಲಿರುವ ರೈತರನ್ನು ಕೈಹಿಡಿಯುತ್ತಿರುವ ಸರ್ಕಾರದ ಕ್ರಮದ ಬಗ್ಗೆಯೇ ವ್ಯಂಗ್ಯವಾಡಿರುವುದು ಅತ್ಯಂತ ಖಂಡನಾರ್ಹ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ