Latest

ಪ್ರಬಂಧ

 

ತಿಗಣೆ ಪುರಾಣ

      ನೀತಾ ರಾವ್, ಬೆಳಗಾವಿ

        ಬಹಳ ಹಿಂದೆ ಓಣಿಗೆ ಒಂದೋ ಎರಡೋ ಕಾರುಗಳೂ ಇಲ್ಲದಿದ್ದ ಕಾಲದಲ್ಲಿ ಅಂದರೆ ಎಂಬತ್ತು-ತೊಂಬತ್ತರ ದಶಕದಲ್ಲಿ ಬೆರಳೆಣಿಕೆಯಷ್ಟು ಜನ ಕಾರಿಟ್ಟುಕೊಂಡು ಮೆರೆದಾಡುವಾಗ ಯಾರೋ ತಮ್ಮ ಕಾರಿನ ಹಿಂದಿನ ಗಾಜಿನ ಮೇಲೆ ಹೀಗೆ ಬರೆಸಿದ್ದರ ನೆನಪು, “I have caught the Love bug”. ಥೂ! ಹೋಗಿ ಹೋಗಿ ಪ್ರೀತಿಯನ್ನು ತಿಗಣಿ ಎನ್ನುವುದಾ? ಅಂತ ನನಗೆ ಅನಿಸಿದ್ದರೂ ಯಾಕೋ ಒಂಥರಾ ಖುಶಿ ಕೊಟ್ಟದ್ದೂ ಸುಳ್ಳಲ್ಲ.

ಈ ತಿಗಣಿಗಳು ಹಾಸಿಗೆಯಲ್ಲಿ ಸೇರಿಕೊಂಡರೆ ಮುಗಿಯಿತು. ಮಲಗಿಕೊಂಡವರಿಗೆ ನಿದ್ದೆ ಮಾಡಲೂ ಬಿಡದೇ, ಸರಿ ಎಚ್ಚರವಾಗುವಂತೆಯೂ ಕಡಿಯದೇ ಅರೆ ನಿದ್ರಾವಸ್ಥೆಯಲ್ಲಿ ಮೈಯೆಲ್ಲಾ ಕಡಿದು ರಕ್ತ ಹೀರಿ ಕೆಂಪು ಗುಡಾಣವಾಗುತ್ತವೆ. ನಮ್ಮ ಹತ್ತಿರದಲ್ಲೇ ನಮ್ಮ ಹಾಸಿಗೆಯಲ್ಲೇ ಇದ್ದರೂ ಕೈಗೆ ಹಾಗೆಲ್ಲಾ ಸುಲಭವಾಗಿ ಸಿಗದೇ ಕಾಡುತ್ತವೆ. ಹಾಗಾಗಿಯೇ ಇರಬೇಕು ಯಾರೋ ಪುಣ್ಯಾತ್ಮ ಇದನ್ನು ಪ್ರೇಮಕ್ಕೆ ರೂಪಕವಾಗಿ ಬಳಸಿಕೊಂಡದ್ದು. ಮತ್ತು ಅದು ಸಿಕ್ಕಿತೆಂದು ಸಂತಸದಿಂದ ಸಾರ್ವಜನಿಕವಾಗಿ ಹೇಳಿಕೊಂಡದ್ದು. ಆದರೆ ಕೈಗೆ ಸಿಕ್ಕ ಅದನ್ನು ಕೊಂದು ಹಣಿಯುವುದೋ, ಬಿಟ್ಟುಬಿಡುವುದೋ? ತಿಗಣಿ ಅಂತಾದ ಮೇಲೆ ಅದನ್ನು ಕೊಲ್ಲಬೇಕು, ಆದರೆ ಅದು ಪ್ರೀತಿ ಅಂತಾದರೆ ಹೇಗೆ ಕೊಲ್ಲುತ್ತೀರಿ? ತಿಗಣಿಯನ್ನು ನೀವು ಕೈಯಿಂದಲೋ, ಚಪ್ಪಲಿಯಿಂದಲೋ ಹೊಸಕಿ ಕೊಂದರೆ ಅದರ ರಕ್ತ ಹೊರಬಂದು, ಆ ರಕ್ತದಿಂದಲೇ ಮತ್ತೆ ನೂರಾರು ತಿಗಣಿಗಳು ಹುಟ್ಟಿಕೊಳ್ಳುತ್ತವಂತೆ, ಏಕೆಂದರೆ ತಿಗಣಿ ತನ್ನ ರಕ್ತದಲ್ಲೇ ಮೊಟ್ಟೆಗಳನ್ನಿಡುತ್ತದಂತೆ. ಹೀಗೆಂದು ಜ್ಞಾನೋದಯ ಮಾಡಿಸಿದವರು ನಮ್ಮ ಅಪಾರ್ಟಮೆಂಟಿನ ನನ್ನ ಗೆಳತಿಯರು. ಮತ್ತೆ ಈಗ ಒಮ್ಮಿಂದೊಮ್ಮಿಲೆ ತಿಗಣೆಗಳ ಚರ್ಚೆ ಇದ್ದಕ್ಕಿದ್ದಂತೆ ಮುನ್ನೆಲೆಗೆ ಬರಲು ಕಾರಣ ನನ್ನ ಕುಮಾರ ಕಂಠೀರವ. ಬೆಂಗಳೂರಿನಿಂದ ಬಂದವನು ತಾನು ಮತ್ತು ಗೆಳೆಯರು ಈಗಿರುವ ಬಾಡಿಗೆ ಮನೆಯನ್ನು ಬಿಡುತ್ತಿರುವುದಾಗಿ ಪ್ರಕಟಿಸಿದ. “ಅಲ್ಲೋ ಮೂರು ತಿಂಗಳ ಹಿಂದಷ್ಟೇ ಹನ್ನೊಂದು ತಿಂಗಳ ಕರಾರು ಮಾಡಿಕೊಂಡು ಅಷ್ಟೂ ಬಾಡಿಗೆಯನ್ನು ಅಡ್ವಾನ್ಸ ಕೊಟ್ಟು ಬಾಡಿಗೆ ಹಿಡಿದಿದ್ದಿರಲ್ಲಾ? ಇಷ್ಟರಲ್ಲೇ ಬಿಡುವಂಥದ್ದೇನಾಯ್ತು?” ಅಂದೆ. “ಅಲ್ಲಿ ವಿಪರೀತ ತಿಗಣೆಗಳಿವೆ, ರಾತ್ರಿಯ ನಮ್ಮ ನಿದ್ದೆಯನ್ನೆಲ್ಲ ಹಾಳು ಮಾಡಿ ಬೆಳೆಯುತ್ತಿವೆ. ಮಾಲಕರಿಗೆ ಹೇಳಿದರೆ ಅವರು ಪೆಸ್ಟ ಕಂಟ್ರೋಲನವರನ್ನು ಕರೆಸುತ್ತೇವೆ ಎಂದು ಹೇಳಿಕೊಂಡೇ ದಿನ ದೂಡುತ್ತಿದ್ದಾರೆ ಹೊರತು ಏನೂ ಮಾಡುತ್ತಿಲ್ಲ” ಎಂದ ಮಗರಾಯ. “ಹೋಗಲಿ, ನೀವೇ ಕರೆಸಿ ಔಷಧಿ ಹೊಡೆಸಿಕೊಳ್ಳಿ” ಎಂದರೂ ಯಾಕೋ ಅವನು ಒಪ್ಪಲೇ ಇಲ್ಲ. ಕೇಳಿ ನನಗಂತೂ ವಿಪರೀತ ಆಶ್ಚರ್ಯವಾಯ್ತು.

ಸುಮಾರು ಮೂವತ್ತು ವರ್ಷಗಳಿಂದೀಚೆಗೆ ನಾನು ತಗಣೆಗಳ ಬಗ್ಗೆ ಏನೆಂದರೆ ಏನೂ ಸುದ್ದಿ ಕೇಳಿರಲೇ ಇಲ್ಲ. ಅವುಗಳನ್ನು ಕಣ್ಣಾರೆ ಕಾಣುವ ಭಾಗ್ಯವಂತೂ ಎಂದೋ ಕಳೆದುಹೋಗಿತ್ತು. ಹಾಗಾದರೆ ಈ ತಿಗಣಿಗಳೆಂಬ ಕೆಂಪು ಬಣ್ಣದ ಪುಟ್ಟ ಜೀವಿಗಳ ಸಂತತಿ ಈ ಭೂಮಿಯಿಂದ ಶಾಶ್ವತವಾಗಿ ಕಾಣೆಯಾಗಿಹೋಯ್ತು ಎಂದೇ ನಾನು ನಂಬಿಬಿಟ್ಟಿದ್ದೆ. ನಮ್ಮ ಶ್ರೇಷ್ಠ ವಿಜ್ಞಾನಿಗಳು ಏನೆಲ್ಲ ಕಂಡು ಹಿಡಿದಿದ್ದಾರೆ, ಕ್ಷಣಾರ್ಧದಲ್ಲಿ ಮಾನವ ಜನಾಂಗವನ್ನೇ ನಾಶ ಮಾಡುವ ಅಣುಬಾಂಬುಗಳನ್ನು ಇಟ್ಟುಕೊಂಡು ರಾಷ್ಟ್ರಗಳು ಬೀಗುತ್ತವೆ. ರಾಸಾಯನಿಕ ಬಾಂಬುಗಳ ಬಗ್ಗೆಯೂ ಆಗೀಗ ಮಾತನಾಡಿ ಹೆದರಿಸುತ್ತಿರುತ್ತಾರೆ. ಆದರೆ ಸೂಕ್ಷ್ಮ ಜೀವಿಗಳೂ, ಸೂಕ್ಷ್ಮ ಮತಿಗಳೂ ಆದ ಸೊಳ್ಳೆ, ನುಶಿ, ಇರುವೆ ಇಂಥವುಗಳನ್ನು ಸರ್ವನಾಶ ಮಾಡುವುದು ಇವರ ಕೈಯಿಂದ ಆಗಲೇ ಇಲ್ಲ. ರಾತ್ರಿ ಅದೇ ಸೊಳ್ಳೆಗಳು ಇವರ ಕಿವಿಗಳ ಹತ್ತಿರ ಹೋಗಿ “ಯಾರು ಏನು ಮಾಡುವರು, ನನಗೇನು ಕೇಡ ಮಾಡುವರು?” ಅಂತ ಹಾಡಿ ಗಹಗಹಿಸಿ ನಗುತ್ತಿರಬೇಕು. ರಾತ್ರಿ ಲೈಟುಗಳೆಲ್ಲ ಆರಿ, ಮನೆಯ ಜನ ಮಲಗಿದೊಡನೇ ಅಡುಗೆಮನೆಯಲ್ಲಿ ತಮ್ಮ ಅಧಿಪತ್ಯ ಸ್ಥಾಪಿಸಿ, ಸುತ್ತಮುತ್ತಲೆಲ್ಲ ದಂಡಯಾತ್ರೆಗೆ ಹೊರಡುವ ಜಿರಲೆ, ಹಲ್ಲಿಗಳಂತೂ “ನನ್ನ ನೀನು ಗೆಲ್ಲಲಾರೆ, ತಿಳಿದು ತಿಳಿದು ಛಲವೇತಕೆ?” ಎಂದು ಸವಾಲು ಹಾಕುತ್ತಿರಬೇಕು. ಆದರೆ ಪಾಪ ತಿಗಣಿಗಳು ಮಾತ್ರ, ಡೈನಾಸೂರಗಳು ನಶಿಸಿ ಹೋದಂತೆ ಈ ಭೂಮಿಯ ಮೇಲಿನಿಂದ ಹೇಳಹೆಸರಿಲ್ಲದಂತೆ ನಶಿಸಿ ಹೋದವೆಂದು ನಿನ್ನೆ ಮೊನ್ನೆಯವರೆಗೂ ನಾನು ತಿಳಿದಿದ್ದೆ. ಮತ್ತೆ ಹಾಗೆ ಅವು ಕಾಣೆಯಾದ ಬಗ್ಗೆ ಒಂದು ಸಹಾನುಭೂತಿ ತುಂಬಿದ ಸಮಾಧಾನವನ್ನೂ ತಂದುಕೊಂಡಿದ್ದೆ. ನಮ್ಮ ಜೈವಿಕ ಸರಪಳಿಯಲ್ಲಿ ಅವುಗಳು ಅಷ್ಟೇನೂ ಮಹತ್ವದ ಪಾತ್ರ ವಹಿಸಿರಲಿಕ್ಕಿಲ್ಲ, ಹೀಗಾಗಿಯೇ ಅವು ಅಳಿದರೆ ಯಾವುದಕ್ಕೂ, ಯಾರಿಗೂ ನಷ್ಟವಿಲ್ಲ ಎಂದುಕೊಂಡು , ಡಿಸ್ಕವರಿ, ಎನಿಮಲ್  ಪ್ಲ್ಯಾನೆಟ್, ನ್ಯಾಷನಲ್  ಜಿಯಾಗ್ರಫಿಕ್  ಮತ್ತು ಮಕ್ಕಳಿಂದ ಎರವಲು ಪಡೆದ ಅಷ್ಟಿಷ್ಟು ಜೀವಶಾಸ್ತ್ರದ ಜ್ಞಾನವನ್ನು ಮೆಲಕು ಹಾಕಿಕೊಂಡು ತಾಳೆ ಮಾಡಿನೋಡಿ ನಿಟ್ಟುಸಿರು ಬಿಟ್ಟು ನಿರಾಳವಾಗಿದ್ದೆ. ಮತ್ತೆ ಪಾಪದ ತಿಗಣಿಗಳಿಗೊಂದು ವಿಶಾದಭರಿತ ವಿದಾಯವನ್ನೂ ಹೇಳಿ ಕೈತೊಳೆದುಕೊಂಡಿದ್ದೆ.

ನಾವು ಚಿಕ್ಕವರಿದ್ದಾಗ ಇವು ನಮ್ಮನ್ನು ಸಾಕಷ್ಟು ಕಾಡಿದ್ದು ನನ್ನ ಸ್ಮೃತಿಪಟಲದಿಂದ ಪೂರ್ತಿ ಮಾಸಿರಲಿಲ್ಲ. ಒಂದು ದೊಡ್ಡ ಹಾಲು, ಒಂದು ದೊಡ್ಡ ಅಡುಗೆಮನೆ ಮಾತ್ರವಿದ್ದ ನಮ್ಮ ಬಾಡಿಗೆಯ ಮನೆಯಲ್ಲಿ, ಹಾಲಿನಲ್ಲೇ ಎಲ್ಲರೂ ಮಲಗುವ ಪರಿಸ್ಥಿತಿ ಇತ್ತು. ನೆಂಟರು ಬಂದರೆ ಅವರಿಗೂ ಅಲ್ಲಿಯೇ ಹಾಸಿಗೆ ಅಡ್ಜಸ್ಟ್  ಮಾಡುತ್ತಿದ್ದೆವು. ಬಹುಶಃ ಈ ನೆಂಟರು ತಾವು ಬರುವುದಲ್ಲದೇ ತಮ್ಮ ಬ್ಯಾಗು, ಚೀಲಗಳಲ್ಲಿ ತಮ್ಮ ಊರಿನ ತಿಗಣಿಗಳನ್ನೂ ಕರೆತಂದಿರುತ್ತಿದ್ದರೇನೋ! ಹೀಗಾಗಿ ನಮ್ಮ ಮನೆಯ ತಿಗಣಿಗಳಿಗೂ, ಪರವೂರಿಂದ ಬಂದ ತಿಗಣಿಗಳಿಗೂ ಸ್ನೇಹವಾಗಿ, ಆ ಸ್ನೇಹ ಪ್ರೇಮಕ್ಕೆ ತಿರುಗಿ, ಅವು ಜೊತೆಜೊತೆಯಾಗಿ ತಿರುಗುತ್ತಾ ನಮ್ಮೆಲ್ಲರ ರಕ್ತವನ್ನು ಕುಡಿದು ಸೊಂಪಾಗಿ ಉಬ್ಬಿಕೊಂಡು ಪ್ರೇಮದಾಟವನ್ನು ಆಡಲು ನಮ್ಮನ್ನು ಮರಗಳಂತೆ ಬಳಸಿಕೊಳ್ಳುತ್ತಿದ್ದವೇನೋ! ಯಾರಿಗೆ ಗೊತ್ತು, ಸಿನೆಮಾ ಥೇಟರಿನಿಂದ ಮನೆಗೆ ವಲಸೆ ಬರುವ ತಿಗಣಿಗಳಿಗೆ ಮರ ಸುತ್ತುವ ಪ್ರೇಮಿಗಳನ್ನು ನೋಡಿ ನೋಡಿ  ಅದೇ ಆಟವನ್ನೇ ಆಡುವ ಖಯಾಲಿ ಇತ್ತೋ ಏನೋ! ಇಂಥಾ ಇವುಗಳ ಮಿತ್ರಮಂಡಳಿಯಲ್ಲಿ ಸೊಳ್ಳೆಗಳೂ ಸೇರಿಕೊಂಡು ರಾತ್ರಿ ಬಲವಾಗಿ ನಮ್ಮನ್ನು ಹಿಂಸಿಸುತ್ತಿದ್ದರಿಂದ ನಾವು ಸೊಳ್ಳೆಪರದೆಗಳನ್ನು ಕಟ್ಟಿಕೊಳ್ಳುವ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗುತ್ತಿತ್ತು. ಆಗಿನ ಕಾಲದಲ್ಲಿ ಇನ್ನೂ ಸೊಳ್ಳೆ ಬತ್ತಿ, ಸೊಳ್ಳೆ ಮ್ಯಾಟು, ಸೊಳ್ಳೆ ಬ್ಯಾಟು ಮುಂತಾದವೆಲ್ಲ ಅವಿಷ್ಕಾರಗೊಂಡಿರಲಿಲ್ಲ. ಹಾಗಾಗಿ ರಾತ್ರಿ ಊಟವಾಗುತ್ತಲೂ ನೆಲದ ಮೇಲೆ ಹಾಸಿಗೆಯ ಸುರುಳಿಗಳನ್ನು ಬಿಚ್ಚಿ ಅವುಗಳ ಮೇಲೆ ಬೆಡಶೀಟುಗಳನ್ನು ಝಾಡಿಸಿ ಝಾಡಿಸಿ ನೀಟಾಗಿ ಹಾಸಿ, ಸೊಳ್ಳೆ ಪರದೆ ಕಟ್ಟಿಕೊಂಡ ನಂತರ ಸಳಕ್ಕನೆ ಒಳಗೆ ತೂರಿಕೊಂಡು ಕಣ್ಣಗಲಿಸಿ ಒಂದೊಂದೇ ತಿಗಣಿ, ಸೊಳ್ಳೆ ಹಿಡಿದು ಹಿಡಿದು ಬೇಟೆಯಾಡಿ ಸುಸ್ತಾಗಿ ಮಲಗಿದರೆ ಮಸ್ತಾಗಿ ನಿದ್ದೆ ಬರುತ್ತಿತ್ತು. ಆದರೆ ಮತ್ತೆ ಅದ್ಯಾವ ಮಾಯದಲ್ಲಿ ಅದೆಲ್ಲಿಂದ  ಬರುತ್ತಿದ್ದವೋ, ಅಥವಾ ಆಗಷ್ಟೇ ಹೊಸದಾಗಿ ಹುಟ್ಟಿಕೊಳ್ಳುತ್ತಿದ್ದವೋ, ಅಂತೂ ಮಧ್ಯರಾತ್ರಿಯ ಹೊತ್ತಿಗೆ ಮಲಗಿ ಕನಸು ಕಾಣುತ್ತಿರುವ ಹೊತ್ತಿನಲ್ಲಿ,  ಜಗವೆಲ್ಲ ಮಲಗಿರಲು ಇವುಗಳೆದ್ದು  ನಮ್ಮ ಮೈಯನ್ನು ಕಚ್ಚಿ, ಕಡಿದು ತಮ್ಮ ಪಾಲಿನ ರಕ್ತವನ್ನು ಹೀರಿಯೇ ಬಿಡುತ್ತಿದ್ದವು. ಗಾಢ ನಿದ್ರೆಯಲ್ಲಿರುತ್ತಿದ್ದ ನಾವು ಮುಚ್ಚಿದ ಕಣ್ನು ತೆರೆಯದೇ ತುರಿಸಿದಲ್ಲಷ್ಟೇ ಫಟ್ ಅಂತ ಹೊಡೆದುಕೊಂಡು ಮತ್ತೆ ಮಲಗಿಬಿಡುತ್ತಿದ್ದೆವು. ಕೈಗೆ ಸಿಕ್ಕರೆ ಮಾತ್ರ ಯಮಲೋಕಕ್ಕೆ ಕಳಿಸದೇ ಬಿಡುತ್ತಿರಲಿಲ್ಲ. ತಿಗಣಿಗಳಿಂದ ಹೊರಬಂದ ರಕ್ತವನ್ನು ನೋಡಿ “ಇದು ನನ್ನದೇ ರಕ್ತ ನೋಡು, ಕುಡಿದು ಕುಡಿದು ಹೇಗೆ ಗುಡಾಣವಾಗಿದೆ!” ಎಂದು ಹೇಳಿ ಸೇಡು ತೀರಿಸಿಕೊಂಡು ಖುಶಿ ಪಡುತ್ತಿದ್ದೆವು.

ಹಾಗೆ ಕೊಂದ ತಿಗಣಿಗಳ ರಕ್ತದ  ಕಲೆಗಳು ಒಮ್ಮೊಮ್ಮೆ ಬೆಡಶೀಟಿನ ಮೇಲೆ, ಸೊಳ್ಳೆ ಪರದೆಯ ಮೇಲೆ ಉಳಿದು ಹೋಗಿ ನಾವು ಮಾಡಿದ ಕಗ್ಗೊಲೆಗಳ ಕರಾಳ ನೆನಪುಗಳನ್ನು ಮತ್ತೆ  ಮತ್ತೆ ಮನದ ಪರದೆಯ ಮೇಲೆ ಹಳೆಯ ಸಿನೆಮಾ ರೀಲುಗಳಂತೆ ಸುರುಳಿಸುರುಳಿಯಾಗಿ ಬಿಡುತ್ತಿದ್ದವು. ಆದರೆ ಈ ಎಲ್ಲ ಕರ್ಮಕಾಂಡ ರಾತ್ರಿಗಷ್ಟೇ ಸೀಮಿತವಾಗಿತ್ತು ಎನ್ನುವುದೊಂದು ಸಮಾಧಾನದ ಸಂಗತಿ.  ಬೆಳ್ಳಂಬೆಳಿಗ್ಗೆಯೂ ಅವುಗಳದೇ ಧ್ಯಾನವಾಗಬಹುದಾದ ಮನೆಯೊಂದಕ್ಕೆ ನಾನು ಹೋದಾಗ ಆಶ್ಚರ್ಯದಿಂದ ಗಾಬರಿಬಿದ್ದೆ. ನಮ್ಮ ದೊಡ್ಡಪ್ಪ ಲೋಕೋಪಯೋಗಿ ಇಲಾಖೆಯಲ್ಲಿ ಕೆಲಸ ಮಾಡುವಾಗ ಇಲಾಖೆಯ ಕ್ವಾರ್ಟರನಲ್ಲಿ ಇರುತ್ತಿದ್ದರು. ಹೀಗೆ ಅವರು ಗದಗಿನ ಇಲಾಖಾ ಕ್ವಾರ್ಟರನಲ್ಲಿದ್ದಾಗ ಅವರ ಮನೆಯ ಸಾಲಿನಲ್ಲಿ ಕಡೆಯ ಮನೆಯಲ್ಲಿ ಡ್ರೈವರನ ಮನೆಯಿತ್ತು. ಡ್ರೈವರನ ಹೆಂಡತಿ ತುಂಬ ಮಜವಾಗಿದ್ದಳು. ತುಂಬ ವಿಚಿತ್ರವಾಗಿ ಮಾತನಾಡುವುದು, ವರ್ತಿಸುವುದು ಮಾಡುತ್ತಿದ್ದಳು. ಒಂದು ವಿಷಯವನ್ನು ಹಿಡಿದರೆ ಅದರ ಬಗ್ಗೆಯೇ ತಲೆ ತಿನ್ನುತ್ತಿದ್ದಳು. ಅಂಥವಳಿಗೆ ಈ ತಿಗಣಿಗಳೆಂಬ ಉಪದ್ವ್ಯಾಪಿಗಳು ತಲೆ ತಿಂದಿರಬೇಕು, ರಕ್ತವನ್ನಂತೂ ಅವು ಬಿಡುವುದೇ ಇಲ್ಲ. ತಲೆಕೆಟ್ಟು ಅವಳು ಕಂಡಕಂಡಲ್ಲಿ ಅವುಗಳ ಚಂಡಾಡಿದ್ದಳು. ಮನೆಯ ಗೋಡೆಗಳ ಮೇಲೆ ಎಲ್ಲೆಂದರಲ್ಲಿ ತಿಗಣಿಗಳ ರಕ್ತದ ಕಲೆಗಳು ನಾನಾ ರೀತಿಯ ಚಿತ್ತಾರಗಳನ್ನು ಮೂಡಿಸಿದ್ದವು. ಕೆಲವು ಕೆಂಪು ಹೂಗಳಂತೆ, ಕೆಲವು ಎಲೆಗಳಂತೆ, ಕೆಲವು ಕಂಬಳಿ ಹುಳುವಿನಂತೆ, ಇನ್ನು ಕೆಲವು ಹಾರುತ್ತಿರುವ ಚಿಟ್ಟೆಗಳಂತೆ ನಾನಾ ಪ್ರಕಾರವಾಗಿ ಅರಳಿದ್ದವು. ಗೋಡೆಗಳನ್ನು ಹೀಗೂ ಶೃಂಗಾರ ಮಾಡಬಹುದೆಂಬ ಐಡಿಯಾವನ್ನು ಬಣ್ಣದ ಕಂಪನಿಗಳು ಈ ಮನೆಯಿಂದಲೇ ಪಡೆದಿರಬೇಕೆಂಬುದು ನನ್ನ ಗುಮಾನಿ. ಎಷ್ಟಂದೆರೂ ಸರಕಾರಿ ಮನೆಗಳು, ಏನೆಲ್ಲಾ ಪ್ರಯೋಗಗಳನ್ನು ಮಾಡಬಹುದು, ಪ್ರತಿಭೆಗಳನ್ನು ಅರಳಿಸಬಹುದು ಅಲ್ವೇ?

ಅಂತೂ ಇಂಥ ಅನೇಕ ಯೋಚನೆಗಳನ್ನು ಚಿಮ್ಮಿಸಿ, ಮನಸ್ಸನ್ನು ಒದ್ದೆ ಮಾಡುವ ಈ ತಿಗಣಿಗಳನ್ನು ಅಥವಾ ಬೆಡಬಗ್ ಗಳನ್ನು ಮರೆತು ಕೃತಘ್ನಳಾಗಿರುವಾಗಲೇ ನನ್ನ ಮಗನ ಹೊಸ ಸಮಸ್ಯೆಯು, ಇನ್ನೂ ಮುಂದುವರೆದಿರುವ ಸಂತತಿಯ ನೆನಪು ಮಾಡಿಕೊಟ್ಟು ಅವುಗಳ ಬಗ್ಗೆ ಬರೆಯಲೇಬೇಕೆಂಬ ತುಡಿತವನ್ನು ಹುಟ್ಟುಹಾಕಿ ನನ್ನಿಂದ ಈ ಲೇಖನವನ್ನು ಬರೆಯಿಸಿತು. ಇಷ್ಟಾದರೂ ಮಾಡಿ ಹಿಂದೊಮ್ಮೆ ನಿಷ್ಕರುಣೆಯಿಂದ ಅವುಗಳನ್ನು ಕೊಂದ ಪಾಪವನ್ನು ತೊಳೆದುಕೊಳ್ಳುವ ಇರಾದೆಯಿಂದ ಈ ನುಡಿನಮನವನ್ನು ತಿಗಣಿಗಳ ಹೆಸರಿನಲ್ಲಿ ಸಲ್ಲಿಸಿದ್ದೇನೆ. ನೀವೂ ಕೂಡ ಓದಿ ಧನ್ಯರಾಗಿರಿ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button