ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯ ಕರ್ನಾಟಕ ಲಾ ಸೊಸೈಟಿಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎಂಬಿಎ ವಿಭಾಗವು ಫೆಬ್ರುವರಿ 4 ಮತ್ತು 5 ರಂದು “ಪ್ರಾಸ್ಪೆಕ್ಟ್ಸ್ ಆಂಡ್ ಚಾಲೆಂಜಸ್ ಟು ದಿ ಇಶ್ಯೂಸ್ ಆಫ್ ಇನ್ ಕ್ಲೂಸಿವ್ ಗ್ರೋಥ್ ಇನ್ ಇಂಡಿಯಾ ” ವಿಷಯದ ಮೇಲೆ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಮ್ಮೇಳನ ಹಮ್ಮಿಕೊಂಡಿದೆ.
ಬೆಂಗಳೂರಿನ ಭಾರತೀಯ ವ್ಯವಸ್ಥಾಪನಾ ಸಂಸ್ಥೆ (ಐಐಎಂ) ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಶ್ರೀನಿವಾಸನ್ ಮತ್ತು ಮನ್ ದೇಶೀ ಫೌಂಡೇಶನ್ ದ ಸಂಸ್ಥಾಪಕ ಅಧ್ಯಕ್ಷೆ ಚೇತನಾ ವಿಜಯ್ ಸಿನ್ಹಾ ಅವರು ಈ ಸಮ್ಮೇಳನದ ಪ್ರಧಾನ ಭಾಷಣಕಾರರಾಗಿ ಆಗಮಿಸಲಿದ್ದಾರೆ.
ಭಾರತದ ಆಂತರಿಕ ಬೆಳವಣಿಗೆಯನ್ನು ಸಾಧಿಸಲು ಸಹಾಯ ಮಾಡುವ ವಿವಿಧ ವಿಷಯಗಳ ಮೇಲೆ ಬೆಳಕು ಚೆಲ್ಲಿ ಆಂತರಿಕ ಬೆಳವಣಿಗೆಯನ್ನು ಸಾಧಿಸುವಲ್ಲಿ ಭಾರತವು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ. ಸಮ್ಮೇಳನ ಪ್ರಮುಖವಾಗಿ ಬಡತನ, ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ, ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳು, ಬ್ಯಾಂಕಿಂಗ್ ಮತ್ತು ಹಣಕಾಸು, ಮೈಕ್ರೋ ಹಣಕಾಸು, ಆಂತರಿಕ ಬೆಳವಣಿಗೆಯಲ್ಲಿ ಡಿಜಿಟಲ್ ಭಾರತದ ಪಾತ್ರ, ಸಾಮಾಜಿಕ ಉದ್ಯಮಶೀಲತೆ, ಗ್ರಾಮೀಣ ಉದ್ಯಮಶೀಲತೆ, ಗ್ರೀನ್ ಉದ್ಯಮ, ಆಂತರಿಕ ಬೆಳವಣಿಗೆಯ ಮೇಲೆ ಬ್ಯಾಂಕಿಂಗ್ ಬಿಕ್ಕಟ್ಟಿನ ಪರಿಣಾಮ, ಆಂತರಿಕ ಬೆಳವಣಿಗೆಯಲ್ಲಿ ಎನ್ ಜಿ ಓ ಗಳ ಪಾತ್ರ, ಶಿಕ್ಷಣ ಮತ್ತು ಕೌಶಲ್ಯ ಭಾರತದ ಪಾತ್ರ… ಹೀಗೆ ಪ್ರಸ್ತುತವಾಗಿ ಚರ್ಚೆಯಲ್ಲಿರುವ ವಾಣಿಜ್ಯ, ವ್ಯವಸ್ಥಾಪನಾ ವಲಯ ಮತ್ತು ಉದ್ಯಮ ಶೀಲತೆ ಬಗ್ಗೆ ಮುಖ್ಯ ವಿಷಯಗಳ ಬಗ್ಗೆ ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ರಾಷ್ಟ್ರದ ಬೇರೆ ಬೇರೆ ಭಾಗಗಳಿಂದ ಆಗಮಿಸುತ್ತಿರುವ ಪ್ರತಿನಿಧಿಗಳು ತಮ್ಮ ಸಂಶೋಧನಾ ಲೇಖನಗಳನ್ನು ಮಂಡಿಸಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ