ಇರಲಿ ನಮ್ಮಲಿ ಹೊಸತನ, ಆಗ ಬರುವುದು ಹೊಸ ಜೀವನ
ಹೊಸ ವರ್ಷ ಬರುವುದು, ಹಳೆಯ ವರ್ಷ ಹೋಗುವುದು ಸೃಷ್ಟಿಯ ನಿಯಮ. ಹಳೆ ವರ್ಷದ ಅನೇಕ ಘಟನಾವಳಿಗಳನ್ನು ಮರೆತು ನಾವು ಹೊಸ ವರ್ಷಕ್ಕೆ ಪಾದಾರ್ಪಣೆ ಮಾಡುತ್ತೇವೆ. ಹೊಸ ವರ್ಷದ ಮೊದಲನೆಯ ದಿನ ಅದೇ ಸೂರ್ಯ, ಚಂದಿರ ತಾರೆಗಳು, ಅದೇ ಭೂಮಿ, ಆಕಾಶ, ಜಲ, ವಾಯು ಮುಂತಾದ ಪಂಚತತ್ವಗಳು ತಮ್ಮ ಸೇವೆಯಲ್ಲಿ ನಿರತವಾಗಿರುತ್ತವೆ. ಕೇವಲ ಮಾನವನಿಗೆ ಮಾತ್ರ ಹೊಸ ವರ್ಷದ ಸಂಭ್ರಮ. ಕೆಲವರು ಕುಡಿದು, ಕುಣಿದು, ಕುಪ್ಪಳಿಸಿ ಸಂಭ್ರಮದಿಂದ ಆಚರಿಸಿದರೆ, ಹಲವರು ಭಯ-ಭಕ್ತಿ ಭಾವನೆಗಳಿಂದ ಆಚರಿಸುವುದು ಪರಿಪಾಠವಾಗಿದೆ. ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ದೇಶ ವಿದೇಶಗಳಲ್ಲಿ ಹೊಸ ವರ್ಷದ ಆಚರಣೆ ನಡೆಯುತ್ತದೆ.
ಸ್ಕಾಟ್‌ಲ್ಯಾಂಡ್‌ನ ರಾಜಧಾನಿ ಎಡಿನ್ಸ್‌ಬರ್ಗ್‌ನಲ್ಲಿ ಡಿಸೆಂಬರ್ 30 ರಿಂದ ಜನವರಿ 1 ರವರೆಗೆ ಮೂರು ದಿನಗಳ ಕಾಲ ಹೊಸ ವರ್ಷದ ಆಚರಣೆ ನಡೆಯತ್ತದೆ. 8000 ಸೈನಿಕ ವೇಷಧಾರಿಗಳು ಪಂಜಿನ ಮೆರುವಣಿಗೆಯಲ್ಲಿ ಭಾಗವಹಿಸುತ್ತಾರೆ. ಡೊಳ್ಳು ಮತ್ತು ಅನೇಕ ವಾದ್ಯಗಳ ಸಂಗೀತಕ್ಕೆ ಹೆಜ್ಜೆ ಹಾಕುತ್ತ, ಪಾರ್ಲಿಮೆಂಟ್ ವೃತ್ತದಿಂದ ಕೆಲ್ಟಾನ್ ಪರ್ವತದವರೆಗೂ ಮೆರವಣಿಗೆ ಸಾಗಿ ಇಡೀ ರಾತ್ರಿ ಸಂಭ್ರಮದಿಂದ ಹೊಸ ವರ್ಷದ ಆಚರಣೆಯನ್ನು ಆಚರಿಸುವರು.
ಸ್ಪೇನ್ ದೇಶದಲ್ಲಿ ಹೊಸವರ್ಷದ ಆರಂಭವನ್ನು ದ್ರಾಕ್ಷಿಗಳನ್ನು ತಿನ್ನುವ ಮೂಲಕ ಆಚರಿಸಲಾಗುತ್ತದೆ. 12 ದ್ರಾಕ್ಷಿಗಳನ್ನು ಒಂದೇ ಸಾರಿ ತಿಂದರೆ, ಅವರು ಇಡೀ ವರ್ಷ ಸುಖ ಸಮೃದ್ಧಿಯಿಂದ ಬಾಳಬಹುದು ಎಂಬ ನಂಬಿಕೆ ಇದೆ. ಹೊಸ ವರ್ಷದ ಸಂಭ್ರಮದಲ್ಲಿ 7, 9 ಅಥವಾ 12 ಸಾರಿ ಭೋಜನ ಮಾಡಿದರೆ, ಅವರ ಅದೃಷ್ಟ ಚೆನ್ನಾಗಿರುವುದು ಎಂಬ ನಂಬಿಕೆ ಇಸ್ಟೋನಿಯಾ ಜನರಲ್ಲಿದೆ.
ಜಪಾನ್ ದೇಶದಲ್ಲಿ “ಓಮಿಸೊಕಾ” ಎಂಬ ಹೆಸರಿನಲ್ಲಿ ಹೊಸವರ್ಷದ ಆಚರಣೆ ನಡೆಯುತ್ತದೆ. ಬೌದ್ಧ ಮಂದಿರದಲ್ಲಿ 108 ಸಾರಿ ಗಂಟೆ ಬಾರಿಸುವ ಪರಿಪಾಠವಿದೆ. ಆಸೆಯೇ ದು:ಖಕ್ಕೆ ಮೂಲವಾಗಿದ್ದು, ನಕಾರಾತ್ಮಕ ವಿಚಾರಗಳನ್ನು ಬಿಡಬೇಕು ಎಂಬ ನಂಬಿಕೆ ಅವರಲ್ಲಿದೆ. ಟೋಕಿಯೊದ ಬುದ್ಧ-ಮಂದಿರವಾದ ತೊದಾಯಜಿ ಮಂದಿರದಲ್ಲಿ ಇದನ್ನು ನೋಡಬಹುದಾಗಿದೆ.
ಜುಂಕಾನೂ ಬಹುಮಾನಿಯ ದೇಶದ ಉತ್ಸವದಲ್ಲಿ ಮುಷ್ಠ್ಠಿಯುದ್ಧ-ದಿನ ಮತ್ತು ಹೊಸ ವರ್ಷದ ಆಚರಣೆ ನಡೆಯುತ್ತದೆ. ರಾತ್ರಿಯಂದು ಮೆರವಣಿಗೆಯಲ್ಲಿ ನೃತ್ಯ, ಕುಣಿತದ ಜೊತೆ ಸಂಗೀತವಿರುತ್ತದೆ.
ಭಾರತ ದೇಶದೆಲ್ಲೆಡೆ ನವವರ್ಷದ ಆಗಮನವನ್ನು ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ದೇವಾಲಯ, ಪ್ರಾರ್ಥನಾ ಮಂದಿರ ಮತ್ತು ಕ್ರೈಸ್ತ ದೇವಾಲಯಗಳಲ್ಲಿ ವಿಶೇಷವಾಗಿ ಹೊಸ ವರ್ಷದ ಆಚರಣೆ ನಡೆಯುವುದು.
ಹಾಗೆ ನೋಡಿದರೆ ಕಳೆದು ಹೋದ ಸಮಯ, ಬಾಯಿಂದ ಬಂದ ಮಾತು, ಬಂದೂಕಿನಿಂದ ಹೊರಟ ಬುಲೆಟ್ ಎಂದಿಗೂ ಮರಳಿ ಬರುವುದಿಲ್ಲ. ಇದೇ ರೀತಿ ಕಳೆದುಹೊದ ವರ್ಷ ಮತ್ತೆ ಬರಲಾರದು.
ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಯದ ಸೇವಾಕೇಂದ್ರಗಳಲ್ಲಿ ಹೊಸ ವರ್ಷದ ಆಚರಣೆಯನ್ನು ಹರ್ಷೋಲ್ಲಾಸದಿಂದ ಪರಮಾತ್ಮನ ಸ್ಮೃತಿಯಲ್ಲಿ ಆಚರಿಸುತ್ತಾರೆ. ಅಂದು ಕೇಂದ್ರಗಳಲ್ಲಿ ಸಹೋದರಿಯರು ಸ್ವತ: ವೆಜ್-ಕೇಕನ್ನು ತಾವೇ ತಯಾರಿಸುತ್ತಾರೆ. ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಯೋಗ-ತಪಸ್ಸು, ಆಧ್ಯಾತ್ಮಿಕ ಉನ್ನತಿಗಾಗಿ ತರಗತಿ, ಪರಸ್ಪರ ಸ್ನೇಹ-ಪ್ರೀತಿಯಿಂದ ನವ ವರ್ಷವನ್ನು ಸ್ವಾಗತಿಸುತ್ತಾರೆ. ಅಂದು ಸರ್ವ ಸಹೋದರ ಸಹೋದರಿಯರಿಂದ ಹೊಸ ವರ್ಷದ ನಿಮಿತ್ತ ಪ್ರತಿಜ್ಞೆ ಮಾಡಲಾಗುತ್ತದೆ.
ನಾನು ಹಿಂದೆ ನಡೆದಿರುವ ಕಹಿ ಘಟನೆಗಳನ್ನು ಮರೆತು ಹೊಸ ಜೀವನ ನಡೆಸುತ್ತೇನೆ.
ನಾನು ಇನ್ನು ಮುಂದೆ ಸಮಯವನ್ನು ಹಾಳು ಮಾಡದೇ ಒಳ್ಳೆಯ ಕಾರ್ಯಗಳನ್ನು ಮಾಡುತ್ತೇನೆ.
ನಾನು ದುಶ್ಚಟ ಮತ್ತು ದುರ್ಗುಣಗಳನ್ನು ಬಿಟ್ಟು ಹೊಸದಾದ ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳುತ್ತೇನೆ.
ನಾನು ಇನ್ನು ಮುಂದೆ ಯಾರಿಗೂ ಮನಸಾ-ವಾಚಾ-ಕರ್ಮಣ ದು:ಖವನ್ನು ಕೊಡುವುದಿಲ್ಲ ಮತ್ತು ಯಾರಿಂದಲೂ ದು:ಖಿಯಾಗುವುದಿಲ್ಲ.
ನಾನು ಇನ್ನು ಮುಂದೆ ಸತ್ಯವನ್ನು ನುಡಿಯುತ್ತೇನೆ. ಸುಳ್ಳಿನ ಸಹವಾಸ ಮಾಡುವುದಿಲ್ಲ.
ನಾನು ಯಾರಿಗೂ ಮೋಸ ಮಾಡುವುದಿಲ್ಲ.
ನಾನು ಇನ್ನು ಮಂದೆ ಟಿ.ವಿ.ಯಲ್ಲಿ ಅಶ್ಲೀಲ ಹಾಗೂ ಹಿಂಸಾತ್ಮಕ ದೃಶ್ಯಗಳನ್ನು ನೋಡುವುದಿಲ್ಲ.
ನಾನು ಸದಾ ಸ್ವಚ್ಛವಾಗಿದ್ದು, ಪರಿಸರದ ಸ್ವಚ್ಛತೆಯನ್ನು ಕಾಪಾಡುತ್ತೇನೆ.
ಎಲ್ಲರಿಗೂ ಸರ್ವ ಆತ್ಮರ ತಂದೆಯಾದ ಭಗವಂತನ ಪರಿಚಯವನ್ನು ನೀಡಿ ಅವನ ಜೊತೆ ಸಂಬಂಧವನ್ನು ಬೆಸೆಯುತ್ತೇನೆ.
ಸರ್ವರಿಗೂ ಭಗವಂತನಿಂದ ಪಡೆದಿರುವ ಶಕ್ತಿಗಳನ್ನು ಹಂಚಿ ಶಾಂತಿಯ ದಾನ ಮಾಡುತ್ತೇನೆ.
ಸದಾ ಭಗವಂತನ ಮಗುವಾಗಿ ಅವನ ಧ್ಯಾನದಲ್ಲಿ ಇದ್ದು ಶ್ರೇಷ್ಠನಾಗಲು ಪ್ರಯತ್ನ ಮಾಡುತ್ತೇನೆ.
ಭಗವಂತ ನೀಡುವ ಜ್ಞಾನದ ಪ್ರಕಾರ ಈ ಸಮಯವು ಸೃಷ್ಟಿ ನಾಟಕದ ಅಂತಿಮ ಸಮಯವಾಗಿದೆ. ಈಗ ಹೊಸ ವರ್ಷ ಮಾತ್ರವಲ್ಲದೇ ಹೊಸ ಯುಗವು ಬರಲಿದೆ. ನಾವೆಲ್ಲರೂ ಈ ವಿಚಾರವನ್ನು ತಿಳಿದು ಪರಮಾತ್ಮನಿಂದ ಸರ್ವಪ್ರಾಪ್ತಿಗಳನ್ನು ಪಡೆದುಕೊಳ್ಳೋಣ.
ಬರಲಿದೆ ಹೊಸ ವರ್ಷ,
ತರಲಿದೆ ಹೊಸ ಹರುಷ,
ಇರಲಿ ನಮ್ಮಲಿ ಹೊಸತನ,
ಆಗ ಬರುವುದು ಹೊಸ ಜೀವನ
-ವಿಶ್ವಾಸ ಸೋಹೋನಿ
(ಬ್ರಹ್ಮಾಕುಮಾರೀಸ್, ಮೀಡಿಯಾ ವಿಂಗ್, 9483937106)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ