ಎಂ.ಕೆ.ಹೆಗಡೆ, ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಸ್ವ ಪಕ್ಷದ ಅಭ್ಯರ್ಥಿಗಳ ಆಯ್ಕೆಯಷ್ಟೆ ಅಲ್ಲದೆ, ವಿರೋಧ ಪಕ್ಷದ ಅಭ್ಯರ್ಥಿ ಯಾರು ಎನ್ನುವ ಕುರಿತೂ ಎಲ್ಲ ಪಕ್ಷಗಳೂ ತಲೆಕೆಡಿಕೊಳ್ಳುತ್ತಿವೆ. ಹಾಗಾಗಿಯೇ ವಿರೋಧಿ ಅಭ್ಯರ್ಥಿಯ ಹೆಸರು ಅಂತಿಮವಾಗುವವೆರಗೂ ತಮ್ಮ ಪಕ್ಷದ ಅಭ್ಯರ್ಥಿಯ ಹೆಸರನ್ನು ಘೋಷಿಸದಿರಲು ಪ್ರಯತ್ನಿಸುತ್ತಿವೆ.
ಬೆೆಳಗಾವಿ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಸುರೇಶ ಅಂಗಡಿ ಅವರೇ ಈ ಬಾರಿಯೂ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯ ಮಧ್ಯೆಯೂ ಪಕ್ಷದ ವಲಯದಲ್ಲಿ ಅವರಿಗೆ ಸಾಕಷ್ಟು ವಿರೋಧವಿರುವುದರಿಂದ ಕೊನೆಯ ಕ್ಷಣದಲ್ಲಿ ಹೊಸಮುಖ ಕಣಕ್ಕಿಳಿಸಿದರೂ ಅಚ್ಛರಿಯಿಲ್ಲ ಎನ್ನಲಾಗುತ್ತಿದೆ. ಇದಕ್ಕೆ ಪೂರಕವೆನ್ನುವಂತೆ ಸಂಘಪರಿವಾರ ಪ್ರಧಾನಿ ನರೇಂದ್ರ ಮೋದಿ ಪರ ಪ್ರಚಾರ ನಡೆಸುವ ಜೊತೆಗೆ ಸ್ಥಳೀಯ ಅಭ್ಯರ್ಥಿ ಕುರಿತು ಸಮೀಕ್ಷೆ ಮುಂದುವರಿಸಿದೆ.
ಕಳೆದ 3 ತಿಂಗಳಿನಿಂದ ಸಂಘಪರಿವಾರದ ಸಾವಿರಾರು ಕಾರ್ಯಕರ್ತರು ಬೆಳಗಾವಿ ಲೋಕಸಭಾ ಕ್ಷೇತ್ರದಾದ್ಯಂತ ಪ್ರಚಾರ ಕಾರ್ಯ ನಡೆಸಿದ್ದಾರೆ. ಅಭ್ಯರ್ಥಿ ಯಾರೇ ಆಗಲಿ ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಎನ್ನುವ ಧ್ಯೇಯದೊಂದಿಗೆ ಅವರು ಕೆಲಸ ಮಾಡುತ್ತಿದ್ದಾರೆ. ಮೋದಿ ಸರಕಾರದ ಕಾರ್ಯಕ್ರಮಗಳ ಕರಪತ್ರ, ಪುಸ್ತಕಗಳನ್ನು ಮುದ್ರಿಸಿ ಹಂಚುತ್ತಿದ್ದಾರೆ.
ಇದೇ ವೇಳೆ ಜನರಿಂದ ಬರುತ್ತಿರುವ ಅಭಿಪ್ರಾಯಗಳನ್ನು ಬಿಜೆಪಿಗೆ ತಲುಪಿಸುವ ಕೆಲಸವನ್ನೂ ಸಂಘಪರಿವಾರದ ಕಾರ್ಯಕರ್ತರು ಮಾಡುತ್ತಿದ್ದಾರೆ. ಮಂಗಳವಾರ ರಾಜ್ಯಸಭಾ ಸದಸ್ಯ ಪ್ರಭಾಕರ ಕೊರೆ ಹೆಸರು ಸಹ ಬೆಳಗಾವಿ ಕ್ಷೇತ್ರದಲ್ಲಿ ಕೇಳಿಬಂದಿದೆ. ಜೊತೆಗೆ ನ್ಯಾಯವಾದಿ ಎ.ಜಿ.ಮಳವಾಡಮಠ ತಾವೂ ಆಕಾಂಕ್ಷಿ ಎಂದು ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮಧ್ಯೆ, ಬಿಜೆಪಿ ಹೈಕಮಾಂಡ್ ಬೆಳಗಾವಿಯಿಂದ ಪಕ್ಷದ ಸಕ್ರೀಯ ಯುವ ಕಾರ್ಯಕರ್ತರೊಬ್ಬರನ್ನು ಮಂಗಳವಾರ ನವದೆಹಲಿಗೆ ಕರೆಸಿಕೊಂಡಿದೆ. ಅವರು ಕಳೆದ ಕೆಲವು ವರ್ಷಗಳಿಂದ ಯಾವುದೇ ಪ್ರಚಾರವಿಲ್ಲದೆ ಬಿಜೆಪಿ ಪರವಾಗಿ ಕೆಳಮಟ್ಟದಲ್ಲಿ ಕೆಲಸ ಮಾಡುತ್ತಿದ್ದು, ಕ್ಷೇತ್ರದ ಬಹುತೇಕ ಮನೆಗಳನ್ನು ತಲುಪಿದ್ದಾರೆ. ಅವರನ್ನು ಗುರುತಿಸಿರುವ ಹೈಕಮಾಂಡ್ ಮಂಗಳವಾರ ದಿಢೀರ್ ನವದೆಹಲಿಗೆ ಕರೆಸಿಕೊಂಡಿದೆ. ಅವರಿಂದ ಈ ಭಾಗದ ಬೆಳವಣಿಗೆಗಳನ್ನು ತಿಳಿದುಕೊಳ್ಳುವ ಜೊತೆಗೆ ಅವರನ್ನೇ ಕಣಕ್ಕಿಳಿಸಿದರೂ ಅಚ್ಛರಿ ಇಲ್ಲ ಎನ್ನಲಾಗುತ್ತಿದೆ.