Latest

ಬೆಳಗಾವಿಗೆ ಸಿಗಲಿದೆಯೇ ಸಮ್ಮಿಶ್ರ ಉಡುಗೊರೆ?

*

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿಧಾನಮಂಡಳದ ಚಳಿಗಾಲದ ಬೆಳಗಾವಿ ಅಧಿವೇಶನ 2ನೇ ವಾರ ಪ್ರವೇಶಿಸಿದೆ. ಕಳೆದವಾರ ಯಾವುದೇ ಪ್ರಮುಖ ಚರ್ಚೆ, ನಿರ್ಣಯವಿಲ್ಲದೆ ಮುಕ್ತಾಯಗೊಂಡಿರುವ ಅಧಿವೇಶನ 2ನೇ ವಾರದ ಮೊದಲ ದಿನವೂ ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಲ್ಲದೆ ಬಿಕೋ ಎನ್ನುತ್ತಿದೆ.

ಮೊದಲ ವಾರ ಹೈದರಾಬಾದ್ ಕರ್ನಾಟಕ, ಬಯಲುಸೀಮೆ, ಮಲೆನಾಡು ಅಭಿವೃದ್ಧಿ ಮಂಡಳಿಗಳ ವ್ಯಾಪ್ತಿಯ ಶಾಸಕರ ಸಭೆ ನಡೆಸಿರುವ ಮುಖ್ಯಮಂತ್ರಿ ಅಲ್ಲಿಗೆಲ್ಲ ಅನುದಾನವನ್ನು ಹೆಚ್ಚಿಸಿದ್ದಾರೆ. ಆದರೆ ಅಧಿವೇಶನದ ಆತಿಥ್ಯ ವಹಿಸಿರುವ ಮುಂಬೈ ಕರ್ನಾಟಕ ಭಾಗದ ಶಾಸಕರ ಸಭೆಯನ್ನೂ ನಡೆಸಿಲ್ಲ, ಯಾವುದೇ ಉಡುಗೊರೆಯನ್ನೂ ಪ್ರಕಟಿಸಿಲ್ಲ. 

2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಬೆಳಗಾವಿಗೆ ಎರಡನೇ ರಾಜಧಾನಿ ಸ್ಥಾನಮಾನ ನೀಡುವ ಪ್ರಸ್ತಾವನೆ ಹರಿಬಿಟ್ಟಿದ್ದರು. ಸುವರ್ಣ ವಿಧಾನಸೌಧ ಕೂಡ ಅವರದ್ದೆ ಕನಸಿನ ಕೂಸು. ಹಾಗಾಗಿ ಈಗ ನಿರುಪಯುಕ್ತವಾಗಿರುವ ಸುವರ್ಣ ವಿಧಾನಸೌಧ ಕ್ರಿಯಾಶೀಲವಾಗಿಸುವ ಮತ್ತು ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿಸುವ ಕಾರ್ಯಕ್ಕೆ ಕುಮಾರಸ್ವಾಮಿ ಅಧಿಕೃತ ಚಾಲನೆ ನೀಡಲಿದ್ದಾರೆಯೇ ಎನ್ನುವ ನಿರೀಕ್ಷೆ ಮತ್ತು ಕುತೂಹಲ ಮೂಡಿದೆ. 

2006ಕ್ಕೆ ಹೋಲಿಸಿದರೆ ಈಗ ರಾಜ್ಯದಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಆಗ ಜೆಡಿಎಸ್ ಜೊತೆ ಬಿಜೆಪಿ ಸರಕಾರದಲ್ಲಿತ್ತು. ಈಗ ಜೆಡಿಎಸ್ ಜೊತೆ ಕಾಂಗ್ರೆಸ್ ಸರಕಾರ ನಡೆಸುತ್ತಿದೆ. ಹಾಗಾಗಿ ಉತ್ತರ ಕರ್ನಾಟಕದ ಕುರಿತಂತೆ ಈಗಿನ ಸರಕಾರದ ಬದ್ಧತೆ ಈವರೆಗೂ ಪ್ರದರ್ಶನವಾಗಿಲ್ಲ.

ಸರಕಾರ ರಚನೆಯಾದಾಗಿನಿಂದ ಹಲವು ವಿಚಾರಗಳಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗಿದೆ ಎನ್ನುವ ಆರೋಪ ಬಿಜೆಪಿಯಷ್ಟೆ ಅಲ್ಲ, ಕಾಂಗ್ರೆಸ್ ಶಾಸಕರಿಂದಲೂ ಬಂದಿದೆ. ಸಚಿವ ಸಂಪುಟದಲ್ಲೂ ಈ ಭಾಗಕ್ಕೆ ಪ್ರಾತಿನಿಧ್ಯ ಕಡಿಮೆಯೇ. ಅಲ್ಲದೆ ಈ ಭಾಗದ ಪ್ರಬಲ ಧ್ವನಿಗಳನ್ನೂ ಕಡೆಗಣಿಸಲಾಗಿದೆ. ಹಾಗಾಗಿ ಉತ್ತರ ಕರ್ನಾಟಕದ ಗಟ್ಟಿ ಧ್ವನಿ ಸರಕಾರದಲ್ಲಿಲ್ಲ. 

ಬೆಳಗಾವಿಗೆ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಾಕಷ್ಟು ನೆರವು ಹರಿದುಬರುತ್ತಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಉಪಯೋಗಿಸುವಂತೆ ನೋಡಿಕೊಳ್ಳುವ ಕೆಲಸವಾಗಬೇಕಿದೆ. ಕೇಂದ್ರದ ಸ್ಮಾರ್ಟ್ ಸಿಟಿ ಯೋಜನೆಯ ಅನುದಾನವಾಗಲಿ, ಪ್ರತಿಬಾರಿ ರಾಜ್ಯ ಸರಕಾರ ನೀಡುವ 100 ಕೋಟಿ ರೂ. ವಿಶೇಷ ಅನುದಾನವಾಗಲಿ ಸದ್ಭಳಕೆಯಾಗುತ್ತಿಲ್ಲ. ಜೊತೆಗೆ ಬಂದ ಯೋಜನೆಗಳನ್ನು, ಸೌಲಭ್ಯಗಳನ್ನು ಉಳಿಸಿಕೊಳ್ಳುವ ಕೆಲಸವೂ ಆಗುತ್ತಿಲ್ಲ. ಈ ದಿಸೆಯಲ್ಲಿ ಇಲ್ಲಿನ ಜನಪ್ರತಿನಿಧಿಗಳು ಒಂದಾಗಬೇಕಿದೆ, ದೂರದೃಷ್ಟಿಯಿಂದ ಕೆಲಸ ಮಾಡಬೇಕಿದೆ. 

ಬೆಳಗಾವಿಯಲ್ಲಿ ಸಚಿವಾಲಯ ಸ್ಥಾಪಿಸುವ ಪ್ರಸ್ತಾವನೆಯನ್ನು ಸಚಿವ ಆರ್. ವಿ. ದೇಶಪಾಂಡೆ ಇಟ್ಟಿದ್ದಾರೆ. ಅಧಿಕೃತವಗಿ ಎರಡನೇ ರಾಜಧಾನಿಯನ್ನಾಗಿಸುವ ಕುರಿತು ಮುಖ್ಯಮಂತ್ರಿಗಳು ಕಾನೂನು ತಜ್ಞರ ಸಲಹೆ ಕೇಳಿದ್ದಾರೆ ಎನ್ನುವ ಸುದ್ದಿ ಕುಮಾರಸ್ವಾಮಿಯವರ ಆಪ್ತವಲಯದಿಂದ ಹೊರಬಿದ್ದಿದೆ. ಈ ಅಧಿವೇಶನದ ಕೊನೆಯಲ್ಲಿ ಬೆಳಗಾವಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬಹುದೆನ್ನುವ ಮಹಾ ನಿರೀಕ್ಷೆ ಜನರಲ್ಲಿದೆ. ಆದರೆ ಇಲ್ಲಿಯ ಜನಪ್ರತಿನಿಧಿಗಳು ಯಾವರೀತಿಯಲ್ಲಿ ಒತ್ತಡ ಹೇರುತ್ತಾರೆ? ಯಾವ ಬೇಡಿಕೆ ಮಂಡಿಸುತ್ತಾರೆ ಕಾದು ನೋಡಬೇಕಿದೆ. 

ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವರ ಅಸಮಾಧಾನ ಬಗೆಹರಿಸುವ ಇಲ್ಲವೆ, ಕ್ರಿಯಾಶೀಲರಾಗಿರುವ ಸಚಿವರೊಬ್ಬರನ್ನು ಬೆಳಗಾವಿಗೆ ಒದಗಿಸುವ ಕೆಲಸವನ್ನು ಮುಖ್ಯಮಂತ್ರಿಗಳು ಮೊದಲು ಮಾಡಬೇಕಿದೆ. 

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button