ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ತಾಲೂಕಿನ ಸಾವಗಾಂವ ಗ್ರಾಮದ 2 ಎಕರೆ ಜಮೀನಿನಲ್ಲಿ ಅಂತರರಾಷ್ಟ್ರೀಯ ಕುಸ್ತಿ ಶಾಲೆಯನ್ನು ಪ್ರಾರಂಭಿಸಲು ಚಿಂತಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೂ, ರಾಜ್ಯ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಬೆಳಗಾವಿ ಪೋಲಿಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ 17 ಕೋಟಿ ರೂ. ಮೊತ್ತದ ಅಂದಾಜು ಪತ್ರಿಕೆಯನ್ನು ಸಲ್ಲಿಸಲಾಗಿದೆ. ಜಿಲ್ಲೆಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾವಿರ ಕೋಟಿ ಹಂಚಿಕೆಯಾಗಿದ್ದು, ಇದರಲ್ಲಿ ಸ್ಮಾರ್ಟ್ ರಸ್ತೆಗಳಿಗೆ 434 ಕೋಟಿ, ಅಂಡರ್ ಗ್ರೌಂಡ್ ಎಲ್.ಟಿ ವಿದ್ಯುತ್ ಕೇಬಲ್ ಹಾಗೂ ಅಲಂಕಾರಿಕ ವಿದ್ಯುತ್ ಕಂಬಗಳಿಗೆ 154 ಕೋಟಿ, ಸೆಂಟ್ರಲ್ ಕಮಾಂಡ್ & ಕಂಟ್ರೋಲ್ ಸೆಂಟರ್ 126 ಕೋಟಿ, ಕಲಾ ಮಂದಿರ ಜಾಗದಲ್ಲಿ ಅತ್ಯಾಧುನಿಕ ಮಾರಾಟ ಮಳಿಗೆ 43 ವೆಚ್ಚ ಮಾಡಲಾಗುವುದು ಎಂದು ಹೇಳಿದರು.
ಅರಣ್ಯ ಇಲಾಖೆಯ ಸಮಗ್ರ ಆಧುನೀಕರಣ ಯೋಜನೆಯಡಿಯಲ್ಲಿ ಆತ್ಯಾಧುನಿಕವಾಗಿ ಹಾಗೂ ಪ್ರಸ್ಥುತದ ಪರಿಸ್ಥಿತಿಗೆ ಅನುಗುಣವಾಗಿ ಆಧುನಿಕ ತಂತ್ರಾಂಶ, ಉಪಕರಣ, ಗಣಕೀಕರಣ, ಆಧುನಿಕ ಶಸ್ತ್ರಾಸ್ತ್ರಗಳು, ದ್ರೋಣ್ ಇತ್ಯಾದಿಗಳನ್ನು ಬಳಸಿಕೊಂಡು ಅರಣ್ಯ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಲಾಗುವುದು. ಸೆಂಟರ್ ಫಾರ್ ಎಕ್ಸ್‌ಲೆನ್ಸ್ ಸ್ಥಾಪಿಸಿ ಅಳಿವಿನಿಂದ ಉಳಿವಿನೆಡೆಗೆ, ಡೀಮ್ಡ್ ಫಾರೆಸ್ಟ್ (ಪರಿಭಾವಿತ ಅರಣ್ಯ)ಗಳ ಮೋಜಣಿ ಮತ್ತು ಗಡಿ ಗುರುತಿಸುವಿಕೆ, ಹುಲ್ಲುಗಾವಲು ಪ್ರದೇಶಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದೆಂದು ತಿಳಿಸಿದರು.
27 ತುಕಡಿಗಳ ಆಕರ್ಷಕ ಶಿಸ್ತುಬದ್ಧ ಪಥ ಸಂಚಲನ ಗಮನ ಸೆಳೆದವು. ಅತ್ಯುತ್ತಮ ಪಥಸಂಚಲನ ನಡೆಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸಚಿವರು ಸನ್ಮಾನಿಸಿದರು.
ಸಂಸದ ಸುರೇಶ ಅಂಗಡಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ಬೂದೆಪ್ಪ ಹೆಚ್. ಬಿ, ಜಿಲ್ಲಾ ಪೊಲೀಸ್ ಆಯುಕ್ತ ಡಾ.ಡಿ.ಸಿ.ರಾಜಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸುಧಿರ ಕುಮಾರ ರೆಡ್ಡಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ