Latest

ಬೆಳಗಾವಿಯಲ್ಲಿ ನೊಂದ ಮಹಿಳೆಯರಿಗಾಗಿ ಒನ್ ಸ್ಟಾಪ್ ಸರ್ವಿಸ್ ಸೆಂಟರ್

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಬೆಳಗಾವಿ ಪೊಲೀಸ್ ಕಮೀಷನರೇಟ್ ಘಟಕದ ವ್ಯಾಪ್ತಿಯಲ್ಲಿರುವ ಮಹಿಳಾ ಪೊಲೀಸ್ ಠಾಣೆಯಲ್ಲಿ ಒನ್‌ಸ್ಟಾಪ್ ಸರ್ವಿಸ್ ಸೆಂಟರ್ ಸ್ಥಾಪಿಸಲು ಆದೇಶಿಸಲಾಗಿದ್ದು, ಈ ಸೆಂಟರ್‌ಗೆ ಓರ್ವ ವೈದ್ಯರು, ಇಬ್ಬರು ಸಮಾಲೋಚಕರು, ಇಬ್ಬರು ಕಾನೂನು ಸಲಹೆಗಾರರು ಹಾಗೂ ಓರ್ವ ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳನ್ನೊಳಗೊಂಡ ತಂಡವನ್ನು ನೇಮಿಸಲಾಗಿದೆ.

೨೦೧೮-೧೯ ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಜಿಲ್ಲಾ ಕೇಂದ್ರಗಳಲ್ಲಿನ ಎಲ್ಲಾ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್‌ಸ್ಟಾಪ್ ಸರ್ವಿಸ್ ಸೆಂಟರ್‌ಗಳನ್ನಾಗಿ ಉನ್ನತೀಕರಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಹೊಂದಿಕೊಂಡಿರುವ ಕಟ್ಟಡದಲ್ಲಿ ಸುಸಜ್ಜಿತವಾದ ಒನ್ ಸ್ಟಾಪ ಸರ್ವಿಸ್ ಸೆಂಟರ್ ರನ್ನು ಸ್ಥಾಪಿಸಿ ಜ.26ರಂದು ಉದ್ಘಾಟಿಸಲಾಗಿದೆ.

ಸಂತ್ರಸ್ತ ಮಹಿಳೆಯು ಕೃತ್ಯ ನಡೆದ ಸ್ಥಳದ ಸಮೀಪದ ಪೊಲೀಸ್ ಠಾಣೆಗೆ ದೂರು ಧಾಖಲಿಸಿದಾಗ, ಆ ಠಾಣೆಯಿಂದ ಮಹಿಳಾ ಪೊಲೀಸ್ ಠಾಣೆಗೆ, ವೈವಾಹಿಕ ಸಮಸ್ಯ ಆಗಿದ್ದಲ್ಲಿ ಸಮಾಲೋಚನಾ ಕೇಂದ್ರಗಳಿಗೆ ಕಳುಹಿಸಬೇಕಾಗುತ್ತದೆ. ಇದು ವಿಫಲವಾದಲ್ಲಿ ಪುನಃ ಠಾಣೆಗೆ ಬರಬೇಕಾಗುತ್ತದೆ. ಸದರಿ ಮಹಿಳೆಗೆ ದೈಹಿಕ ತೊಂದರೆಯಾಗಿದ್ದರೆ, ವೈದ್ಯಕೀಯ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಂತ್ರಸ್ಥೆಯು ತನ್ನ ಸ್ವಂತ ಮನೆಯವರಿಂದ ತಿರಸ್ಕರಿಸಲ್ಪಟ್ಟು ಠಾಣೆಯಲ್ಲಿಯೇ ಆಶ್ರಯ ಪಡೆಯಬೇಕಾಗುತ್ತದೆ ಹಾಗೂ ಆಕೆಯ ಮಕ್ಕಳಿಗೂ ಕೂಡಾ ಆಕೆಯೊಂದಿಗೆ ಆಶ್ರಯ ಕೊಡಬೇಕಾಗುತ್ತದೆ. ಮಾನಸಿಕವಾಗಿ ನೊಂದ ಮಹಿಳೆಗೆ ಅವಶ್ಯವಾದ ಸಾಂತ್ವನದ ಮಾತುಗಳ ಜೊತೆಗೆ ಪ್ರತ್ಯೇಕ ಬಟ್ಟೆಗಳು, ಆಹಾರ, ಔಷಧೋಪಚಾರ, ಕೌನ್ಸಿಲಿಂಗ್, ಉಚಿತ ಕಾನೂನು ಸಲಹೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಸಿಗುವ ಉದ್ದೇಶದಿಂದ ಮಹಿಳಾ ಪೊಲೀಸ್ ಠಾಣೆಗಳನ್ನು ಒನ್ ಸ್ಟಾಪ್ ಸರ್ವಿಸ್ ಸೆಂಟರ್ ಗಳನ್ನಾಗಿ ಉನ್ನತೀಕರಿಸಲು ಪ್ರಸ್ತಾಪಿಸಲಾಗಿತ್ತು.

ಬೆಳಗಾವಿ ಪೊಲೀಸ್ ಕಮೀಷನರೇಟ್ ಘಟಕದ ವ್ಯಾಪ್ತಿಯ ಯಾವುದೇ ಪೊಲೀಸ್ ಠಾಣಾ ವ್ಯಾಪ್ತಿಯ ಸಂತ್ತಸ್ಥ ಮಹಿಳೆಯರು ನೇರವಾಗಿ ಒನ್ ಸ್ಟಾಪ ಸರ್ವಸ್ ಸೆಂಟರ್‌ಗೆ ಬಂದು, ಅಲ್ಲಿಯ ಮಹಿಳಾ ಪೊಲೀಸ್ ಇನ್ಸಪೆಕ್ಟರ್ ರವರನ್ನು ಸಂಪರ್ಕಿಸಿ, ಅವರಿಗೆ ಲಿಖಿತ ದೂರು ಸಲ್ಲಿಸಿದಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಸಂತ್ರಸ್ಥ ಮಹಿಳೆಗೆ ಅಗತ್ಯವಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒನ್ ಸ್ಟಾಪ್ ಸರ್ವಿಸ್ ಸೆಂಟರ್‌ ನಲ್ಲಿಯೇ ಒದಗಿಸಲು ಕ್ರಮ ಕೈಗೊಳ್ಳುತ್ತಾರೆ. ಆದ್ದರಿಂದ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಸಂತ್ರಸ್ಥ ಮಹಿಳೆಯರು ಒನ್ ಸ್ಟಾಪ್ ಸರ್ವಿಸ್ ಸೆಂಟರ್ ಸದುಪಯೋಗ ಪಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: ೦೮೩೧೨೪೦೫೨೫೩ ಅಥವಾ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ರವರ ದೂರವಾಣಿ ಸಂಖ್ಯೆ: ೯೪೮೦೮೦೪೦೪೯ ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button