ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿಯಲ್ಲಿ ಬೃಹತ್ ಪ್ರಮಾಣದಲ್ಲಿ ಫಿಲ್ಟರ್ ಮರಳು ಮಾಫಿಯಾ ತಲೆ ಎತ್ತಿದ್ದು, ಸರಕಾರಕ್ಕೆ ನಿತ್ಯ ಕೊಟ್ಯಂತರ ರೂ. ನಷ್ಟವಾಗುತ್ತಿದೆ.
ಬೆಳಗಾವಿಯ ಖಾನಾಪುರ ಮತ್ತು ಮಹಾರಾಷ್ಟ್ರದ ರಾಜಗೋಳಿ ಹಾಗೂ ನಿಂಗಾನಟ್ಟಿಯಿಂದ ನಿತ್ಯ ಮುನ್ನೂರಕ್ಕೂ ಹೆಚ್ಚು ಲಾರಿ ಅಕ್ರಮ ಮರಳು ಬೆಳಗಾವಿ ನಗರ ಪ್ರವೇಶಿಸುತ್ತಿದ್ದು, ಅದು ಫಿಲ್ಟರ್ ಆಗಿ ಕಟ್ಟಡ ನಿರ್ಮಾಣಕ್ಕೆ ಪೂರೈಕೆಯಾಗುತ್ತಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿರುವುದಲ್ಲದೆ, ಕಳಪೆ ಗುಣಮಟ್ಟದ ಮರಳಿನಿಂದ ಕಟ್ಟಡದ ಗುಣಮಟ್ಟವೂ ಕಳಪೆಯಾಗುತ್ತಿದೆ. ಅಲ್ಲದೆ ಫಿಲ್ಟರ್ ಮಾಡುವುದಕ್ಕೆ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದೆ.
ಖಾನಾಪುರ ಸಮೀಪ ಮಲಪ್ರಭಾ ನದಿಯಿಂದ ನಿತ್ಯ ಅಕ್ರಮವಾಗಿ ನೂರಾರು ಗಾಡಿ ಕಳಪೆ ಗುಣಮಟ್ಟದ ಮರಳು ಎತ್ತಲಾಗುತ್ತಿದೆ. ರಾತ್ರಿಯಿಡೀ ಅವುಗಳನ್ನು ಬೆಳಗಾವಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಹಾಗೆಯೇ ನಿಂಗಾನಟ್ಟಿ ಮತ್ತು ರಾಜಗೋಳಿಯಿಂದಲೂ ಹೊಲದಲ್ಲಿ ಕಳಪೆ ಗಣಮಟ್ಟದ ಮರಳು ಎತ್ತಿ ಅದನ್ನು ಫಿಲ್ಟರ್ ಮಾಡಲಾಗುತ್ತದೆ.
ಬೆಳಗಾವಿಯಲ್ಲಿ ಮನೆ ಕಟ್ಟುವ ಗುತ್ತಿಗೆದಾರರೊಂದಿಗ ಕಮಿಷನ್ ವ್ಯವಹಾರ ಇಟ್ಟುಕೊಂಡಿರುವ ಮರಳು ದಂಧೆಕೋರರು ಸರಕಾರಕ್ಕೆ ಅಪಾರ ಪ್ರಮಣದಲ್ಲಿ ರಾಯಲ್ಟಿ ವಂಚಿಸುತ್ತಿದ್ದಾರೆ. ವಿಚಿತ್ರವೆಂದರೆ ರಾಜಾರೋಷವಾಗಿ ದೊಡ್ಡ ಪ್ರಮಾಣದಲ್ಲಿ ಮರಳು ಬರುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಆಶ್ಚರ್ಯಕರವಾಗಿದೆ. ಒಂದು ಅಂದಾಜಿನಂತೆ ದಿನಕ್ಕೆ 300 ಲಾರಿ ಮರಳು ಬಂದರೂ ಸುಮಾರು 3-4 ಲಕ್ಷ ರೂ ರಾಯಲ್ಟಿ ನಷ್ಟವಾಗುತ್ತಿದೆ.
ಕಳಪೆ ಗುಣಮಟ್ಟ:
ಮನೆ ಕಟ್ಟುವ ಗುತ್ತಿಗೆದಾರರು ಕಡಿಮೆ ಬೆಲೆಗೆ ಸಿಗುವ ಮರಳನ್ನೇ ಖರೀದಿಸಿ ಕಟ್ಟುವುದರಿಂದ ಮನೆಯ ಗುಣಮಟ್ಟವೂ ಕಳಪೆಯಾಗುತ್ತದೆ. ಮರಳಿನಲ್ಲಿ ಮಣ್ಣಿನ ಪ್ರಮಾಣ ಹೆಚ್ಚಿರುವುದರಿಂದ ಫಿಲ್ಟರ್ ಮಾಡಿದರೂ ಅದರಲ್ಲಿ ಶುದ್ಧತೆ ಬರಲು ಸಾಧ್ಯವಿಲ್ಲ. ಸರಕಾರದಿಂದ ಮಂಜೂರಾದ ಸ್ಲಂ ನಿವಾಸಿಗಳ ಮನೆಗಳು, ಆಶ್ರಯ ಮನೆಗಳನ್ನಂತೂ ಇಂತಹ ಕಳಪೆ ಗುಣಮಟ್ಟದ ಮರಳಿನಿಂದಲೇ ಕಟ್ಟುವುದರಿಂದ ಜನರ ಜೀವದೊಂದಿಗೆ ಚಲ್ಲಾಟವಾಡಿದಂತಾಗುತ್ತದೆ. ಮಣ್ಣಿನಿಂದ ಕೂಡಿರುವ ಕಳಪೆ ಮರಳನ್ನು ಶುದ್ಧೀಕರಿಸಲು ಲಕ್ಷಾಂತರ ಲೀಟರ್ ನೀರನ್ನು ಬಳಸಲಾಗುತ್ತದೆ. ಇದರಿಂದ ಮರಳು ಸಂಪೂರ್ಣ ಶುದ್ಧವಾಗುವುದಿಲ್ಲ. ಅಲ್ಲದೆ ನೀರು ಕೂಡ ವ್ಯರ್ಥವಾಗಿ ಹೋಗುತ್ತದೆ.
ರಾಯಲ್ಟಿ ವಂಚನೆ:
ಮರಳು ದಂಧೆಯಲ್ಲಿ ಬೆಳಗಾವಿ ಜಿಲ್ಲೆ ಸರಕಾರಕ್ಕೆ ರಾಜ್ಯದಲ್ಲೇ ಅತೀ ಹೆಚ್ಚು ರಾಯಲ್ಟಿ ಕೊಡುವ ಜಿಲ್ಲೆಯಾಗಿದೆ. ಒಂದು ಅಂದಾಜಿನಂತೆ ಶೇ.75ರಷ್ಟು ಅಕ್ರಮ ಮರಳು ಸರಬರಾಜು ಆಗುತ್ತಿದ್ದು ಅದು ನಿಂತರೆ ರಾಯಲ್ಟಿ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ. ಅಲ್ಲದೆ ಈ ಅಕ್ರಮ ದಂಧೆಯಂದಾಗಿ ಪ್ರಾಮಾಣಿಕವಾಗಿ ರಾಯಲ್ಟಿ ಕೊಡುವ ಎಂ ಸ್ಯಾಂಡ್ ಘಟಕಗಳು ಸಾಕಷ್ಟು ನಷ್ಟ ಅನುಭವಿಸುತ್ತಿವೆ. ಅವುಗಳಿಗೆ ನಿಗದಿಪಡಿಸಿರುವಷ್ಟು ಪ್ರಮಾಣದಲ್ಲಿ ಮರಳು ಉತ್ಪಾದಿಸಿ ಮಾರಾಟ ಮಾಡಲು ಸಾಧ್ಯವಾಗದೆ ರಾಯಲ್ಟಿ ಜೊತೆಗೆ ದಂಡವನ್ನೂ ಕಟ್ಟಬೇಕಾಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಿಲ್ಲ. ಪೊಲೀಸರು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೂ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ ಎನ್ನುತ್ತಾರೆ ಎಂ ಸ್ಯಾಂಡ್ ಘಟಕಗಳ ಮಾಲಿಕರು.
ಈ ವಿಷಯ ಬರಲಿರುವ ಬೆಳಗಾವಿ ಅಧಿವಶನದಲ್ಲಿ ಚರ್ಚೆಯಾಗುವ ಸಾಧ್ಯತೆ ಇದ್ದು, ಈ ಅಕ್ರಮ ಮರಳು ದಂಧೆಯನ್ನು ತಕ್ಷಣ ನಿಯಂತ್ರಿಸದಿದ್ದಲ್ಲಿಇದು ಮುಂದೆ ದೊಡ್ಡ ಅವಾಂತರಗಳಿಗೆ ಕಾರಣವಾದೀತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ