
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ಸರಕಾರದ ನಿರ್ಧಾರದ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ ಆರಂಭವಾಗಿದೆ.
ಇಲ್ಲಿಯ ಚನ್ನಮ್ಮ ವೃತ್ತದಲ್ಲಿ ಸೇರಿದ ವಿವಿಧ ಕನ್ನಡ ಸಂಘಟನೆಗಳು ಸರಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಕನ್ನಡ ಪರ ಹೋರಾಟಗಾರರ ಸಭೆಯಲ್ಲಿ ಮಾತನಾಡಿದ ಅಶೋಕ ಚಂದರಗಿ, ಸಿಎಂ ಕುಮಾರಸ್ವಾಮಿ ಅವರು ಕಾನೂನು ಬಾಹಿರವಾಗಿ ಅಧಿವೇಶನದಲ್ಲಿ ವಿಟಿಯು ವಿಭಾಗಿಸಲು ಹೊರಟಿದ್ದಾರೆ. ವಿಟಿಯು ಕುಲಪತಿ ಕರಿಸಿದ್ದಪ್ಪ ಹಾಸನದವರಾಗಿದ್ದು, ಬೆಳಗಾವಿ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ವಿಟಿಯುದಲ್ಲಿ ಸಿಎಂ ವಾಸ್ತವ್ಯ ಮಾಡಿದ ವೇಳೆ ಇಬ್ಬರು ಸೇರಿಕೊಂಡು ವಿಟಿಯು ಒಡೆಯುವ ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಎಲ್ಲ ಜನಪ್ರತಿನಿಧಿ ಸೇರಿಕೊಂಡು ವಿಟಿಯು ವಿಶ್ವವಿದ್ಯಾಲಯ ಉಳಿಸುವ ಸಲುವಾಗಿ ಸಿಎಂ ಭೇಟಿ ಮಾಡಿ ಒತ್ತಡ ಹಾಕಬೇಕು. ಇಲ್ಲದಿದ್ದರೆ ಕರವೇದಿಂದ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆಯಲು ಬಿಡುವುದಿಲ್ಲ ಎಂದು ಕರವೇ ಮುಖಂಡ ದೀಪಕ ಗುಡಗನಟ್ಟಿ ತಿಳಿಸಿದರು.
ಜನಪ್ರತಿನಿಧಿಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಿಲ್ಲ ಅಂದರೆ ರಾಜಕಾರಣಿಗಳ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು. ಇದಕ್ಕೂ ರಾಜಕಾರಣಿಗಳು ಮಣಿದಿದ್ದರೆ ಬೆಳಗಾವಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಎಂದರು.
ರಾಜ್ಯ ಸರ್ಕಾರ ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ. ಹಾಸನ ಜಿಲ್ಲೆಯ ರಾಜಕಾರಣಿಗಳು ಬೆಳಗಾವಿ ಜಿಲ್ಲೆಯ ಕಚೇರಿಗಳನ್ನು ಹಾಗೂ ವಿಟಿಯುವನ್ನು ವಿಭಾಗಿಸಿ ಹಾಸನಕ್ಕೆ ತೆಗೆದುಕೊಂಡು ಹೋಗಲು ಒಗ್ಗಟ್ಟಿನ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಜಿಲ್ಲೆಯ ರಾಜಕಾರಣಿಗಳು ಸರ್ಕಾರ ಉಳಿಸಲು ಮತ್ತು ಉರಳಿಸಲು ಹೋರಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಪರ ಹೋರಾಟಗಾರರಾದ ಸಿದ್ದನಗೌಡ ಪಾಟೀಲ, ಮಹಾದೇವ ತಳವಾರ, ಆರ್ ಸಿಯು ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ಮತ್ತಿತರರು ಇದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)