ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರು ಬೆಳಗಾವಿ ಅಧಿವೇಶನದಲ್ಲಿ ತಮ್ಮ ಕೇತ್ರದ ಕಚರಾ ಡಿಪೋದಿಂದ ಅಲ್ಲಿಯ ಜನರ ಆರೋಗ್ಯದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದ ಹಿನ್ನಲೆಯಲ್ಲಿ ಆರೋಗ್ಯ ಸಚಿವ ಶಿವಾನಂದ ಪಾಟೀಲ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಬುಧವಾರ ಬೆಳಿಗ್ಗೆ ತುರಮರಿ ಗ್ರಾಮದಲ್ಲಿರುವ ಕಚರಾ ಡಿಪೋಕ್ಕೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿಯನ್ನು ಪರಿಶೀಲನೆ ಮಾಡಿದರು.
ಆರೋಗ್ಯ ಸಚಿವ ಶಿವಾನಂದ ಪಾಟೀಲ ತುರಮರಿ ಗ್ರಾಮದ ಕಚರಾ ಡಿಪೋದಲ್ಲಿರುವ ಪರಿಸ್ಥಿತಿಯನ್ನು ನೋಡಿ ದಂಗಾದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಬೆಳಗಾವಿ ನಗರದ ಕಸವನ್ನು ನಮ್ಮ ಹಳ್ಳಿಗೆ ತಳ್ಳಬೇಡಿ. ಇದರಿಂದ ನಾವು ಇಲ್ಲಿ ಬದುಕುವುದು ಕಷ್ಟವಾಗಿದೆ. ತುರಮರಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಬದುಕು ನರಕವಾಗಿದೆ. ದಯವಿಟ್ಟು ಕ್ರಮ ಕೈಗೊಂಡು ನಮ್ಮನ್ನು ಬದುಕಲು ಬಿಡಿ ಎಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಗ್ರಾಮಸ್ಥರ ಸಮಸ್ಯೆ ಆಲಿಸಿ ಮಾತನಾಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ, ಈ ವಿಷಯ ಕೇವಲ ಆರೋಗ್ಯ ಇಲಾಖೆಗೆ ಸೆಬಂಧಿಸುವುದಿಲ್ಲ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ತರಿಸಿಕೊಂಡು ತುರಮರಿ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಎಲ್ಲ ಕ್ರಮಗಳನ್ನು ಜರಗಿಸುತ್ತೇನೆ. ಕಸ ವಿಂಗಡನೆ ಮಾಡಿ ಡಂಪ್ ಮಾಡಬೇಕಿತ್ತು. ಆದರೆ ಇಲ್ಲಿ ಮಾಡುತ್ತಿಲ್ಲ. ಈ ಕುರಿತು ಬೆಳಗಾವಿ ಮಹಾನಗರ ಪಾಲಿಕೆಗೆ ನೋಟೀಸ್ ಜಾರಿ ಮಾಡುತ್ತೇನೆ ಎಂದು ತಿಳಿಸಿದರು.
ನಗರಾಭಿವೃದ್ದಿ ಸಚಿವ ಯು.ಟಿ. ಖಾದರ, ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಇದೇ ರೀತಿಯ ಸಮಸ್ಯೆ ಇದೆ. ಸರ್ಕಾರ ಜನರ ಹಿತ ಕಾಯುವುದಕ್ಕಾಗಿ ಕಸ ವಿಲೇವಾರಿ ಕೇಂದ್ರಗಳಲ್ಲಿ ಹೊಸ ಹೊಸ ತಂತ್ರಜ್ಙಾನ ಅಳವಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ಕಸ ವಿಲೇವಾರಿ ಕೇಂದ್ರಗಳು ಅಧುನಿಕತೆಯನ್ನು ಅಳುವಡಿಸಿಕೊಂಡರೆ ಜನರಿಗೆ ಯಾವುದೇ ಸಮಸ್ಯೆ ಎದುರಾಗುವದಿಲ್ಲ ಎಂದರು.
ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ತುರುಮರಿ ಗ್ರಾಮದ ಜನ ಕಳೆದ ಹತ್ತು ವರ್ಷಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಕಚರಾ ಡಿಪೋದಿಂದಾಗಿ ಇಲ್ಲಿಯ ಜನತೆಯ ಆರೋಗ್ಯ ಹದಗೆಟ್ಟಿದೆ. ಸರ್ಕಾರ ಈ ಕುರಿತು ತಕ್ಷಣ ಕ್ರಮ ಕೈಗೊಂಡು ಜನರ ಆರೋಗ್ಯ ಕಾಪಾಡಬೇಕು. ಕಚರಾ ಡಿಪೋ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರನ ವಿರುದ್ಧ ತಕ್ಷಣ ಕ್ರಮ ಕೂಗೊಳ್ಳಬೇಕೆಂದು ಸಚಿವದ್ವಯರಲ್ಲಿ ಮನವಿ ಮಾಡಿಕೊಂಡರು.
ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಪಾಲಿಕೆ ಆಯುಕ್ತ ಶಶಿಧರ ಕುರೇರ ಸೇರಿದಂತೆ ಮಹಾನಗರ ಪಾಲಿಕೆಯ ಇತರ ಅಧಿಕಾರಿಗಳು ಮತ್ತು ತುರಮರಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಹಿರಿಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ