ಪ್ರಗತಿವಾಹಿನಿಗೆ ಮಾಹಿತಿ ನೀಡಿದ ನೂತನ ಸಚಿವ ಸತೀಶ್ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನೂತನ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರ ಬೆಳಗಾವಿಗೆ ಆಗಮಿಸಲಿದ್ದು, ಅಸಮಾಧಾನಗೊಂಡಿರುವ ಸಹೋದರ ರಮೇಶ ಜಾರಕಿಹೊಳಿ ಜೊತೆ ಮಾತನಾಡಲಿದ್ದಾರೆ.
ಬೆಂಗಳೂರಿನಲ್ಲಿರುವ ಸತೀಶ್ ಪ್ರಗತಿವಾಹಿನಿಯೊಂದಿಗೆ ಮಾತನಾಡಿ, ರಮೇಶ ಜೊತೆಗೆ ಮಾತನಾಡಲು ಆಗಿಲ್ಲ. ನಾಳೆ ಬೆಳಗಾವಿಗೆ ಬಂದು ಮಾತನಾಡುತ್ತೇನೆ ಎಂದು ತಿಳಿಸಿದರು.
ತಮ್ಮಿಂದ ಸಚಿವ ಸ್ಥಾನ ಕಿತ್ತುಕೊಂಡಿರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ರಮೇಶ ಜಾರಕಿಹೊಳಿ, ಶಾಸಕ ಸ್ಥಾನಕ್ಕೂ ರಾಜಿನಾಮೆ ನೀಡುವುದಾಗಿ ಭಾನುವಾರ ಪ್ರಗತಿವಾಹಿನಿಗೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರಮೇಶ್ ಜೊತೆ ಮಾತನಾಡಿದ್ದೀರಾ ಎಂದು ಸತೀಶ್ ಅವರನ್ನು ಪ್ರಶ್ನಿಸಿದಾಗ, ಮಾತನಾಡಲು ಅವಕಾಶವಾಗಿಲ್ಲ. ನಾಳೆ ಬಂದಾಗ ಮಾತನಾಡುತ್ತೇನೆ ಎಂದು ತಿಳಿಸಿದರು.
ಆದರೆ, ರಮೇಶ ಜಾರಕಿಹೊಳಿ ಭಾನುವಾರವೇ ಬೆಂಗಳೂರಿಗೆ ತೆರಳಿದ್ದು, ಮಂಗಳವಾರ ಬೆಳಗಾವಿಗೆ ವಾಪಸ್ಸಾಗುವುದು ಅನುಮಾನ. ತಮ್ಮ ಮುಂದಿನ ಯೋಜನೆಗಳ ಕುರಿತು ಅವರು ಆಪ್ತರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ.
ಇನ್ನೊಂದು ಮೂಲಗಳ ಪ್ರಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ರಮೇಶ್ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸತೀಶ್ ಗೆ ಸೂಚನೆ ನೀಡಿದ್ದಾರೆ. ಹಾಗಾಗಿ ಸೋಮವಾರವೇ ಬೆಂಗಳೂರಿನಲ್ಲಿ ಸತೀಶ್ -ರಮೇಶ ಮುಖಾಮುಖಿಯಾಗಿ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಖಾತೆ ಗೊತ್ತಾಗಿಲ್ಲ:
ಖಾತೆಗಳ ಹಂಚಿಕೆ ಇನ್ನೂ ಆಗಿಲ್ಲ. ಮಂಗಳವಾರ ಅಥವಾ ಬುಧವಾರ ಆಗಬಹುದು. ನನಗೆ ಯಾವ ಖಾತೆ ಸಿಗುತ್ತದೆ ಎನ್ನುವುದು ಇನ್ನೂ ಗೊತ್ತಾಗಿಲ್ಲ ಎಂದು ಸತೀಶ್ ಜಾರಕಿಹೊಳಿ ಪ್ರಗತಿವಾಹಿನಿಗೆ ತಿಳಿಸಿದರು.
ಇಂತದ್ದೇ ಖಾತೆ ಬೇಕೆಂದು ಕೇಳಿಲ್ಲ. ಮುಖ್ಯಮಂತ್ರಿಗಳು, ವರಿಷ್ಠರು ತೀರ್ಮಾನಿಸುತ್ತಾರೆ ಎಂದು ಅವರು ಹೇಳಿದರು. ಸತೀಶ್ ಪ್ರಭಾವಿ ನಾಯಕರಾಗಿರುವುದರಿಂದ ಉತ್ತಮ ಖಾತೆಯ ಜೊತೆಗೆ ಬೆಳಗಾವಿ ಜಿಲ್ಲಾ ಉಸ್ತುವರಿ ಸಚಿವ ಸ್ಥಾನವೂ ದೊರೆಯುವುದು ಖಚಿತ.
ಅಹವಾಲು ಸ್ವೀಕಾರ:
ನೂತನ ಸಚಿವ ಸತೀಶ್ ಜಾರಕಿಹೊಳಿ ಮಂಗಳವಾರಿ ಮತ್ತು ಬುಧವಾರ ಬೆಳಗಾವಿಯಲ್ಲಿ ಸಾರ್ವಜನಿಕರನ್ನು ಭೇಟಿಯಾಗಲಿದ್ದಾರೆ. ಬೆಳಗ್ಗೆ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಲಿರುವ ಅವರು ಅಲ್ಲಿಂದ ರಸ್ತೆ ಮೂಲಕ ಬೆಳಗಾವಿಗೆ ಆಗಮಿಸುವರು.
”25ರಂದು ಬೆಳಗ್ಗೆ 11 ಗಂಟೆಗೆ ಬೆಳಗಾವಿಯ ಪ್ರವಾಸಿ ಮಂದಿರಕ್ಕೆ ಆಗಮಿಸುವ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಮಹಾನಗರ ಪಾಲಿಕೆಗೆ ತೆರಳುವ ಅವರು ಅಲ್ಲಿ ಸಹ ಸಾರ್ವಜನಿಕರಿಂದ ಮಹಾನಗರ ಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳ ಅಹವಾಲು ಸ್ವೀಕರಿಸುವರು” ಎಂದು ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಪಟ್ಟಿಯಲ್ಲಿ ತಿಳಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ