ಒಂದು ಕಾಲವಿತ್ತು, ಎಲ್ಲರ ಮನೆಗಳಿಗೂ ಹಿತ್ತಲುಗಳಿದ್ದವು. ಬೆಳಗಾವಿಯಂಥ ಊರಿನ, ಒತ್ತೊತ್ತಾಗಿ ಕಟ್ಟಿದ, ಗಾಳಿ ಆಡದ, ಬೆಳಕು ಬಾರದ, ರೇಲ್ವೆ ಡಬ್ಬಿಯಂಥ ಮನೆಗಳಿಗೆ ಕೂಡ ಹಿಂದೆ ಹಿತ್ತಲುಗಳಿದ್ದವು. ಅವು ಅನೇಕ ಮನೆಗಳಿಗೆ ಸಾಮೂಹಿಕವಾಗಿಯೂಇದ್ದದ್ದು ಸುಳ್ಳಲ್ಲ.
ಅಂದರೆ ಇವರ ಹಿತ್ತಲಿನಿಂದ ಅವರ ಹಿತ್ತಲಿಗೆ,ಅವರ ಹಿತ್ತಲಿನಿಂದ ಇವರ ಹಿತ್ತಲಿಗೆ ಸುಲಭವಾಗಿ ಸೀಮೋಲ್ಲಂಘನ ಮಾಡಿ, ಅವರ ಗಿಡದ ಮುಳ್ಳುಗಳೊಂದಿಗೇ ಬೆಳೆದ ಗೊರಟಿಗೆ ಹೂಗಳನ್ನು ಇವರು, ಇವರ ಮನೆಯ ಮಲ್ಲಿಗೆ ಬಳ್ಳಿಯ ಮೇಲೆ ಸದ್ದಿಲ್ಲದೇ ಅರಳಿದ ಮೊಗ್ಗುಗಳನ್ನುಅವರು ಕದ್ದು ಕೊಯ್ದು ತಮ್ಮ ತಮ್ಮ ಮನೆದೇವರಿಗೆ ಅರ್ಪಿಸಿ, ವರವ ಪಡೆದುಕೊಂಡವರೆಷ್ಟೋ! ಅದೇ ಹಿತ್ತಲಿನ ಮುಖಾಂತರ ಒಳಬಂದು ಅರ್ಜೆಂಟಿಗೆ ಅಂತ ಹೇಳಿ ಬೆಳಗಿನ ಚಹಾಕ್ಕೆ ಸಕ್ಕರೆಯನ್ನೂ, ಮಧ್ಯಾಹ್ನದ ಹೊತ್ತು ತಿಳಿಸದೇ ಬಂದ ನೆಂಟರಿಗೆ ಮಾಡಲು, ಉಪ್ಪಿಟ್ಟಿಗೆ ಕರಿಬೇವನ್ನೂ ಕಡ ಒಯ್ಯಲೂ ಇದೇ ರಹಸ್ಯಮಾರ್ಗ.ಇಂಥ ಹಿತ್ತಲಿನಲ್ಲಿಒಂದು ತುಳಸಿ ಕಟ್ಟೆ, ಅದರಲ್ಲೊಂದು ಪುಟ್ಟ ತುಳಸಿಗಿಡ, ಹಂಗೇ ಮುಂದಿರುವ ಖಾಲಿ ಜಾಗ, ಅದರ ಗಡಿಗುಂಟ ಮಲ್ಲಿಗೆ ಬಳ್ಳಿ, ಗೊರಟಗಿ ಹೂವಿನ ಗಿಡ, ಗುಲಾಬಿ ಕಂಟಿಗಳು, ದಾಸವಾಳದ ಹೂಗಳ ಗಿಡಗಳು, ಕನಕಾಂಬರದ ಗಿಡ, ಹೀಗೆ ಅನೇಕ ಹೂಗಿಡಗಳ ಸಸ್ಯ-ಸಮೂಹ, ಜೊತೆಗೆ ಒಂದು ನಿಂಬೆ ಹಣ್ಣಿನ ಗಿಡ, ಕರಿಬೇವಿನ ಗಿಡ, ಪಪ್ಪಯಿ ಗಿಡ, ಕೆಲವರ ಹಿತ್ತಲುಗಳಲ್ಲಿತೆಂಗಿನ ಮರ, ಮಾವಿನ ಮರ ಕೂಡ ಇರುತ್ತಿದ್ದವು. ಮಧ್ಯಾಹ್ನದ ಉರಿಬಿಸಿಲನ್ನುಸ್ವಲ್ಪ ಕಡಿಮೆ ಮಾಡುವ ತಾಕತ್ತು ಯಾರಿಗಾದರೂ ಇದ್ದರೆ ಅದು ಈ ಗಿಡಮರಗಳಿಗೆ ಮಾತ್ರ. ಹಾಗಾಗಿ ಗಿಡಮರಗಳಿದ್ದ ಹಿತ್ತಲುಗಳ ಹೆಣ್ಣುಮಕ್ಕಳಿಗೆ ಮಧ್ಯಾಹ್ನಕ್ಕೊಂದು ಸಕ್ಕರೆಯ ಸಣ್ಣ ನಿದ್ದೆ ಗ್ಯಾರಂಟಿ ಇದ್ದ ಕಾಲ. ಕೆಲವರ ಮನೆ ಹಿತ್ತಲು ಏನೇನೂ ಕೃಷಿಯಿಲ್ಲದೇ ಪಾಳು ಬಿದ್ದಿರುವುದೂ ಇತ್ತು. ಆದರೆ ಹಿತ್ತಲು ಮಾತ್ರ ಖಂಡಿತ ಇರುತ್ತಿತ್ತು.
ಆದರೆ ಹಿತ್ತಲೆಂದರೆ ಬರಿ ಇಷ್ಟೇ ಅಲ್ಲ. ಅದು ಮತ್ತೂ ಏನೇನೋ ಆಗಿದ್ದುದು ಸುಳ್ಳಲ್ಲ. ನನ್ನ ಅಜ್ಜಿಯ ಊರು ಖಾನಾಪುರದ ಹತ್ತಿರದ ಹೆಬ್ಬಾಳ ಎನ್ನುವ ಪುಟ್ಟ ಹಳ್ಳಿ. ಅಲ್ಲಿ ಅವಳದೊಂದು ಸುಮಾರು ದೊಡ್ಡದೇ ಆದ ಮನೆ. ಮನೆಯ ಮುಂದೆ ಎತ್ತರ ಮತ್ತು ಸಾಕಷ್ಟು ಅಗಲವಾದ ಕಟ್ಟೆ. ಹಿಂದೆ ಉದ್ದಾನುದ್ದ ಹಿತ್ತಲು. ಹಿತ್ತಲಿಗೆ ಕಾಲಿಡುತ್ತಿದ್ದಂತೇ ಎದುರುಗೊಳ್ಳುತ್ತಿದ್ದ ಆಳವಾದ ನೀರಿನ, ಗಡಗಡೆಯಿದ್ದ ಭಾವಿ, ಅದನ್ನು ಬಳಸಿ ಮುಂದೆ ಹೋಗುತ್ತಿದ್ದಂತೆ ಬಟ್ಟೆ ಒಗೆಯುವ ಕಲ್ಲು ಮತ್ತು ಅದಕ್ಕೆ ತಾಕಿದಂತೆ ಹಾಕಲಾಗಿದ್ದ ನೀರು ತುಂಬುವ ದೋಣಿ. ಮುಂದೆರಡು ಮೆಟ್ಟಿಲು ಇಳಿದರೆ ನಿಜವಾದ ಹಿತ್ತಲು ಪ್ರಾರಂಭವಾಗುತ್ತಿತ್ತು. ಎಡಗಡೆಗೆ ಎರಡು ದೊಡ್ಡ ಹಲಸಿನ ಮರಗಳು, ನಂತರ ಎರಡು ದೊಡ್ಡ ಮಾವಿನ ಮರಗಳು ಇಡೀ ಹಿತ್ತಲಿನ ಮಧ್ಯದಲ್ಲೇ ಎತ್ತರವಾಗಿ ಬೆಳೆದು ನಿಂತಿದ್ದವು.ಮಧ್ಯೆ ಮತ್ತೆ ಸಾಕಷ್ಟು ಖಾಲಿ ಜಾಗದ ನಂತರ ಬೇಲಿಗೆ ಹೊಂದಿಕೊಂಡು ಢಮಣಿ ಹಣ್ಣಿನ ಗಿಡ. ಹಿತ್ತಲಿನ ಕೊನೆಗೆ ಆಗಿನ ಕಾಲದ ಹಳೆಯ ಪಾಯಖಾನೆ.
ಅಜ್ಜನನ್ನು ಕಳೆದುಕೊಂಡ ಅಜ್ಜಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಳಗಾವಿಗೆ ಬಂದು ನೆಲೆಸಿದ ಮೇಲೆ ಸದಾ ಬೀಗ ಹಾಕಿರುತ್ತಿದ್ದ ಈ ಹಳ್ಳಿಮನೆ ಮತ್ತದರ ಹಿತ್ತಲು ಧೂಳಾಗಿರುತ್ತಿದ್ದವು. ಹಲಸು, ಮಾವಿನ ಎಲೆಗಳು ಹಿತ್ತಲ ತುಂಬೆಲ್ಲ ಉದುರಿ ನೆಲವೇ ಕಾಣಲಾರದಂತೆ ಹಾಸಿರುತ್ತಿದ್ದವು. ಬೇಸಿಗೆಯ ರಜೆಯಲ್ಲಿ ಮಾವಿನ ಹಣ್ಣಿನ ಸೀಜನ್ ಬಂತೆಂದರೆ ನಾವೆಲ್ಲ ಅಲ್ಲಿಗೆ ಹೋಗಿ ಮನೆ, ಹಿತ್ತಲನ್ನು ಸ್ವಚ್ಛಗೊಳಿಸಿ ತಿಂಗಳುಗಟ್ಟಲೇ ಅಲ್ಲೇ ಇರುತ್ತಿದ್ದೆವು. ದಿನಾಲೂ ಬಾವಿಯಿಂದ ನೀರು ಸೇದುವುದು, ಬಟ್ಟೆ ತೊಳೆಯುವುದು, ಮನೆಯ ಮುಂದಿನ ಕಟ್ಟೆ, ಹಿಂದಿನ ಹಿತ್ತಲನ್ನು ಗುಡಿಸುವುದು ಇವು ಅಲ್ಲಿ ನಮ್ಮ ದೈನಂದಿನ ಕೆಲಸಗಳು. ಪಾಡಾದ ಮಾವಿನ ಕಾಯಿಗಳನ್ನು ಅಜ್ಜಿ ಮತ್ತು ಅಮ್ಮ ಊರಿನ ರೈತರ ಸಹಾಯದಿಂದ ಇಳಿಸುತ್ತಿದ್ದರು. ಚಿಕ್ಕ ಹುಡುಗರಾಗಿದ್ದ ನಮ್ಮ ಕೆಲಸವೆಂದರೆ ಇಷ್ಟಿಷ್ಟೇ ಮಾವಿನಕಾಯಿಗಳನ್ನು ಮನೆಯೊಳಗೊಯ್ದು ಅವನ್ನು ಸಾಲಾಗಿ ಕೋಣೆಯೊಳಗೆ ಜೋಡಿಸಿಡುವುದು. ನಂತರ ಹಣ್ಣುಗಳಾದಂತೆ ದಿನಾಲೂ ಬೆಳೆಗ್ಗೆ ಮತ್ತು ರಾತ್ರಿ ಊಟವಾದ ಕೂಡಲೇ ಮಾವಿನ ಹಣ್ಣುಗಳನ್ನು ತಿನ್ನುವುದೇ ಒಂದು ಸಂಭ್ರಮ. ನಮ್ಮ ಅಂಗಿಯ ಮೇಲೆ ಅವುಗಳ ರಸ ಬೀಳದಂತೆ ಕಸರತ್ತು ಮಾಡುತ್ತ, ಗೊರಟೆಗಳನ್ನು ಸುರ್-ಸುರ್ ಎಂದು ಚಿಪುತ್ತ ತಿನ್ನುವುದೆಂದರೆ ಏನೋ ಮೋಜು. ಬೆಳಗಿನ ಹೊತ್ತು ಹಲಸಿನ ಹಣ್ನು ತಿನ್ನುವುದು. ಇಂಥ ರಾಜಫಲಗಳ ಜೊತೆಗೆ ಆಗೀಗ ಢಮಣಿ ಹಣ್ಣು, ಕೌಳಿ ಹಣ್ಣು, ಸುಣ್ಣದ ಹಣ್ಣು, ನೀರಲ ಹಣ್ಣು, ಚಾರಿ ಹಣ್ಣು ಮತ್ತು ಬೀಜ, ಹೀಗೆ ನಾನಾ ರೀತಿಯ ಹಣ್ಣುಗಳನ್ನು ಸ್ವಾಹಾ ಮಾಡುತ್ತ ರಜೆಯನ್ನು ಅನುಭವಿಸುವುದೆಂದರೆ ಎಂಥ ಸೊಗಸು! ಮತ್ತೆ ಇಂಥ ತಿನ್ನುವ ಕೆಲಸಗಳಿಗೆಲ್ಲ ಮನೆಯ ಮುಂದಿನ ಕಟ್ಟೆ ಇಲ್ಲವೇ ಹಿಂದಿನ ಹಿತ್ತಲು ಹೇಳಿ ಮಾಡಿಸಿದ ಜಾಗ. ಅಜ್ಜಿ ತೀರಿಕೊಂಡ ಮೇಲೂ ಸುಮಾರು ವರ್ಷಗಳು ನಮ್ಮಮ್ಮ ಆ ಮನೆಯ ವ್ಯಾಮೋಹವನ್ನು ಬಿಡಲಾಗದೇ ಎರಡು ವರ್ಷಗಳಿಗೊಮ್ಮೆ ಹೋಗಿ ಮಾವಿನಕಾಯಿಗಳನ್ನು ತೆಗೆಸಿ ಅವನ್ನೆಲ್ಲ ಲಾರಿಗೆ ಹಾಕಿಸಿ ಬೆಳಗಾವಿಗೆ ತರಿಸಿಕೊಂಡು ತನ್ನ ಅಕ್ಕತಂಗಿಯರಿಗೆಲ್ಲ ಕೊಟ್ಟು, ಮತ್ತೂ ಉಳಿಯುತ್ತಿದ್ದ ಹಣ್ಣುಗಳನ್ನು ಅಕ್ಕಪಕ್ಕದ ಮನೆಯವರಿಗೆ, ನೆಂಟರಿಗೆ, ಸ್ನೇಹಿತರಿಗೆಲ್ಲ ಹಂಚಿ, ಆಮೇಲೆ ಒಂದಿಷ್ಟು ಹಣ್ಣುಗಳನ್ನು ಅತಿ ಕಡಿಮೆ ಬೆಲೆಗೆ ಮಾರಿ, ನಾವೂ ಸಾಕಷ್ಟು ತಿಂದು ತೃಪ್ತರಾಗುವುದನ್ನು ನೋಡಿ ಸಂತೋಷ ಪಟ್ಟಳು. ಆದರೆ ಅವಳ ಶಕ್ತಿ, ಉತ್ಸಾಹಗಳೂ ತಣಿದು ದಣಿದ ಮೇಲೆ ಆ ಮನೆಯನ್ನು ಅನಿವಾರ್ಯವಾಗಿ ಮಾರಬೇಕಾಯ್ತು. ಇದೀಗ ಆ ಮನೆ, ಆ ಹಿತ್ತಲು, ಮನೆಯ ಮುಂದಿನ ದೊಡ್ಡ ಕಟ್ಟೆ, ಎದುರುಗಡೆಯ ಅಜ್ಜಿಯ ಮನೆತನದವರೇ ಕಟ್ಟಿಸಿದ ಹಣಮಪ್ಪನ ಗುಡಿ, ಎಲ್ಲ ಕೆವಲ ನೆನಪುಗಳಾಗಿ ಸ್ಮೃತಿಪಟಲದ ಮೇಲೆ ತಗಲು ಹಾಕಿದ ಪಟದಂತೆ ಉಳಿದುಹೋದವು.
ದೊಡ್ಡಮನೆಗಳಿದ್ದರೂ ಮಕ್ಕಳು ಪ್ರೀತಿಯಿಂದ ಹೆಚ್ಚು ಹೊತ್ತು ಕಳೆಯುವುದು ಹಿತ್ತಲಿನಲ್ಲೇ. ಅಜ್ಜಿಯ ಮನೆಯ ಹಿತ್ತಲಿನ ಆಟ ನಮ್ಮ ಪಾಲಿಗೆ ಇಲ್ಲದೇ ಹೋದರೂ ಬೆಳಗಾವಿಯ ನಮ್ಮ ಮನೆಗೂ ಒಳ್ಳೆಯ ಹಿತ್ತಲೇ ಇದ್ದಿದ್ದರಿಂದ ಮತ್ತೆ ನಮ್ಮ ಹಿತ್ತಲಿನ ನಂಟು ಯಾವ ಅಡೆತಡೆಯೂ ಇಲ್ಲದೇ ಮುಂದುವರೆಯಿತು. ಅಪ್ಪ ಮನೆ ಕಟ್ಟಿದ ಹೊಸತರಲ್ಲಿ ಅತಿ ಉತ್ಸಾಹದಿಂದ ಎಲ್ಲೆಂದರಲ್ಲಿಂದ ಹೂವಿನ ಸಸಿಗಳನ್ನು ತಂದು ನೆಟ್ಟಿದ್ದಾಯ್ತು. ಸೂಜಿ ಮಲ್ಲಿಗೆ, ದುಂಡು ಮಲ್ಲಿಗೆ, ಕಾಕಡಾ, ಗೊರಟಗಿ, ಕನಕಾಂಬರ, ಛಂದದ ಹೂವು, ಹೀಗೆ ನಾನಾ ನಮೂನೆಯ ಗಿಡಗಳು ಹಿತ್ತಲಿನ ನೆಲದ ತುಂಬ ಕಂಗೊಳಿಸಿದವು. ಅವುಗಳ ಜೊತೆಗೆ ಅಪ್ಪ ನಾಲ್ಕು ತೆಂಗಿನ ಸಸಿಗಳನ್ನೂ ನೆಟ್ಟರು. ನಮ್ಮ ಮತ್ತು ಪಕ್ಕದ ಮನೆಯವರ ಮಧ್ಯದ ಗಡಿರೇಖೆಯ ಆ ಕಡೆ ಪಾರಿಜಾತದ ಮರವೂ ಇತ್ತು. ಮತ್ತೆ ಯಥಾಪ್ರಕಾರ ಪಾರಿಜಾತದ ಹೂಗಳು ನಮ್ಮ ಜಾಗದಲ್ಲಿ ಬೀಳುತ್ತಿದ್ದವು. ಸಂಜೆಯ ಹೊತ್ತಿಗೆ ಪಾರಿಜಾತದ ಮೊಗ್ಗುಗಳು ಮೆಲ್ಲನೇ ಪಕಳೆಗಳನ್ನು ಬಿಚ್ಚುವ ಹೊತ್ತಿಗೆ ಇಡೀ ಹಿತ್ತಲಿನಲ್ಲಿ ಅವುಗಳ ಪರಿಮಳ ಘಮ್ಮೆಂದು ಪಸರಿಸುತ್ತಿತ್ತು. ಆದರೆ ಪಕ್ಕದ ಮನೆಯವರ ಬಾಡಿಗೆ ದುಡ್ಡಿನ ಆಸೆಗೆ ಅವರ ಹಿತ್ತಲಿನ ಜೊತೆಗೆ ಪಾರಿಜಾತದ ಮರವೂ ಬಲಿಯಾಯ್ತು. ಮತ್ತವರ ಇಡೀ ಹಿತ್ತಲು ಕಾಂಕ್ರೀಟ್ ಕಾಡಾಯ್ತು. ಮರಗಿಡಗಳ ಮರ್ಮರ, ಮೊಗ್ಗುಗಳ ಅರಳುವ ಮೌನ ಸಂಭ್ರಮ ಎಲ್ಲ ಮುಗಿದು ಹೋದ ಅಧ್ಯಾಯಗಳಾದವು. ಗೆಳತಿಯರನೇಕರ ಮನೆಗಳಿಗೂ ಹಿತ್ತಲುಗಳಿದ್ದವು. ಒಬ್ಬ ಗೆಳತಿಯ ಹಿತ್ತಲಿನಲ್ಲಿದ್ದ ತೆಂಗಿನ ಮರ ನೆಲಕ್ಕಂಟಿದಂತೆ ಬೆಳೆದು ನಂತರ ಮೇಲೇರಿತ್ತು. ಹೀಗಾಗಿ ಅದರ ಮೇಲೆ ಸಾಲಾಗಿ ಹತ್ತಿ ಕುಳಿತುಕೊಳ್ಳುವುದು ನಮಗೆ ಮೋಜಿನ ಕೆಲಸವಾಗಿತ್ತು. ಯಾರ ಮನೆಗೇ ಹೋಗಲಿ ನಮ್ಮ ನಿತ್ಯ ವ್ಯಾಪಾರವೆಲ್ಲ ಹಿತ್ತಲಿನಲ್ಲೇ. ಅಲ್ಲೇ ನಮ್ಮ ಆಟ, ಅಲ್ಲೇ ನಮ್ಮ ಅಭ್ಯಾಸವೂ. ಬಟ್ಟೆ ಒಗೆಯುವ ಕಲ್ಲನ್ನು ಸ್ವಚ್ಛವಾಗಿ ತೊಳೆದು ಹುಣಸೆಹಣ್ಣಿನ ಚಿಗಳಿ ಕುಟ್ಟಿ ಅಲ್ಲೇ ಕುಳಿತು ಲಿಸ್-ಲಿಸ್ ಮಾಡುತ್ತ ತಿನ್ನುತ್ತಿದ್ದೆವು. ಅತೀ ಚಿಕ್ಕವರಿದ್ದಾಗ ನಮ್ಮ ಬೊಂಬೆಗಳ ಮದುವೆಗಳೂ ಇಲ್ಲೇ ಆಗಿ ಅವುಗಳ ದಿಬ್ಬಣವೂ ಇಲ್ಲಿಯೇ ಒಂದು ಮೂಲೆಯಿಂದ ಇನ್ನೊಂದು ಮೂಲೆಯ ವರೆಗೂ ಹೋಗುತ್ತಿತ್ತು. ಅಂತೂ ದಿನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ನಮ್ಮ ಹಿತ್ತಲುಗಳೇ ಕಸಿದುಕೊಂಡಿದ್ದು ಸುಳ್ಳಲ್ಲ.
ಯಾಕೆ ಇಷ್ಟೊಂದು ಹೇಳುತ್ತಿದ್ದೇನೆಂದರೆ, ಈಗ ನಾನು ಮೇಲೆ ಹೇಳಿದ ಯಾವ ಹಿತ್ತಲುಗಳೂ ಉಳಿದಿಲ್ಲ. ಉಳಿದವುಗಳೂ ಮೊದಲಿನಂತೆ ಉಳಿದಿಲ್ಲ. ಇದೀಗ ಜಾಗದ ರೇಟು ಗಗನಕ್ಕೇರಿ, ಇಂಚಿಂಚು ಜಾಗಕ್ಕೂ ಕಿಮ್ಮತ್ತು ಬಂದ ಮೇಲೆ ಹಿತ್ತಲುಗಳಿದ್ದವರಿಗೆ ಜಾಗವನ್ನಿಟ್ಟುಕೊಳ್ಳುವುದಕ್ಕಿಂತ, ಅದರಲ್ಲಿ ಇನ್ನೊಂದು ಮನೆ ಕಟ್ಟುವುದೇ ಹೆಚ್ಚು ಫಾಯದೆ ಎನ್ನಿಸಿರಬೇಕು. ಕೆಲವು ಮನೆಗಳಲ್ಲಿ ಅಣ್ಣ-ತಮ್ಮಂದಿರು ಬೇರೆ ಬೇರೆಯಾಗಿ ಇದ್ದ ಜಾಗವನ್ನೇ ಹಿಂದೊಬ್ಬರು, ಮುಂದೊಬ್ಬರು ಎಂದು ಪಾಲು ಮಾಡಿಕೊಂಡು ಎರಡೂ ಕಡೆ ಮನೆ ಕಟ್ಟಿದ ಮೇಲೆ ಹಿತ್ತಲುಗಳು ಹೇಳಹೆಸರಿಲ್ಲದಂತೆ ಮಾಯವಾಗಿವೆ. ಗಾಳಿ-ಬೆಳಕುಗಳಿಲ್ಲದ ಬೆಂಕಿಪೊಟ್ಟಣದಂಥ ಮನೆಗಳು ಕಾಮನ್ ಆಗಿವೆ. ಹಿಂದಿನ ಮಕ್ಕಳಿಗೆ ಆಶ್ರಯ ನೀಡಿದ್ದ ತೆಂಗಿನ ಮರಗಳನ್ನು ನಾನಾ ಕಾರಣಕ್ಕಾಗಿ ಕಡಿಯಲಾಯಿತು. ಬೇರುಗಳು ಸುತ್ತೆಲ್ಲ ಹರಡಿ ಮನೆಯ ಪಾಯಾವನ್ನೇ ಅಲುಗಾಡಿಸುತ್ತಿವೆ ಎನ್ನುವುದು ಒಂದು ಕಾರಣವಾದರೆ, ನಮ್ಮ ಮರ ವಾಲಿ ಪಕ್ಕದ ಮನೆಯ ಮೇಲೊರಗಿದ್ದುದು ಇನ್ನೊಂದು ಕಾರಣ. ಜೋರಾಗಿ ಗಾಳಿ ಬೀಸಿದಾಗೊಮ್ಮೆ ತೆಂಗಿನ ಗರಿಗಳು, ಕಾಯಿಗಳು ಮೈಮೇಲೆ ಬೀಳಬಹುದೆಂಬ ಹೆದರಿಕೆಯಂತೂ ಸಾರ್ವತ್ರಿಕವಾಗಿದೆ. ಇನ್ನು ದೊಡ್ಡ ದೊಡ್ಡ ಮಾವಿನ, ಹಲಸಿನ ಮರಗಳು ಧರಾಶಾಹಿಯಾಗಲು ಆ ಜಾಗದಲ್ಲಿ ಹೊಸಮನೆಯೊಂದು ಏಳಬೇಕಾಗಿದೆ ಎನ್ನುವ ಕಾರಣವೇ ಸಾಕಲ್ಲ. ಹೀಗೆ ನೋಡನೋಡುತ್ತಿದ್ದಂತೆ ನಮ್ಮ ಸುತ್ತಮುತ್ತಲಿನ ಮರಗಳೆಲ್ಲ ಉರುಳಿ ಹಿತ್ತಲುಗಳೆಲ್ಲ ಕಾಂಕ್ರೀಟ ಕಾಡುಗಳಾದವು. ಅರಿವಿಗೆ ಬಾರದಷ್ಟು ಕ್ಷಿಪ್ರವಾಗಿ ಸಣ್ಣಪುಟ್ಟ ಹೂಗಿಡಗಳೆಲ್ಲ ಸತ್ತು ಸ್ವರ್ಗ ಸೇರಿದವು. ಅಷ್ಟೇ ಏಕೆ ಕಾರ್ಪೋರೇಷನ್ ನೀರು ಬರುತ್ತದೆನ್ನುವ ಕಾರಣಕ್ಕೆ ಬೆಳಗಾವಿಯ ಜನರೆಲ್ಲ ತಮ್ಮ ಹಿತ್ತಲಿನಲ್ಲಿದ್ದ ಬಾವಿಗಳನ್ನೆಲ್ಲಾ ಹಾಳುಬೀಳಿಸಿ, ಕೊನೆಗೆ ಅವುಗಳಲ್ಲಿ ಹುಳಗಳಾದವೆಂಬ ನೆಪ ಮಾಡಿ ಮುಚ್ಚಿಸಿ ಥಣ್ಣಗೆ ಕುಳಿತುಬಿಟ್ಟರು. ಯಾವಾಗ ಬರ ಮೇಲಿಂದ ಮೇಲೆ ಬರೆ ಹಾಕಿ, ಕುಡಿಯುವ ನೀರಿಗೂ ತತ್ವಾರವಾಯಿತೋ ಇದೇ ಜನ ಬಾವಿಗಳನ್ನು ಮುಚ್ಚಿಹಾಕಿದ್ದಕ್ಕಾಗಿ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತ ಒದ್ದಾಡತೊಡಗಿದರು. ಯಾವಾಗ ಮಹಾನಗರ ಪಾಲಿಕೆಯೇ ಮುಂದೆ ನಿಂತು ಹೂತು ಹೋದ, ಹೂಳು ತುಂಬಿದ ಭಾವಿಗಳನ್ನು ಒಂದೊಂದಾಗಿ ಸ್ವಚ್ಛಗೊಳಿಸಿ ಮರುಜನ್ಮ ನೀಡಲಾರಂಭಿಸಿತೋ ಅನೇಕರ ಮುಚ್ಚಿದ ಕಣ್ಣುಗಳು ತೆರೆಯಲಾಂಬಿಸಿದವು. ಒಂದೊಮ್ಮೆ ತೀವ್ರ ಅವಜ್ಞೆಗೊಳಗಾಗಿ ಮುಚ್ಚಿದ ಬಾವಿಗಳನ್ನೀಗ ಮತ್ತೆ ತೆರೆಸಿ ಸ್ವಚ್ಛಗೊಳಿಸಲಾಗುತ್ತಿದೆ. ಆದರೆ ಅಷ್ಟು ಸುಲಭವಾಗಿ ಕಡಿದ ಮರಗಳನ್ನು ಮತ್ತೆ ಎಬ್ಬಿಸಿ ನಿಲ್ಲಿಸಲಾಗದು. ಗಾಳಿ ಬೀಸಿದಾಗಲೆಲ್ಲ ಪರಿಮಳ ಸೂಸಿ ಮನಕ್ಕೆ ತಂಪು ನೀಡಿದ ಹೂ-ಹಣ್ಣುಗಳ ಸುಖವನ್ನು ಮರಳಿ ಪಡೆಯಲಾಗದು. ಇಂಚಿಂಚೂ ಬಿಡದೇ ಎಲ್ಲೆಂದರಲ್ಲಿ ಕಟ್ಟಿದ ಮನೆಗಳನ್ನು ಉರುಳಿಸಲಾಗದು. ತಪ್ಪುಗಳು ಆಗಿ ಹೋಗಿವೆ. ಮಕ್ಕಳಿಗೆ ಆಟಕ್ಕೆ, ನೋಟಕ್ಕೆ ಬೇಕೇಬೇಕಿದ್ದ ಹಿತ್ತಲುಗಳನ್ನು ಮಾಯ ಮಾಡಿದ ಮೇಲೆ ಇದೀಗ ಮಕ್ಕಳು ಮಣ್ಣಿನಲ್ಲಿ ಆಟವಾಡಬೇಕು, ಮಕ್ಕಳ ಕಾಲಿಗೆ ಮಣ್ಣು ಮೆತ್ತಿಕೊಳ್ಳಬೇಕು ಎಂದು ಎಲ್ಲೆಲ್ಲಿಯೋ ಓದಿ, ಕೇಳಿ, ತಿಳಿದುಕೊಂಡು, ತಮ್ಮ ಮಕ್ಕಳು ಮೊಮ್ಮಕ್ಕಳನ್ನು ಆಟವಾಡಿಸಲು ನಮ್ಮಮ್ಮನ ಮನೆಯ ಅಂಗಳಕ್ಕೆ ಬರುವ ಜನರನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದಾಗಿದೆ. ಜೊತೆಗೇ ದುಡ್ಡಿನಾಸೆಗೆ ಬೀಳದೇ ತನ್ನ ಮನೆಯ ಅಂಗಳವನ್ನೂ, ಹಿಂದಿನ ಹಿತ್ತಲವನ್ನೂ ಹಾಗೆಯೇ ಉಳಿಸಿಕೊಂಡು ಬಂದ ಅಮ್ಮನ ಸಂಯಮವನ್ನೂ ಮೆಚ್ಚಬೇಕೆನಿಸುತ್ತದೆ.
(ನೀತಾ ರಾವ್ ಖ್ಯಾತ ಲೇಖಕಿ)
************************
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ