ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜನಾಗಿದ್ದಂತಹ ವೇಮನರು ಸರ್ವವನ್ನೂ ತ್ಯಾಗ ಮಾಡಿ ಸಮಾಜ ಸುಧಾರಣೆಗೆ ವಚನಗಳನ್ನು ರಚಿಸಿದಂತಹ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಸಂಸದ ಸುರೇಶ ಅಂಗಡಿ ಅವರು ಹೇಳಿದರು.
ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬೆಳಗಾವಿ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವೇಮನರಂತಹ ಅನೇಕ ಮಹನೀಯರ ಮಾರ್ಗದರ್ಶನಗಳನ್ನು ಇಂದಿನ ಪೀಳಿಗೆ ಅನುಸರಿಸಲಿ ಎಂದು ಸರಕಾರ ಜಯಂತಿಗಳನ್ನು ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ.ಸಿದ್ದಣ್ಣ ಲಂಗೂಟಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲ ಮಹನೀಯರ, ಮಹಾಪುರುಷರನ್ನು ನಾವು ಒಂದೊಂದು ಜಾತಿಗೆ ಸೀಮಿತಗೊಳಿಸಿದ್ದೇವೆ. ಇದು ಉತ್ತಮ ಬೆಳವಣಿಗೆ ಅಲ್ಲ. ವೇಮನರ ಚಿಂತನೆಗಳ ಅವಶ್ಯಕತೆ ಇಡೀ ಜಗತ್ತಿಗಿದೆ. ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಬದಲು ಎಲ್ಲ ಜಾತಿ-ಜನಾಂಗದವರು ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ವೇಮನರ ವಚನಗಳು ನೇರವಾಗಿ, ನಿಷ್ಠುರವಾಗಿ, ಬಹಿರಂಗವಾಗಿರುತ್ತಿದ್ದವು. ಸ್ತ್ರೀಕುಲದ ಮೇಲೆ ಆಗುತ್ತಿರುವಂತಹ ಪ್ರಸ್ತುತ ಶೋಷಣೆಯನ್ನು ಅವಲೋಕಿಸಿದಾಗ ವೇಮನರ ಚಿಂತನೆಗಳನ್ನು ಅಳವಡಿಸಿಕೊಂಡರೆ ತಪ್ಪಾಗಲಾರದು ಕಾರಣ ಸ್ತ್ರೀ ರಕ್ಷಣೆಯ ಚಿಂತನೆ ವೇಮನರದಾಗಿತ್ತು ಎಂದು ಹೇಳಿದರು.
ಕರ್ನಾಟಕಕ್ಕೆ ವೇಮನರನ್ನು ಪರಿಚಯಿಸಿದವರು ಫಗೂ ಹಳಕಟ್ಟಿಯವರು. ವೇಮನರ ವಚನ ಸಾಹಿತ್ಯವನ್ನು ಒಂದು ಕ್ರಾಂತಿಯಂತೆ ಹೊರಹೊಮ್ಮಿಸಿದ್ದಾರೆ. ಇದರಲ್ಲಿ, ಎಸ್.ಆರ್. ಪಾಟೀಲರು ಮಹಾಂತ ಗುಲಗಂಜಿಯವರ ಪರಿಶ್ರಮ ಅವಿಸ್ಮರಣಿಯವಾಗಿದೆ ಎಂದು ತಿಳಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರ ಬಸಪ್ಪ ಸಿ.ಚಿಕ್ಕಲದಿನ್ನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೇಷಗಿರಿ ಮುತಾಲಿಕ ದೇಸಾಯಿ ಹಾಗೂ ಸಂಗಡಿಗರು ನಾಡಗೀತೆ ಮತ್ತು ವಚನಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಶೈ ಕರಿಶಂಕರ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿರಾದ ಡಾ.ಬೂದೆಪ್ಪ ಹೆಚ್.ಬಿ, ಬೆಳಗಾವಿ ದಕ್ಷಿಣ ವಲಯದ ಶಾಸಕರಾದ ಅಭಯ ಪಾಟೀಲ, ಬೆಳಗಾವಿ ರೆಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮಳ್ಳೂರ, ಮಾರ್ಕೆಟ್ ಠಾಣೆಯ ಎಸಿಪಿ. ಎನ್.ವಿ ಬರಮನಿ, ರೆಡ್ಡಿ ಸಂಘದ ಗೌರವ ಅಧ್ಯಕ್ಷೆ ಇಂದಿರಾಬಾಯಿ ಭೀಮರಡ್ಡಿ ಮಳಲಿ, ರಾಮದುರ್ಗದ ಶರಣ ಸಾಹಿತಿಗಳಾದ ಸಿದ್ದಣ್ಣ ಲಂಗೋಟಿ, ಮಹಾನಗರ ಪಾಲಿಕೆ ಸದಸ್ಯೆ ಜಯಶ್ರೀ ಮಾಳಗಿ, ವೆಂಕಟೇಶ ಪಾಟೀಲ, ರಾಮಣ್ಣ ಮಟ್ಟಿ , ಬಿ. ಎ. ನಾಡಗೌಡ ಹಾಗೂ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ