Latest

ರಮೇಶ್ ಆಪ್ತ ಶಾಸಕರೊಂದಿಗೆ ಸತೀಶ್ ಮಾತುಕತೆ; ತಂತ್ರಕ್ಕೆ ಪ್ರತಿತಂತ್ರ? -ಪ್ರಗತಿವಾಹಿನಿ ವಿಶೇಷ

*

ಖಾತೆ ಹಂಚಿಕೆಗೂ ಮೊದಲು ಅಥಣಿಗೆ ತೆರಳಿದ್ದ ಸತೀಶ್ ; ರಾಜ್ಯ ರಾಜಕೀಯದಲ್ಲಿ ಕುತೂಹಲ

ನಮಗೆ ಪಕ್ಷ ಮುಖ್ಯ, ಯಾರ ಜೊತೆಗೂ ಹೊಗುವ ಪ್ರಶ್ನೆಯೇ ಇಲ್ಲ ಎಂದೂ ಸತೀಶ್ ಗೆ ತಿಳಿಸಿದ  ಶ್ರೀಮಂತ ಪಾಟೀಲ, ಮಹೇಶ ಕುಮಟೊಳ್ಳಿ
    ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾಜಿ ಸಚಿವ ರಮೇಶ್ ಜಾರಕಿಹೋಳಿ ಆಪ್ತರಾಗಿರುವ ಇಬ್ಬರು ಶಾಸಕರೊಂದಿಗೆ ನೂತನ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. 
ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅಥಣಿ ಶಾಸಕ ಮಹೇಶ್ ಕುಮಟೊಳ್ಳಿ ಅವರನ್ನು ಗುರುವಾರ ಅಥಣಿಯಲ್ಲಿ ಭೇಟಿ ಮಾಡಿದ ಸತೀಶ್ ಅವರೊಂದಿಗೆ ಬಹಿರಂಗವಾಗಿ ಕಾಣಿಸಿದ್ದಲ್ಲದೆ  ಪ್ರತ್ಯೇಕವಾಗಿಯೂ ಮಾತುಕತೆ ನಡೆಸಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕಾರ್ಯಕರ್ತರನ್ನೆಲ್ಲ ದೂರವಿಟ್ಟು ಒಂದು ಗಂಟೆಗೂ ಹೆಚ್ಚು ಕಾಲ ಶಾಸಕರಿಬ್ಬರೊಂದಿಗೆ ಸಮಾಲೋಚನೆ ನಡೆಸಿದರು.
ಶಾಸಕರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಯಾವ ಸಮಸ್ಯೆಯೂ ಇಲ್ಲ ಎಂದು ಸತೀಶ್ ಪ್ರಗತಿವಾಹಿನಿ ತಿಳಿಸಿದ್ದಾರೆ. 
ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟೊಳ್ಳಿ ರಮೇಶ ಜಾರಕಿಹೊಳಿ ಆಪ್ತರು. ರಮೇಶ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತಲೇ ಬಂದವರು. ಚುನಾವಣೆ ಸಂದರ್ಭದಲ್ಲಿ ತಮ್ಮ ಕ್ಷೇತ್ರಕ್ಕಿಂತಲೂ ಹೆಚ್ಚು ಅಥಣಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದಲ್ಲದೆ, ಅದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು ರಮೇಶ್.
ಆದರೆ ಗುರುವಾರ ಇಬ್ಬರೂ ಶಾಸಕರು ಸತೀಶ್ ಜೊತೆ ಕಾಣಿಸಿಕೊಂಡರು. ತಮ್ಮ ನಿಗದಿತ ಪ್ರವಾಸವನ್ನು ಮೊಟಕುಗೊಳಿಸಿ ಅಥಣಿಯಲ್ಲೇ ಉಳಿದುಕೊಂಡ ಈ ಇಬ್ಬರು ಸತೀಶ್ ಜೊತೆ ಚರ್ಚಿಸಿದರು. ಇದರಿಂದಾಗಿ ರಮೇಶ್ ಗೆ ಕೈ ಕೊಟ್ಟು ಸತೀಶ್ ಕಡೆ ವಾಲಿದರಾ ಎನ್ನುವ ಸಂಶಯ ಮೂಡುವಂತಾಗಿದೆ. 
ಸತೀಶ್ ಜಾರಕಿಹೊಳಿ ಇನ್ನೂ ಖಾತೆ ಹಂಚಿಕೆಗೂ ಮುನ್ನವೇ ಅಥಣಿ ಪ್ರವಾಸ ಹಮ್ಮಿಕೊಂಡಿದ್ದು ಕುತೂಹಲ ಮೂಡಿಸಿತ್ತು. ರಮೇಶ್ ಮಾತುಕತೆಗೆ ಸಿಗದಿರುವ  ಹಿನ್ನೆಲೆಯಲ್ಲಿ ಅವರ ಆಪ್ತರಿಗೆ ಗಾಳ ಹಾಕುವ ತಂತ್ರ ರೂಪಿಸಿದರೇ ಎನ್ನುವ ಸಂಶಯ ಮೂಡಿದೆ. 
ಈ ಮಧ್ಯೆ, ರಮೇಶ್ ಜಾರಕಿಹೊಳಿ ಮೊಬೈಲ್ 2 ದಿನದಿಂದ ಸ್ವಿಚ್ಡ್ ಆಫ್ ಆಗಿದ್ದು, ಯಾರ ಕೈಗೂ ಸಿಗುತ್ತಿಲ್ಲ. ಹಾಗಾಗಿ ಸತೀಶ್ ಜಾರಕಿಹೊಳಿ ಮಾತನಾಡುವ ಯತ್ನ ಕೈಗೂಡಲಿಲ್ಲ. 

ನಮಗೆ ಪಕ್ಷ ಮುಖ್ಯ, ಯಾರ ಜೊತೆಗೂ ಹೊಗುವ ಪ್ರಶ್ನೆಯೇ ಇಲ್ಲ ಎಂದು ಇಬ್ಬರು ಶಾಸಕರೂ ತಿಳಿಸಿದ್ದಾರೆ  

-ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button