ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ನಿಷ್ಕ್ರೀಯ, ನಿಶಕ್ತ ಸರಕಾರ ನಡೆಯುತ್ತಿದೆ. ಯಾವುದೇ ಕೆಲಸವಾಗುತ್ತಿಲ್ಲ. ಏನೇ ಕೇಳಿದರೂ ಪರ್ಸಂಟೇಜ್ ವ್ಯವಹಾರ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹರಿಹಾಯ್ದಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸಚಿವರೂ ಜನಸಾಮಾನ್ಯರಿಗಿರಲಿ ಶಾಸಕರಿಗೂ ಸಿಗುತ್ತಿಲ್ಲ. ಅಧಿಕಾರಿಗಳೂ ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿಲ್ಲ. ವಿವಿಧ ಇಲಾಖೆಗಳಿಗೆ ಬೇರೆ ಬೇರೆ ಪರ್ಸಂಟೇಜ್ ಫಿಕ್ಸ ಮಾಡಲಾಗಿದೆ. ಹಿಂದೆ ಧರ್ಮಸಿಂಗ್ ಸರಕಾರ ಅತ್ಯಂತ ನಿಶಕ್ತ ಸರಕಾರ ಎನ್ನುವ ಅಪಖ್ಯಾತಿಗೆ ಒಳಗಾಗಿತ್ತು. ಈಗಿನದ್ದು ಅದಕ್ಕಿಂತಲೂ ಕಡೆ ಎಂದು ಕಿಡಿಕಾರಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ ಬೇರೆ ಯಾವುದೇ ಇಲಾಖೆಗಳ ಸಚಿವರು ಸ್ಪಂದಿಸುತ್ತಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಾಗದೆ ನಾವು ಶಾಸಕರಾಗಿರುವ ಬಗ್ಗೆಯೇ ಬೇಸರವಾಗುತ್ತಿದೆ. ನಾನು ಅಧಿಕಾರಿಗಳ ಬೆನ್ನತ್ತಿ ವಯಕ್ತಿಕ ಸಂಪರ್ಕದಿಂದ ನಿರಂತರ ನೀರು ಪೂರೈಸುವ ಯೋಜನೆ, ಗ್ರಾಮೀಣ ನೀರು ಸರಬರಾಜು ಯೋಜನೆ, ಸ್ಮಾರ್ಟ್ ಸಿಟಿಯಡಿ ಹಲವು ಯೋಜನೆ ತಂದಿದ್ದೇನೆ ಎಂದು ಅಭಯ ಹೇಳಿದರು.
40 ಸಾವಿರ ಜನರಿಗೆ ಉದ್ಯೋಗ ನೀಡುವ 774 ಎಕರೆ ಪ್ರದೇಶದಲ್ಲಿ ಐಟಿ ಪಾರ್ಕ್, ಅಂಡಾಮಾನ್ ನಿಕೋಬಾರ್ ದ್ವಿಪದ ಸೆಲ್ಯೂಲರ್ ಜೈಲ್ ಮತ್ತು ಇತರೆ ಐತಿಹಾಸಿಕ ಘಟನಾವಳಿಗಳ ಪ್ರತಿರೂಪಗಳು ಇರುವ ರೆಪ್ಲಿಕಾ ಪಾರ್ಕ್, ಜವಳಿ ಪಾರ್ಕ್ ನಿರ್ಮಾಣ, ಕ್ಷೇತ್ರದ ವಿಸ್ತೀರ್ಣ ಪ್ರದೇಶದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮೊದಲಾದ ಯೋಜನೆಗಳನ್ನು ರೂಪಿಸಲಾಗಿದೆ. ದಕ್ಷಿಣ ಕ್ಷೇತ್ರವನ್ನು ಮಾದರಿ ಮಾಡುವ ದಿಸಿಯಲ್ಲಿ ಪ್ರಯತ್ನ ನಡೆದಿದೆ. ಇದಕ್ಕೆ ಸರಕಾರ ಸ್ಪಂದಿಸಬೇಕು ಎಂದು ಅವರು ಕೋರಿದರು.
ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಾಂತ ಪಾಟೀಲ, ಉಪಾಧ್ಯಕ್ಷ ಗಿರೀಶ್ ದೋಂಗಡಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ