Latest

ರಾಜ್ಯ ರಾಜಕೀಯದಲ್ಲಿ ಎಲ್ಲವೂ ಗೊಂದಲಮಯ: ಎಲ್ಲರಲ್ಲಿ ಬಜೆಟ್ ಕುತೂಹಲ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಭಾರೀ ಕುತೂಹಲ ಮೂಡಿಸಿದ್ದ ರಾಜ್ಯ ವಿಧಾನಮಂಡಳದ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಿದೆ. ಆದರೆ ಬಹಿರಂಗವಾಗಿ ಅಂತಹ ಮಹತ್ವದ ಬೆಳವಣಿಗೆ ಏನೂ ನಡೆದಿಲ್ಲ. ವಿರೋಧ ಪಕ್ಷವಾದ ಬಿಜೆಪಿಯ ತಂತ್ರ ಮತ್ತು ಅದಕ್ಕೆ ಸಮ್ಮಿಶ್ರ ಸರಕಾರದ ಪ್ರತಿ ತಂತ್ರ ಎಲ್ಲವೂ ಕುತೂಹಲ ಕಾಯ್ದಿರಿಸಿವೆ.

ಮೊದಲ ದಿನ ನಡೆದ ರಾಜ್ಯಪಾಲರ ಭಾಷಣಕ್ಕೆ ಬಿಜೆಪಿ ತೀವ್ರ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಭಾಷಣವನ್ನು ಅರ್ಧಕ್ಕೇ ಮೊಟಕು ಗೊಳಿಸಿದರು. ನಿಮ್ಮ ಸರಕಾರ ಬಹುಮತ ಕಳೆದುಕೊಂಡಿದೆ. ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಭಾಷಣ ನಿಲ್ಲಿಸಿ ಎಂದು ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗಿದರು. ಭಾಷಣ ಮಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿ ಉಂಟಾಗಿದ್ದರಿಂದ ರಾಜ್ಯಪಾಲರು 22 ಪುಟದಲ್ಲಿ ಕೇವಲ 2 ಪುಟವನ್ನು ಮಾತ್ರ ಓದಿ ನಿರ್ಗಮಿಸಿದರು. 

ಕಾಂಗ್ರೆಸ್ಸಿನ ಒಟ್ಟು 8 ಮಂದಿ ಅಧಿವೇಶನಕ್ಕೆ ಗೈರು ಹಾಜರಾಗಿದ್ದಾರೆ. ರಮೇಶ್ ಜಾರಕಿಹೊಳಿ(ಗೋಕಾಕ), ಮಹೇಶ್ ಕುಮಟಳ್ಳಿ(ಅಥಣಿ), ನಾಗೇಂದ್ರ(ಬಳ್ಳಾರಿ ಗ್ರಾಮಾಂತರ), ಉಮೇಶ್ ಜಾಧವ್(ಚಿಂಚೋಳಿ) ಹಾಗೂ ಜೆ.ಎನ್. ಗಣೇಶ್(ಕಂಪ್ಲಿ), ಡಾ ಸುಧಾಕರ್ (ಚಿಕ್ಕಬಳ್ಳಾಪುರ), ರಾಮಲಿಂಗಾರೆಡ್ಡಿ, ಸೌಮ್ಯಾ ರೆಡ್ಡಿ ಸದನಕ್ಕೆ ಗೈರು ಹಾಜರಾಗಿದ್ದಾರೆ. ಬಿಜೆಪಿ ಶಾಸಕರಾದ ಅರವಿಂದ ಲಿಂಬಾವಳಿ, ಬಾಲಚಂದ್ರ ಜಾರಕಿಹೊಳಿ, ಅಶ್ವಥ ನಾರಾಯಣ್(ಮಲ್ಲೇಶ್ವರ) ಅವರು ಸಹ ಸದನಕ್ಕೆ ಹಾಜರಾಗಿಲ್ಲ.
ಎಲ್ಲ ಪಕ್ಷಗಳೂ ತಮ್ಮ ತಮ್ಮ ಶಾಸಕರ ಸಂಖ್ಯೆಯನ್ನು ಲೆಕ್ಕ ಹಾಕುವ ಕಾರ್ಯದಲ್ಲಿ ನಿರತರಾಗಿದ್ದು ಕುತೂಹಲ ಮೂಡಿಸಿತು. ಆಪರೇಶನ್ ಕಮಲ ಮತ್ತು ರಿವರ್ಸ್ ಆಪರೇಶನ್ ಭೀತಿ ಪಕ್ಷದ ನಾಯಕರಲ್ಲಿ ಮನೆ ಮಾಡಿದ್ದು, 8ನೇ ತಾರೀಖು ಬಜೆಟ್ ಮಂಡನೆ ಕುತೂಹಲ ಮೂಡಿಸಿದೆ.

ಎಲ್ಲ ಶಾಸಕರೂ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮೆಲ್ಲ ಶಾಸಕರಿಗೆ ಸೂಚನೆ ನೀಡಿದ್ದಾರೆ. ಮೊದಲ ಹಂತದಲ್ಲಿ ಕಾಂಗ್ರೆಸ್ ನ 4-6 ಶಾಸಕರ ರಾಜಿನಾಮೆ ಕೊಡಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದ್ದು, ಬಜೆಟ್ ಅಧಿವೇಶನದ ವೇಳೆಯೂ ಬಿಜೆಪಿ ಗದ್ದಲವೆಬ್ಬಿಸುವ ಸಾಧ್ಯತೆ ಇದೆ. ಬಜೆಟ್ ಗೆ ಅಡ್ಡಿಪಡಿಸುವುದಿಲ್ಲ ಎಂದು ಬಿಜೆಪಿ ಹೇಳುತ್ತಿದ್ದರೂ, ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿ ವ್ಯತಿರಿಕ್ತವಾಗಿ ನಡೆದುಕೊಂಡಿದ್ದರಿಂದ ಬಿಜೆಪಿ ನಿಲುವು ಎಲ್ಲರಲ್ಲಿ ಸಂಶಯಕ್ಕೆಡೆ ಮಾಡಿದೆ.

ಒಟ್ಟಾರೆ ರಾಜ್ಯ ರಾಜಕೀಯದಲ್ಲಿ ಎಲ್ಲವೂ ಗೊಂದಲಮಯವಾಗಿದ್ದು, ಯಾರು ಏನು ತಂತ್ರ ಹೆಣೆಯುತ್ತಿದ್ದಾರೆ ಎನ್ನುವುದು ಪರಸ್ಪರರಿಗೆ ಅರ್ಥವಾಗದೆ ಕಂಗಾಲಾಗಿದ್ದಾರೆ. ಪ್ರತಿಯೊಬ್ಬ ಶಾಸಕರನ್ನೂ ಸಂಶಯದ ದೃಷ್ಟಿಯಿಂದಲೇ ನೋಡುವಂತಾಗಿದೆ. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button