ಅಲ್ಲಿ ನಡೆಯುತ್ತಿದ್ದ ಕೆಲಸವನ್ನು ಸ್ಥಗಿತಗೊಳಿಸಿಯೇ ಅಲ್ಲಿಂದ ತೆರಳಿದ ಶಾಸಕಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ನೀರು ಶುದ್ಧೀಕರಣ ಘಟಕಕ್ಕಾಗಿ ಬಲಾತ್ಕಾರವಾಗಿ ಭೂಸ್ವಾಧೀನ ಮಾಡಿಕೊಂಡು, ಅದರಲ್ಲಿನ ಹಸಿರಾದ ಫಸಲನ್ನು ನಾಶಪಡಿಸಿದ ಜಿಲ್ಲಾಡಳಿತದ ವರ್ತನೆಯಿಂದ ನೊಂದ ರೈತರು, ಮಹಿಳೆಯರ ನೋವಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಕಣ್ಣೀರಾದರು.
ಬೆಂಗಳೂರಿನಿಂದ ಬೆಳಗಾವಿಗೆ ಬಂದಿಳಿದ ಹೆಬ್ಬಾಳಕರ್, ಹಲಗಾ ಗ್ರಾಮಕ್ಕೆ ತೆರಳಿ ಅಲ್ಲಿನ ಸಂತ್ರಸ್ತರ ನೋವನ್ನು ಆಲಿಸಿ, ಸಂತೈಸುವ, ಸಮಾಧಾನ ಹೇಳುವ ಪ್ರಯತ್ನ ಮಾಡಿದರು. ಇಲ್ಲಿಯ ಜಮೀನು ನಿಮ್ಮದಲ್ಲ, ನನ್ನದು ಎಂದು ತಿಳಿದು ನಿಮ್ಮ ಪರವಾಗಿ ನಾನು ಹೋರಾಡುತ್ತೇನೆ. ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಅವರು ಭರವಸೆ ನೀಡಿದರು.
ಅಭಿವೃದ್ಧಿಗೆ ನಾನೆಂದೂ ವಿರೋಧಿಯಲ್ಲ. ಆದರೆ ಇಂತಹ ಫಲವತ್ತಾದ ಜಮೀನಿನಲ್ಲಿ ಯೋಜನೆ ತರುವುದು ಸರಿಯಲ್ಲ. ಈ ಬಗ್ಗೆ ಕಳೆದ 4 ವರ್ಷದಿಂದ ನಾನು ನಿಮ್ಮ ಪರವಾಗಿ ಹೋರಾಡುತ್ತಿದ್ದೇನೆ. ಆದರೆ ನಾನು ಊರಲ್ಲಿಲ್ಲದ ಸಮಯದಲ್ಲಿ ಕರುಣೆ ಇಲ್ಲದೆ, ಯವುದೋ ಕಾಣದ ಕೈಗಳ ಕೈವಾಡದಿಂದ ಜಿಲ್ಲಾಡಳಿತ ಈ ರೀತಿ ವರ್ತಿಸಿದೆ. ನಾನು ಇಲ್ಲಿಯ ಶಾಸಕಿಯಾಗಿ ನಿಮಗೆ ಉತ್ತರ ಕೊಡುವುದು ಕಷ್ಟವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಕಣ್ಣೀರು ಹಾಕಿದರು.
ತಮ್ಮ ಬದುಕನ್ನೇ ಕಸಿದುಕೊಂಡ ಜಿಲ್ಲಾಡಳಿತದ ವರ್ತನೆಯಿಂದ ಕೆರಳಿದ ರೈತರು ಅಲ್ಲಿದ್ದ ಖುರ್ಚಿಗಳನ್ನು ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದರು. ತಡೆಯಲು ಬಂದ ಪೊಲೀಸರ ಬಳಿ, ಖುರ್ಚಿ ಮುರಿದರೆ ನಿಮಗೆ ಸಿಟ್ಟು ಬರುತ್ತದೆ. ಆದರೆ ನಾವು ನಂಬಿ, ಬದುಕು ಕಟ್ಟಿಕೊಂಡ ಜಮೀನನ್ನೇ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ನೋವು ಕೇಳುವವರ್ಯಾರು ಎಂದು ಪ್ರಶ್ನಿಸಿದರು.
ಹೆಬ್ಬಾಳಕರ್ ಎಲ್ಲರನ್ನೂ ಸಮಾಧಾನಪಡಿಸಿ, ನಿಮ್ಮ ಭೂಮಿ ಉಳಿಸಿಕೊಡಲು ನನ್ನಿಂದಾದ ಎಲ್ಲ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ, ಅಲ್ಲಿ ನಡೆಯುತ್ತಿದ್ದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ, ಕೆಲಸ ಮಾಡುತ್ತಿದ್ದವರನ್ನು ಅಲ್ಲಿಂದ ಕಳಿಸಿಯೇ ಲಕ್ಷ್ಮಿ ಹೆಬ್ಬಾಳಕರ್ ಅಲ್ಲಿಂದ ತೆರಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ