Latest

ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ

 

 ವರದಿ, ಚಿತ್ರ : ವಿನಾಯಕ ಮ್ಹೇತ್ರೆ, ಯಕ್ಸಂಬಾ
ಸಮೀಪದ ಇತಿಹಾಸ ಪ್ರಸಿದ್ಧ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಮಂಗಳವಾರ ಸಾಯಂಕಾಲ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವ ಲಕ್ಷಾಂತರ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರುಗಿತು.
ರಥೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಂಡು ತೇರು ಎಳೆದರು. ಶ್ರೀಶೈಲ ಪೀಠದ ಜಗದ್ಗುರುಗಳಾದ ಶ್ರೀ ಡಾ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಕಾಶಿಪೀಠದ ಜಗದ್ಗುರು ಶ್ರೀ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಹುಕ್ಕೇರಿಯ  ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ದಿವ್ಯ ಸಾನಿಧ್ಯವಹಿಸಿಕೊಂಡಿದ್ದರು. ಚಂದರಗಿ ಗಡದೇಶ್ವರ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಮಹಾಸ್ವಾಮೀಜಿ ಮಹಾರಥೋತ್ಸಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಬಾಗೋಜಿಕೊಪ್ಪದ ಶ್ರೀ ಡಾ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಮಂದ್ರೂಪದ ಶ್ರೀ ರೇಣುಕ ಶಿವಚಾರ್ಯ ಸ್ವಾಮೀಜಿ, ಬೆಳ್ಳಂಕಿಯ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಉಳಾಗಡ್ಡಿ ಕಾನಾಪೂರದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಮುತ್ತತ್ತಿಯ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಬ್ಬಳ್ಳಿಯ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ತಾವರಕೆರೆಯ ಶ್ರೀ ಡಾ ಅಭಿನವ ಸಿಧ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕಬ್ಬೂರದ ಶ್ರೀ ರೇವಣಸಿಧ್ಧ ಶಿವಾಚಾರ್ಯ ಸ್ವಾಮೀಜಿ, ಜಮಖಂಡಿಯ ಶ್ರೀ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಬನಹಟ್ಟಿಯ ಶ್ರೀ ಶರಣಬಸವ ಶಿವಾಚಾರ್ಯ ಸ್ವಾಮೀಜಿ, ಹೂಲಿಯ ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕರಬಂಟನಾಳದ ಶಿವಕುಮಾರ ಸ್ವಾಮೀಜಿ, ಪಾಶ್ಚಾಪೂರದ ಶ್ರೀ ವಿಶ್ವರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ನಾಗನಸೂರ, ಮಾಂಜರಿ, ಅಂಬಿಕಾನಗರ, ಜೈನಾಪುರ, ಕೊಣ್ಣೂರ, ಶಹಾಪುರ ಸೇರಿದಂತೆ ಅನೇಕ ಶಿವಾಚಾರ್ಯ ಸ್ವಾಮೀಜಿಗಳು, ಮಠಾಧೀಶರು, ಶಾಸ್ತ್ರಿಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಜನಮನ ಸೆಳೆದ ರಥೋತ್ಸವ 

 

ನಾಡಿನ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೃಷ್ಣಾ ನದಿಯ ತೀರದಲ್ಲಿ ಧರ್ಮ ಸಮನ್ವಯದ ಸಾಕ್ಷಾತ್ಕಾರ ಮೂಡಿಸುತ್ತಿರುವ ಗಡಿನಾಡಿನ ಸುಕ್ಷೇತ್ರ ಯಡೂರಿನ ಶ್ರೀ ವೀರಭದ್ರೇಶ್ವರ ಜಾತ್ರೆಯಲ್ಲಿ ಹಾಗೂ ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಮಹಾರಥೋತ್ಸವದಲ್ಲಿ ಭಕ್ತರು ಹರ ಹರ ಮಹಾದೇವ, ಖಡೇ ಖಡೇ ವೀರಭದ್ರೇಶ್ವರ ಎಂಬ ನಾಮಸ್ಮರಣೆಯೊಂದಿಗೆ ರಥ ಎಳೆಯುವ ದೃಶ್ಯಗಳು ಕಣ್ಮನ ಸೆಳೆದವು.

ವೀರಗಾಸೆ ಕುಣಿತ, ದಟ್ಟಿ ಕುಣಿತ, ಕರಡಿಮಜಲು, ಶಹನಾಯಿ ವಾದನ , ಸಂಬಾಳ, ಝಾಂಜ ಮೇಳ, ಹಲಗಿವಾದನ, ಕೀಲಕುದುರೆ, ಡೊಳ್ಳು ಸೇರಿದಂತೆ ಅನೇಕ ವಾದ್ಯಮೇಳಗಳು, ಕಲಾತಂಡಗಳು ರಥೋತ್ಸವಕ್ಕೆ ಮೆರಗು ತಂದವು. ಮಹಾರಥೋತ್ಸವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಬಿಗಿ ಪೊಲೀಸ ಬಂದೂಬಸ್ತ್ ಕೈಗೊಂಡಿದ್ದರು. ಈ ವರ್ಷದ ಜಾತ್ರೆಯಲ್ಲಿ ರಾಜ್ಯದ ವಿವಿಧ ಗ್ರಾಮಗಳಿಂದ ನೂರಕ್ಕೂ ಹೆಚ್ಚು ದೇವರ ಪಲ್ಲಕ್ಕಿಗಳು ವೀರಭದ್ರೇಶ್ವರನ ದರ್ಶನ ಪಡೆಯಲು ಅಮಾವಸ್ಯೆಯ ಮುನ್ನಾದಿನವೇ ಸುಕ್ಷೇತ್ರ ಯಡೂರು ಹಾಗೂ ಕಲ್ಲೋಳ ನದಿ ತೀರದಲ್ಲಿ ಸೇರಿದ್ದವು. ಪಲ್ಲಕ್ಕಿಗಳ ಜೊತೆಗೆ ಬರುವ ಭಕ್ತರು ಕೃಷ್ಣಾ ನದಿಯಲ್ಲಿ ಸ್ನಾನ ಮಾಡಿ ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನ ಪ್ರದಕ್ಷಿಣೆ ಹಾಕುವ ಮನಮೋಹಕ ದೃಶ್ಯ ನೋಡುಗರ ಕಣ್ಮನ ಸೆಳೆಯಿತು. ಜಾತ್ರೆಯಲ್ಲಿ ಸೇರಿದ ನೂರಾರು ಭಕ್ತರೆಲ್ಲ ಕೃಷ್ಣೆಯಲ್ಲಿ ಮಿಂದು ಮಡಿಯಿಂದಲೇ ದೇವಸ್ಥಾನಕ್ಕೆ ಬಂದು ವಿರುಪಾಕ್ಷಲಿಂಗಕ್ಕೆ ಅಭೀಷೇಕ ಮಹಾ ಪೂಜೆ ಮಾಡಿಸುವ ಕಾರ್ಯ ಮಧ್ಯಾಹ್ನದವರೆಗೆ ನಡೆಯಿತು. ಅಭೀಷೇಕ ಮಾಡಿಸಿದ ನಂತರ ಭಕ್ತರು ಪ್ರದಕ್ಷಿಣೆ, ದಂಡವತ್ತು , ಉರುಳು ಸೇವೆ , ಪಲ್ಲಕ್ಕಿ ಸೇವೆ, ಬುತ್ತಿ ಪೂಜೆ , ಅಕ್ಕಿ ಪೂಜೆ ,ಎಲಿ ಪೂಜೆ , ರುಧ್ರಾಭಿಷೇಕ ಸೇರಿದಂತೆ ವಿವಿಧ ಸೇವೆಗಳನ್ನು ಕೂಡ ಸಲ್ಲಿಸಿದರು. ಸಾಲು ಸಾಲಾಗಿ ಗಂಟೆಗಟ್ಟಲೆ ನಿಂತು ದರ್ಶನ ಪಡೆದರಲ್ಲದೇ ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವ ಮೆರೆದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button