Kannada NewsLatest

ವಿಟಿಯುದಲ್ಲಿ 3 ದಿನಗಳ ಕಾಲ ರಾಷ್ಟ್ರಮಟ್ಟದ ಸಮ್ಮೇಳನ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಸಾಮಾಜಿಕ ಬದಲಾವಣೆಯಂತೆ ಗ್ರಂಥಾಲಯಗಳಲ್ಲೂ ಬದಲಾವಣೆಗಳಾಗುತ್ತಿದ್ದು, ಎಲ್ಲವೂ ಡಿಜಿಟಲಿಕರಣಗೊಳ್ಳುತ್ತಿದೆ. ಇದರ ಕುರಿತು ಜೂನ್ ೬ ರಿಂದ ೮ ರವರೆಗೆ ಗ್ರಂಥಾಲಯಗಳಲ್ಲಿ ಅನ್ವೇಷಣೆ ಅವಕಾಶಗಳು ಎಂಬ ವಿಷಯದ ಮೇಲೆ ವಿಟಿಯು ಜ್ಞಾನ ಸಂಗಮ ಆವರಣದ ಡಾ. ಎ.ಪಿ.ಜೆ ಅಬ್ದುಲ್ ಕಲಾಮ್ ಪ್ರೇಕ್ಷಾಗೃಹದಲ್ಲಿ  ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪಾ ಹೇಳಿದರು.

ಶುಕ್ರವಾರ  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಎಲ್.ಐ.ಎಸ್ ಅಕಾಡೆಮಿ ಬೆಂಗಳೂರು ರಾಜ್ಯ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಗ್ರಂಥಾಲಯಗಳ ಕಾರ್ಯ ನಿರ್ವಹಣೆಯಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಮುದ್ರಣ ಕ್ಷೇತ್ರವು ಡಿಜಿಟಲ್ ರೂಪ ಪಡೆದುಕೊಳ್ಳುತ್ತಿರುವುದರಿಂದ ಈ ವಿಷಯದ ಬಗ್ಗೆ ಆಳವಾದ ಅಧ್ಯಯನದ ಹಾಗೂ ಸಂಶೋಧನೆ ಕೈಗೊಳ್ಳುವ ಉದ್ದೇಶದಿಂದ ಈ ರಾಷ್ಟ್ರ ಮಟ್ಟದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. 

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಲಿಕಾ ಸಾಮಗ್ರಿಗಳನ್ನು ಡಿಜಿಟಲ್ ರೂಪದಲ್ಲಿ ನಿರೀಕ್ಷೆ ಮಾಡುತ್ತಿದ್ದು, ಇಂತಹ ಸನ್ನಿವೇಶದಲ್ಲಿ ಅವರ ಬೇಡಿಕೆಗಳನ್ನು ಪೂರೈಸುವದು ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದರು.

ಸಮ್ಮೇಳನವು ಗ್ರಂಥಾಲಯ ವಿಜ್ಞಾನ ಕ್ಷೇತ್ರದ ಎಲ್ಲ ಸಹಭಾಗೀಧಾರರಿಗೆ ಹೊಸ ಹೊಸ ಅನ್ವೇಷಣೆಗಳು, ಸಂಶೋಧನಾ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಿ ಪರಿಣಮಿಸಲಾಗಿದೆ ಎಂದರು.

ಕರ್ನಾಟಕ ಸರ್ಕಾರದ ರಾಜ್ಯಪಾಲರು ಹಾಗೂ ವಿಟಿಯು ಕುಲಾಧಿಪತಿಗಳಾದ ವಾಜುಭಾಯಿ ಆರ್ ವಾಲಾ ಸಮ್ಮೇಳನವನ್ನು ಉದ್ಘಾಟಿಸುವರು, ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ವಿಟಿಯುದ ಸಮ- ಕುಲಾಧಿಪತಿಗಳಾದ ಜಿ.ಟಿ ದೇವೇಗೌಡರು ಉಪಸ್ಥಿತರಿರುವರು.

ವಿಟಿಯು ಕುಲಪತಿಗಳಾದ ಡಾ. ಕರಿಸಿದ್ದಪ್ಪ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರಾದ ಡಾ.ಎಸ್ ಎಸ್ ಹೊಸಮನಿ ಹಾಗೂ ಎಲ್ ಐ ಎಸ್ ಅಕ್ಯಾಡೆಮಿ ಅಧ್ಯಕ್ಷರಾದ ಡಾ.ಪಿ.ವಿ.ಕೊಣ್ಣೂರ ಸಮಾರಂಭದಲ್ಲಿ ಭಾಗಿಯಾಗುವರು ಹಾಗೂ ಧಾರವಾಡದ ಐಐಐಟಿ ನಿರ್ದೇಶಕರಾದ ಡಾ.ಕವಿ ಮಹೇಶ ಅವರು ಮುಖ್ಯ ಭಾಷಣ ಮಾಡುವರು.

ಅನಂತಪುರದ ಜವಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ.ಎಸ್ ಶ್ರೀನಿವಾಸ ಕುಮಾರ ಅವರು ಮುಖ್ಯ ಅತಿಥಿಯಾಗಿ ಆಗಮಿಸುವರು ಹಾಗೂ ವಿಟಿಯುದ ಪರೀಕ್ಷಾ ವಿಭಾಗದ ಪ್ರಭಾರಿ ಕುಲಸಚಿವರಾದ ಡಾ. ಸತೀಶ್ ಅಣ್ಣಿಗೇರಿ ಅವರು ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಟಿಯುದ ಪರೀಕ್ಷಾ ವಿಭಾಗದ ಪ್ರಭಾರಿ ಕುಲಸಚಿವರಾದ ಡಾ. ಸತೀಶ್ ಅಣ್ಣಿಗೇರಿ, ಎಲ್ ಐ ಎಸ್ ಅಕಾಡೆಮಿ ಅಧ್ಯಕ್ಷರಾದ ಪಿ.ವಿ.ಕಣ್ಣೂರು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button