ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಎಸ್ಎಸ್ಎಲ್ ಸಿ ನಂತರದ ಯಾವ ವಿಷಯ ಮತ್ತು ಯಾವ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆದರೆ ಸೂಕ್ತ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಅವಿನಾಶ ಪೋತದಾರ ಅವರು ಅಭಿಪ್ರಾಯಪಟ್ಟರು.
ಕೆಎಲ್ಎಸ್ ಸಂಸ್ಥೆಯ ಕೆ.ಕೆ.ವೇಣುಗೋಪಾಲ ಸಭಾಗೃಹದಲ್ಲಿ ಜೈನ್ ಇಂಟರ್ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಬೆಳಗಾವಿ ವಿಭಾಗ ಜಿತೋ ಸಂಸ್ಥೆಯ ವತಿಯಿಂದ ೯ ನೇ ತರಗತಿ ಮತ್ತು ೧೦ ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾದ ವೃತ್ತಿ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ಅನೇಕ ಗೊಂದಲಗಳಿರುತ್ತವೆ. ಸ್ನೇಹಿತರು ಯಾವ ಕಾಲೇಜಿಗೆ ಹೋಗುತ್ತಾರೆ ಅದೆ ಕಾಲೇಜಿಗೆ ನಾನೂ ಹೋಗಬೇಕೆಂಬ ಬಯಕೆ ಇರುತ್ತದೆ. ಆದರೆ ಈ ಶಿಕ್ಷಣದಿಂದ ವೃತ್ತಿ ಜೀವನ ಪಡೆಯಬಹುದೆ ಎಂಬುದು ಗೊತ್ತಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳ ಸಮಯ ಹಾಳಾಗುವುದಲ್ಲದೇ ಶೀಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ ಎಂದು ಹೇಳಿದ ಅವರು, ಪಾಲಕರೂ ಸಹ ವಿದ್ಯಾರ್ಥಿಗಳಿಗೆ ಇದೇ ಶಿಕ್ಷಣ ಪಡೆಯಬೇಕು ಎಂಬ ಹಠವಾದಿ ಧೊರಣೆ ತಾಳದೆ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸಿ ಸೂಕ್ತ ವೃತ್ತಿ ಜೀವನ ನೀಡುವ ಶಿಕ್ಷಣ ನೀಡಲು ಮುಂದಾಗಬೇಕೆಂದು ಅವರು ಸಲಹೆ ನೀಡಿದರು.
ಈ ಮಾರ್ಗದರ್ಶನ ಶಿಬಿರದಲ್ಲಿ ಭಕ್ತಿ ದೇಸಾಯಿ, ಡಾ.ಪೂರ್ಣಿಮಾ ಪಟ್ಟಣಶೆಟ್ಟಿ , ಅಭಿಷೇಕ ಬೆಂಡಿಗೇರಿ, ಮತ್ತು ಸ್ವಾತಿ ಜೋಗ ಅವರು ಮಾತನಾಡಿ, ಉನ್ನತ ಶಿಕ್ಷಣ ಪಡೆಯುವಲ್ಲಿ ಎದುರಿಸಬಹುದಾದ ಸಮಸ್ಯೆಗಳು ಮತ್ತು ಪರಿಹಾರ ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಜಿತೋ ಸಂಸ್ಥೆಯ ಕಾರ್ಯದರ್ಶಿ ವಿಕ್ರಮ ಜೈನ್, ರಾಹುಲ ಜೈನ್ , ಡಾ. ಗೋಮಟೇಶ ಕುಸನಾಳೆ, ಪುಷ್ಪಕ ಹನಮಣ್ಣವರ, ಸಂತೋಷ ಪೊರವಾಲ, ಅಂಕಿತ ಖೊಡಾ, ಪ್ರಮೋದ ಪಾಟೀಲ, ಮಹೇಂದ್ರ ಪರಮಾರ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ