Latest

ವಿದ್ಯುತ್ ಪೂರೈಕೆ ವ್ಯತ್ಯಯವಾಗದಂತೆ ಎಚ್ಚರ ವಹಿಸಲು ಮುಖ್ಯಮಂತ್ರಿ ಸೂಚನೆ

   ಪ್ರಗತಿವಾಹಿನಿ ಸುದ್ದಿ, ಬೆಂಗಳೂರು 
ಪರೀಕ್ಷಾ ಸಮಯ ಸಮೀಪಿಸುತ್ತಿರುವುದರಿಂದ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆಯಾಗದಂತೆ ಎಚ್ಚರ ವಹಿಸಬೇಕೆಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
 ಬೆಂಗಳೂರು ನಗರ ಹಾಗೂ ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರದ ಕೆಲವೆಡೆ ತಾಂತ್ರಿಕ ಸಮಸ್ಯೆಯಿಂದ ಕೆಲವು ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಲ್ಪ ಪ್ರಮಾಣದ ವ್ಯತ್ಯಯವುಂಟಾಗಿದ್ದು ಇದನ್ನು ಸರಿಪಡಿಸುವ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಫೆಬ್ರುವರಿ ತಿಂಗಳಿನೊಳಗೆ ಈ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.
ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ. ಪ್ರಸ್ತುತ ರಾಜ್ಯವು 27,926 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥೈ ಹೊಂದಿದ್ದು,  ಬೇಡಿಕೆಯನ್ನು ಪೂರೈಸಲು ರಾಜ್ಯ ಶಕ್ತವಾಗಿದೆ. ಜಲವಿದ್ಯುತ್ ಉತ್ಪಾದಿಸುವ ಜಲಾಶಯಗಳಲ್ಲೂ ನೀರಿನ ಸಂಗ್ರಹ ಇರುವುದರಿಂದ ಬೇಸಿಗೆಯಲ್ಲೂ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರ ವಹಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಇತರ ಎಸ್ಕಾಂ ಮುಖ್ಯಸ್ಥರೊಂದಿಗೆ ಸಹ ಚರ್ಚೆ ನಡೆಸಿದರು.
ಸಭೆಯಲ್ಲಿ ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಸೆಲ್ವಕುಮಾರ್, ಕೆಪಿಸಿ ವ್ಯವಸ್ಥಾಪಕ ನಿರ್ದೇಶಕ ಪೊನ್ನುರಾಜ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿ. ಶಿಖಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button