Latest

ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿದ ಸ್ಪೀಕರ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಬಿಜೆಪಿ ನಡೆಸುತ್ತಿರುವ ಗದ್ದಲ ನಿಲ್ಲದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ ಕುಮಾರ ವಿಧಾನಸಭೆಯ ಕಲಾಪವನ್ನು ಮತ್ತೆ ಮುಂದೂಡಿದ್ದು, ಶುಕ್ರವಾರ ಮಧ್ಯಾಹ್ನ 12.30ಕ್ಕೆ ಕಲಾಪ ಸೇರಲಿದೆ.

ಶುಕ್ರವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸುವ ಕಾರ್ಯಕ್ರಮವಿದ್ದು, ಬಿಜೆಪಿ ಅದಕ್ಕಾದರೂ ಅವಕಾಶ ಕೊಡುತ್ತದೆಯೋ ಎನ್ನುವುದು ಗೊತ್ತಾಗಿಲ್ಲ. ಈ ಸಂಬಂಧ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಆರ್.ಅಶೋಕ, ನಾಳೆ ಏನು ಮಾಡಬೇಕೆನ್ನುವುದನ್ನು ನಾಳೆಯೇ ತೀರ್ಮಾನಿಸುತ್ತೇವೆ. ಇಂದಿನದಷ್ಟನ್ನೇ ಈಗ ತೀರ್ಮಾನಿಸಿದ್ದೇವೆ ಎಂದರು.

ಈ ಮಧ್ಯೆ ಬಿಜೆಪಿ ಜೆಡಿಎಸ್ ಗೆ ಸರಕಾರ ರಚಿಸಲು ಬಾಹ್ಯ ಬೆಂಬಲ ನೀಡುವ ಆಫರ್ ನೀಡಿದೆ ಎನ್ನುವ ವದಂತಿ ಹರಡಿದೆ. ಕಾಂಗ್ರೆಸ್ ಮೈತ್ರಿಯಿಂದ ಹೊರಗೆ ಬಂದರೆ ತಾನು ಬೆಂಬಲ ನೀಡುವುದಾಗಿ ಹೇಳಲಾಗುತ್ತಿದೆ. ಆದರೆ ಬಿಜೆಪಿ ಇದನ್ನು ಪುಷ್ಠೀಕರಿಸಿಲ್ಲ. ರಾಷ್ಟ್ರಮಟ್ಟದಲ್ಲಿ ಮಹಾಘಟಬಂಧನ್ ಪ್ರಯತ್ನದಲ್ಲಿರುವ ಜೆಡಿಎಸ್ ಈ ಆಫರ್ ಗೆ ಒಪ್ಪುವ ಸಾಧ್ಯತೆಯೂ ಕಡಿಮೆ. 

ಇನ್ನೊಂದೆಡೆ, ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಕಾಂಗ್ರೆಸ್-ಜೆಡಿಎಸ್ ಸಂಸದರು, ಬಿಜೆಪಿ ಕಾಂಗ್ರೆಸ್ ಶಾಸಕರನ್ನು ಬಂಧಿಸಿಟ್ಟುಕೊಂಡಿದೆ ಎಂದು ಆರೋಪಿಸಿದ್ದಾರೆ. ಸರಕಾರ ನಡೆಸಲು ಅವಕಾಶ ಕೊಡುತ್ತಿಲ್ಲ. ನಮ್ಮ ಶಾಸಕರನ್ನು ಮುಂಬೈನಲ್ಲಿ ಮಹಾರಾಷ್ಟ್ರ ಸರಕಾರ ಮತ್ತು ಕೇಂದ್ರ ಸರಕಾರ ಬಲಾತ್ಕಾರವಾಗಿ ಹಿಡಿದಿಟ್ಟುಕೊಂಡಿದೆ  ಎಂದು ಅವರು ಆರೋಪಿಸಿದರು.

ಈಗ ಕ್ಲೈಮ್ಯಾಕ್ಸ್ ಕುತೂಹಲ ಶುಕ್ರವಾರಕ್ಕೆ ಮುಂದೂಡಿಕೆಯಾಗಿದ್ದು, ಗುರುವಾರ ಸಂಜೆ ಕಾಂಗ್ರೆಸ್ ನ ಕೆಲವು ಶಾಸಕರು ರಾಜಿನಾಮೆ ನೀಡಿದರೂ ನೀಡಬಹದು ಎನ್ನುವ ಸುದ್ದಿಯೂ ಇದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button