Latest

ವಿಶೇಷ ಘಟಕ, ಗಿರಿಜನ ಉಪ ಯೋಜನೆಗಳಿಗೆ ಗುರಿ ನಿಗದಿ: ಪ್ರಿಯಾಂಕ್ ಖರ್ಗೆ

 

 

ಪ್ರಗತಿವಾಹಿನಿ ಸುದ್ದಿ, ಸುವರ್ಣವಿಧಾನಸೌಧ, ಬೆಳಗಾವಿ
೨೦೧೮-೧೯ ನೇ ಸಾಲಿನ ಆಯವ್ಯಯದಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಾಗಿ ಒಟ್ಟು ೨೯,೨೦೯.೪೭ ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ತಿಳಿಸಿದರು.
ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಶಾಸಕ ಗೋವಿಂದ ಕಾರಜೋಳ ಅವರ ಪ್ರಶ್ನೆಗೆ ಉತ್ತರಿಸಿ ಅವರು ೨೦೧೮-೧೯ ನೇ ಸಾಲಿನ ಆಯವ್ಯಯದಲ್ಲಿ ವಿಶೇಷ ಘಟಕ ಯೋಜನೆಗೆ ೨೦,೭೦೯.೫೮ ಕೋಟಿ ರೂ. ಹಾಗೂ ಗಿರಿಜನ ಉಪ ಯೋಜನೆಯಡಿ ೮೫೦೦.೮೯ ಕೋಟಿ ರೂ. ಸೇರಿದಂತೆ ಒಟ್ಟು ೨೯,೨೦೯.೪೭ ಕೋಟಿ ರೂ. ನಿಗದಿಪಡಿಸಲಾಗಿದೆ. ಈ ಪೈಕಿ ಈಗಾಗಲೇ ೧೪೬.೦೪ ಕೋಟಿ ಬಿಡುಗಡೆ ಮಾಡಲಾಗಿದ್ದು ೯೫.೦೬ ಕೋಟಿ ರೂ ವೆಚ್ಚ ಮಾಡಲಾಗಿದೆ ಎಂದು ಸಚಿವರು ವಿವರಿಸಿದರು.
ಈಗಾಗಲೇ ವಿವಿಧ ಇಲಾಖೆಗಳಿಗೆ ಈ ಎರಡೂ ಯೋಜನೆಗಳಡಿ ಅನುದಾನ ನಿಗದಿಗೊಳಿಸಿ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಈ ಹಂತದಲ್ಲಿ ಅನುದಾನವನ್ನು ಬೇರೊಂದು ಉದ್ದೇಶಕ್ಕೆ ಬಳಸಲು ಅವಕಾಶವಿರುವುದಿಲ್ಲ. ಭೂ-ಒಡೆತನ ಯೋಜನೆಯಡಿ ಈಗಾಗಲೇ ಡಾ ಬಿ. ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಭೂ ಒಡೆತನ ಯೋಜನೆಗೆ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಉಪ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಡಾ ಅನ್ನದಾನಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಾದ್ಯಂತ ಭೂ ಒಡೆತನ ಯೋಜನೆಯಡಿ ಡಾ ಬಿ. ಆರ್ .ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ೨೦೧೬-೧೭ ನೇ ಸಾಲಿನಿಂದ ೨೦೧೮-೧೯ ನೇ ಸಾಲಿನವರೆಗೆ ಒಟ್ಟು ೩೩೦೨ ಫಲಾನುಭವಿಗಳಿಗೆ ೪೧೧೮.೩೬ ಎಕರೆ ಭೂಮಿಯನ್ನು ಖರೀದಿಸಲಾಗಿದೆ. ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ೨೦೧೬-೧೭ ಮತ್ತು ೨೦೧೭-೧೮ ನೇ ಸಾಲಿನಲ್ಲಿ ೫೧೪ ಫಲಾನುಭವಿಗಳಿಗೆ ೬೦೧.೦೯ ಎಕರೆ ಭೂಮಿಯನ್ನು ಖರೀದಿಸಲಾಗಿದೆ ಎಂದು ಸಚಿವರು ಅಂಕಿ-ಅಂಶಗಳನ್ನು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button