ಇಲಾಖೆಗೊಬ್ಬ ಮಂತ್ರಿಯೇ ಇಲ್ಲ, ಇನ್ನು ವರ್ಗಾವಣೆ ಎಲ್ಲಿ?
ಪ್ರಗತಿವಾಹಿನಿ ವಿಶೇಷ
ಎಂ.ಕೆ.ಹೆಗಡೆ, ಬೆಳಗಾವಿ
ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಶಿಕ್ಷಣ ಇಲಾಖೆಯ ಭವಿಷ್ಯವೇ ರಾಜ್ಯದಲ್ಲಿ ಅಯೋಮಯವಾಗಿದೆ.
ಶಿಕ್ಷಣ ಇಲಾಖೆಗೆ ಮಂತ್ರಿಯೂ ಇಲ್ಲ, ಗಟ್ಟಿ ನಿರ್ಧಾರ ತೆಗೆದುಕೊಳ್ಳಬಲ್ಲ ಅಧಿಕಾರಿಗಳೂ ಇಲ್ಲ. ಈ ಬಗ್ಗೆ ಗಮನ ಹರಿಸಲು ಶಿಕ್ಷಣ ಇಲಾಖೆಯ ಪ್ರಭಾರ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗೆ ಸಮಯವೇ ಇಲ್ಲ. ಈ ಎಲ್ಲದರ ಮಧ್ಯೆ, ಶಿಕ್ಷಕರು ಮನಸ್ಸು ಕೊಟ್ಟು ಮಕ್ಕಳಿಗೆ ಪಾಠ ಮಾಡುವಂತಹ ವಾತಾವರಣ ಮೊದಲೇ ಇಲ್ಲ.
ಪರೀಕ್ಷೆಗಳು ಹತ್ತಿರ ಬಂದಿವೆ. ಪದವಿಪೂರ್ವ ಶಿಕ್ಷಣ ಇಲಾಖೆ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವು ಪ್ರಮುಖ ಹುದ್ದೆಗಳೇ ಖಾಲಿ ಇವೆ. ಅಧಿಕಾರಿಗಳ ಮಧ್ಯೆ ಸಮನ್ವಯವೂ ಇಲ್ಲ.
ಈ ಎಲ್ಲದರ ಮಧ್ಯೆ, ಪ್ರತಿವರ್ಷ ನಡೆಯಬೇಕಿದ್ದ ಶಿಕ್ಷಕರ ವರ್ಗಾವಣೆ ಇಲ್ಲದೆ 3 ವರ್ಷವಾಯಿತು. ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು, ಉಪನ್ಯಾಸಕರು ಚಾತಕ ಪಕ್ಷಿಯಂತೆ ಈ ವರ್ಷ ಆದೀತು… ಮುಂದಿನ ವರ್ಷ ಆದೀತು… ಎಂದು ಕಾಯುತ್ತಲೇ ಇದ್ದಾರೆ.
ಆದರೆ ಪ್ರತಿ ವರ್ಷ ಒಂದೊಂದು ಕಾರಣದಿಂದ ವರ್ಗಾವಣೆ ಅಯೋಮಯವಾಗಿದೆ. ಅದಕ್ಕೆ ಈ ವರ್ಷ ಮೂರು ಕಾರಣಗಳು ಸೇರ್ಪಡೆಯಾಗಿವೆ. ಹಾಗಾಗಿ ಈ ವರ್ಷ ವರ್ಗಾವಣೆಯಾದೀತು ಎಂದು ಕಾದಿದ್ದರೆ ಅಂತಹ ಕನಸನ್ನು ಬಿಟ್ಟುಬಿಡಿ.
ಮೊದಲ ಕಾರಣ ಸಚಿವರಿಲ್ಲದ ಇಲಾಖೆ…
ರಾಜ್ಯದ ಸಮ್ಮಿಶ್ರ ಸರಕಾರದ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ ರಾಜಿನಾಮೆ ನೀಡಿ 4 ತಿಂಗಳಾಯಿತು. ಅಕ್ಟೋಬರ್ 11ಕ್ಕೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಅವರು ಸಚಿವರಾಗಿದ್ದಾಗ ಏನು ಸಾಧಿಸಿದ್ದಾರೆ ಎನ್ನುವುದು ಚರ್ಚಿಸಬೇಕಾದ ವಿಷಯವಾದರೂ, ಹೆಸರಿಗಾದರೂ ಸಚಿವರಿದ್ದರು. ಮಹೇಶ್ ಅಕ್ಟೋಬರ್ ಹೊತ್ತಿಗೆ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಪ್ರಯತ್ನಿಸಿದ್ದರು. ವರ್ಗಾವಣೆ ಕೋರಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೂ ನಡೆದಿತ್ತು. ಆದರೆ ನಂತರ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ.
ಮಹೇಶ ರಾಜಿನಾಮೆ ನೀಡಿದ ನಂತರ ಶಿಕ್ಷಣ ಇಲಾಖೆಯ ಜವಾಬ್ದಾರಿ ಮುಖ್ಯಮಂತ್ರಿಗಳ ಹೆಗಲಿಗೇರಿದೆ. ಆ ಇಲಾಖೆಯನ್ನು ಅವರು ಯಾರಿಗೂ ವಹಿಸಿಲ್ಲ. ಮಹೇಶ ವಾಪಸ್ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಮುಖ್ಯಮಂತ್ರಿಗಳು ಇದ್ದ ಹಾಗಿದೆ. ಅಥವಾ ಜೆಡಿಎಸ್ ಗೆ ನೀಡಲಾಗಿರುವ ಈ ಹುದ್ದೆಗೆ ಸಚಿವ ಸಂಪುಟ ವಿಸ್ತರಣೆ ವೇಳೆ ಭರ್ತಿ ಮಾಡಲಾಗುತ್ತದೆಯೋ ಗೊತ್ತಿಲ್ಲ.
ಸಚಿವರೇ ಇಲ್ಲದ್ದರಿಂದ ವರ್ಗಾವಣೆಯ ಗಟ್ಟಿ ನಿರ್ಧಾರ ತೆಗೆದುಕೊಳ್ಳುವವರಿಲ್ಲ. ವರ್ಗಾವಣೆ ನಿಯಮ ತಿದ್ದುಪಡಿಯಾದ ನಂತರ ಉಂಟಾಗಿರುವ ಗೊಂದಲ ಮೀರಿ ದೃಢ ನಿರ್ಧಾರ ತೆಗೆದುಕೊಳ್ಳುವವರು ಬೇಕಾಗಿದ್ದಾರೆ. ಕಳೆದ ವರ್ಷ ಶಿಕ್ಷಣ ಸಚಿವರಾಗಿದ್ದ ತನ್ವೀರ್ ಸೇಠ್ ಒಂದು ವರ್ಗದ ಶಿಕ್ಷಕರ ಲಾಬಿಗೆ ಮಣಿದು, ಇಲ್ಲದ ನೆಪ ಹೇಳಿ ವರ್ಗಾವಣೆ ಮುಂದೂಡುತ್ತ ಮುಂದೂಡುತ್ತ ಕೊನೆಗೂ ಕೈ ಬಿಟ್ಟು ಹೋದರು. ಈ ಬಾರಿ ಈ ಬಗ್ಗೆ ಗಮನ ಹರಿಸಲು ಮುಖ್ಯಮಂತ್ರಿಗಳಿಗೆ ರಾಜಕೀಯ ಗೊಂದಲದ ಮಧ್ಯೆ ಸಮಯವಿಲ್ಲ.
ಎರಡನೇ ಕಾರಣ ನಗರ ಶಿಕ್ಷಕರ ಲಾಬಿ…
ಈ ವರ್ಷ ಮತ್ತು ಕಳೆದ 3 ವರ್ಷದಿಂದ ಶಿಕ್ಷಕರ ವರ್ಗಾವಣೆ ನಡೆಯದಿರಲು ಪ್ರಮುಖ ಕಾರಣ ವರ್ಗಾವಣೆ ನಿಯಮದಲ್ಲಾಗಿರುವ ತಿದ್ದುಪಡಿ. ಮೊದಲ ವರ್ಷ ತಿದ್ದುಪಡಿ ತರುವವರೆಗೆ ವರ್ಗಾವಣೆ ಮಾಡುವುದಿಲ್ಲ. ಎ ವಲಯದಲ್ಲಿರುವ ಶಿಕ್ಷಕರನ್ನು ಸಿ ವಲಯಕ್ಕೆ, ಸಿ ವಲಯದಲ್ಲಿರುವವರನ್ನು ಬಿ ವಲಯಕ್ಕೆ, ಬಿ ವಲಯದಲ್ಲಿರುವವರನ್ನು ಎ ವಲಯಕ್ಕೆ… ಹೀಗೆ ಹತ್ತಾರು ವರ್ಷದಿಂದ ನಗರದಲ್ಲೇ ಬೀಡು ಬಿಟ್ಟಿರುವ ಶಿಕ್ಷಕರನ್ನು ಗ್ರಾಮೀಣಕ್ಕೆ ಕಳುಹಿಸಿ, ಗ್ರಾಮೀಣದಲ್ಲಿ ಹಲವಾರು ವರ್ಷದಿಂದ ಕೆಲಸ ಮಾಡುತ್ತಿರುವವರನ್ನು ನಗರ ವಲಯಕ್ಕೆ ವರ್ಗಾಯಿಸುವ ಮಹತ್ವದ ತಿದ್ದುಪಡಿಯನ್ನು ಇಲಾಖೆ ಮಾಡಿತು.
ಆದರೆ, ನಗರದಲ್ಲಿ ಬೀಡು ಬಿಟ್ಟಿರುವ ಶಿಕ್ಷಕರು ಲಾಬಿ ಮಾಡಿ, ಅಂದಿನ ಶಿಕ್ಷಣ ಸಚಿವರ ಮೇಲೆ ಒತ್ತಡ ತಂದು ವರ್ಗಾವಣೆ ನಡೆಯದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಮತ್ತೆ ನಿಯಮಾವಳಿಯಲ್ಲಿ ಕೆಲವು ತಿದ್ದುಪಡಿ ಮಾಡಿಸುವಲ್ಲೂ ಯಶಸ್ವಿಯಾದರು. ಆದರೆ, ನಂತರ ವಿಧಾನ ಸಭೆ ಚುನಾವಣೆ ನೆಪದಲ್ಲಿ ವರ್ಗಾವಣೆ ನಡೆಯಲೇ ಇಲ್ಲ. ಒಂದಿಷ್ಟು ಪ್ರಕ್ರಿಯೆಗಳು ನಡೆದು, ಅರ್ಜಿಗಳನ್ನು ಸ್ವೀಕರಿಸಲಾಯಿತಾದರೂ ಅವೆಲ್ಲ ಕಸದ ಬುಟ್ಟಿಗೆ ಸೇರಿದವು.
ಈಗಲೂ ವರ್ಗಾವಣೆ ನಿಯಮ ತಿದ್ದುಪಡಿ ಗೊಂದಲವಿರುವುದರಿಂದ ಮತ್ತು ನಗರದಲ್ಲಿ ಬೀಡು ಬಿಟ್ಟಿರುವ ಶಿಕ್ಷಕರ ಲಾಬಿ ಗಟ್ಟಿಯಾಗಿರುವುದರಿಂದ ವರ್ಗಾವಣೆ ದಂಧೆಗೆ ಸರಕಾರ ಕೈ ಹಾಕುವುದು ಸುಲಭವಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಅಂತಹ ಧೈರ್ಯ ಮಾಡುತ್ತಾರೆಂದು ನಿರೀಕ್ಷಿಸುವುದು ಕಷ್ಟ.
ಮೂರನೇ ಕಾರಣ ಲೋಕಸಭಾ ಚುನಾವಣೆ…
ಈ ವರ್ಷ ಶಿಕ್ಷಕರ ವರ್ಗಾವಣೆ ಆಗದಿರಲು ಮೂರನೇ ಕಾರಣ ಹತ್ತಿರ ಬಂದಿರುವ ಲೋಕಸಭಾ ಚುನಾವಣೆ. ಮಾರ್ಚ್ ತಿಂಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾಗಲಿದೆ. ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆ ನೀತಿ ಸಂಹಿತ ಜಾರಿಯಾಗಲಿರುವುದರಿಂದ ಮತ್ತು ಚುನಾವಣೆ ಕಾರ್ಯದಲ್ಲಿ ಶಿಕ್ಷಕರು ತೊಡಗಬೇಕಿರುವುದರಿಂದ ಇನ್ನು ಮುಂದೆ ಚುನಾವಣೆ ಪ್ರಕ್ರಿಯೆ ಪೂರ್ಣವಾಗುವವರೆಗೆ ವರ್ಗಾವಣೆ ಕೈಗೆತ್ತಿಕೊಳ್ಳುವುದು ಅಸಾಧ್ಯ. ಸರಕಾರಕ್ಕೆ ವರ್ಗಾವಣೆ ನಡೆಸುವ ಮನಸ್ಸಿದ್ದಿದ್ದರೆ ಇಷ್ಟರಲ್ಲಾಗಲೇ ಪ್ರಕ್ರಿಯೆ ಪೂರ್ಣಗೊಳಿಸಬಹುದಿತ್ತು.
ಲೋಕಸಭಾ ಚುನಾವಣೆ ಪ್ರಕ್ರಿಯೆ ಮುಗಿದು, ನೀತಿ ಸಿಹಿತೆ ಮುಗಿಯುವ ಹೊತ್ತಿಗೆ ಶಾಲೆಗಳು ಪುನಾರಂಭಗೊಳ್ಳುತ್ತವೆ. ಆ ಹಂತದಲ್ಲಿ ವರ್ಗಾವಣೆ ಕೈಗೆತ್ತಿಕೊಂಡರೆ ಪ್ರಕ್ರಿಯೆ ಆರಂಭವಾಗಿ ಪೂರ್ಣಗೊಳ್ಳಲು ಕನಿಷ್ಟ 3 ತಿಂಗಳು ಬೇಕಾಗುತ್ತದೆ. ಅಷ್ಟು ಹೊತ್ತಿಗೆ ಏನೇನು ರಾಜಕೀಯ ಗೊಂದಲಗಳು ನಡೆಯುತ್ತವೆಯೋ… ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯದ ಸಮ್ಮಿಶ್ರ ಸರಕಾರದ ಭವಿಷ್ಯವೆನಾಗುತ್ತದೆಯೋ…
‘ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ’ ಎನ್ನುವಂತೆ ಶಿಕ್ಷಕರಿಗೆ ಮಾತ್ರ ವರ್ಗಾವಣೆ ಭಾಗ್ಯವಿಲ್ಲ.
—–
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ, ಗ್ರುಪ್ ಗಳಿಗೆ ಶೇರ್ ಮಾಡಿ… ಲಿಂಕ್ ಓಪನ್ ಮಾಡಿದಾಗ ಕಾಣುವ ಬೆಲ್ ಐಕಾನ್ ಒತ್ತಿ ಉಚಿತವಾಗಿ ಸಬ್ ಸ್ಕ್ರೈಬ್ ಮಾಡಿ, ನಿರಂತರವಾಗಿ ಸುದ್ದಿಗಳನ್ನು ಪಡೆಯಿರಿ. ಸಲಹೆ, ಸೂಚನೆ, ಸಮಸ್ಯೆಗಳಿದ್ದರೆ ಕೆಳಗೆ ಕಾಣುವ ಕಮೆಂಟ್ ಬಾಕ್ಸ್ ನಲ್ಲಿ ಬರೆಯಿರಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ