ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಕೆಎಲ್‌ಇ ಸಂಸ್ಥೆಯನ್ನು ಹುಟ್ಟುಹಾಕಿದ ಸಪ್ತರ್ಷಿಗಳು ಮಹಾನ್ ಶಿಕ್ಷಕರು. ಅವರ ಆಶೀರ್ವಾದದ ಫಲವೇ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತನಾದೆ. ಈ ಪ್ರಶಸ್ತಿಯ ಗೌರವ ಕೆಎಲ್‌ಇ ಸಂಸ್ಥೆಗೆ ಸಲ್ಲಬೇಕೆಂದು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕೌಜಲಗಿ ಹೇಳಿದರು.
ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಡಾ.ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿಯ ಇಚ್ಛಾಶಕ್ತಿಯ ಪ್ರತಿಫಲವಾಗಿ ಸಂಸ್ಥೆಯು ಇಂದು ಭಾನೆತ್ತರಕ್ಕೆ ಸಾಗಲು ಸಾಧ್ಯವಾಯಿತು. ನಮ್ಮ ಆಡಳಿತ ಮಂಡಳಿಯವರಲ್ಲಿ ಎಲ್ಲರೂ ಬೇರೆ ಬೇರೆ ಪಕ್ಷಕ್ಕೆ ಸೇರಿದ್ದರೂ ನಮ್ಮ ನಿಲುವುಗಳು ಒಂದೇ. ಅದು ಕೆಎಲ್‌ಇ ಶಿಕ್ಷಣ ಸಂಸ್ಥೆಯನ್ನು ಮನಸಾರೆ ಕಟ್ಟುವುದೇ ಆಗಿತ್ತು. ಹಾಗಾಗೀ ಸಂಸ್ಥೆಯನ್ನು ರಚನಾತ್ಮಕವಾಗಿ ಕ್ರಿಯಾತ್ಮಕವಾಗಿ ಇಂದು ನಿರ್ಮಿಸುವ ಮೂಲಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳನ್ನು ವಿಸ್ತರಿಸಲು ಅನುಕೂಲವಾಯಿತೆಂದರು.
ಅಭಿನಂದನ ನುಡಿಗಳನ್ನಾಡಿದ ಹಿರಿಯ ಸಾಹಿತಿ ಡಾ.ಬಸವರಾಜ ಜಗಜಂಪಿ, ಶಿವಾನಂದ ಕೌಜಲಗಿ ಸರಳತೆಗೆ ಭಾಷ್ಯವಾಗಿ, ಸಹಜತೆಗೆ ವ್ಯಾಖ್ಯಾನವಾಗಿ, ಪ್ರಾಮಾಣಿಕತೆಗೆ ನಿಚ್ಚಳ ನಿದರ್ಶನವಾಗಿ, ಕರ್ತವ್ಯಪ್ರಜ್ಞೆಗೆ ಉಜ್ವಲ ಉದಾಹರಣೆಗಾಗಿ ಬದುಕಿದವರು. ಸರಳತೆಯಿಂದಲೇ ಜನಸಮೂಹವನ್ನು ಸೂಜಿಗಲ್ಲಿನಂತೆ ಸೆಳೆದವರು. ಕೆಎಲ್‌ಇ ಸಂಸ್ಥೆಯ ಅಧ್ಯಕ್ಷರಾಗಿ ಅವರು ಸಲ್ಲಿಸುತ್ತಿರುವ ಸೇವೆ ಬಹುಮೌಲಿಕ. ಓರ್ವ ಸಜ್ಜನ ರಾಜಕಾರಣಿಯಾಗಿ ಜನಪ್ರತಿನಿಧಿಗಳಿಗೊಂದು ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ ಕೋರೆ ಮಾತನಾಡಿ, ನಾನು ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷನಾಗಿ ೧೯೮೪ ರಲ್ಲಿ ನಿಯೋಜಿತನಾದೆ. ನನಗಿಂತಲೂ ಒಂದು ವರ್ಷ ಪೂರ್ವದಲ್ಲಿ ಶಿವಾನಂದ ಕೌಜಲಗಿಯವರು ಈ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ತಂದೆ ಎಚ್. ವ್ಹಿ. ಕೌಜಲಗಿ ಹೆಸರಾಂತ ವಕೀಲರಾಗಿ, ಕರ್ನಾಟಕ ಸರಕಾರದಲ್ಲಿ-ಕಂದಾಯ ಇಲಾಖೆಯ ಸಚಿವರಾಗಿ ಹಾಗೂ ಕೆಎಲ್ಇ ಸಂಸ್ಥೆಯ ಅಧ್ಯಕ್ಷರಾಗಿ ಗುರುತಿಸಿಕೊಂಡಿದ್ದರು. ಅವರ ಆದರ್ಶಗಳನ್ನೇ ಮುಂದಿಟ್ಟುಕೊಂಡು ಕೆಎಲ್ಇ ಸಂಸ್ಥೆಯ ಸೇವೆಯಲ್ಲಿ ಶಿವಾನಂದ ಕೌಜಲಗಿ ತೊಡಗಿಸಿಕೊಂಡಿದ್ದನ್ನು ಗುರುತಿಸಿದ್ದೆ. ಕಾರ್ಯಾಧ್ಯಕ್ಷನಾದಾಗ ಬೆನ್ನು ಚಪ್ಪರಿಸಿ ನನ್ನನ್ನು ಪ್ರೋತ್ಸಾಹಿಸಿದರು. ಹೆಜ್ಜೆ ಹೆಜ್ಜೆಗೆ ಮಾರ್ಗದರ್ಶನ ಮಾಡಿದರು ಎಂದರು.
ವೇದಿಕೆಯ ಮೇಲೆ ಕೆಎಲ್‌ಇ ಉಪಕಾರ್ಯಾಧ್ಯಕ್ಷ ಅಶೋಕ ಬಾಗೇವಾಡಿ ಉಪಸ್ಥಿತರಿದ್ದರು. ಕೆಎಲ್‌ಇ ಆಡಳಿತ ಮಂಡಳಿಯ ಸದಸ್ಯರಾದ ಶಂಕರಣ್ಣಾ ಮುನವಳ್ಳಿ, ವಾಯ್.ಎಸ್.ಪಾಟೀಲ, ಅನಿಲ ಪಟ್ಟೇದ, ಡಾ.ವಿ.ಎಸ್. ಸಾಧುನವರ, ಬಿ.ಆರ್. ಪಾಟೀಲ, ಎಸ್.ಸಿ. ಮೆಟಗುಡ್, ಜೆ.ಎಂ. ಮುನವಳ್ಳಿ, ಡಾ.ವಿ.ಡಿ.ಪಾಟೀಲ, ಡಾ.ವಿವೇಕ ಸಾವಜಿ, ಡಾ.ಸುನೀಲ ಜಲಾಲಪುರೆ, ಡಾ.ಪ್ರೀತಿ ದೊಡವಾಡ, ಡಾ.ನಿರಂಜನಾ ಮಹಾಂತಶೆಟ್ಟಿ ಆಗಮಿಸಿದ್ದರು. ಕೆಎಲ್‌ಇ ಆಜೀವ ಸದಸ್ಯ ಮಹಾದೇವ ಬಳಿಗಾರ ಸ್ವಾಗತಿಸಿದರು. ಕು.ಬಸಮ್ಮ ಮಠದ ವಚನ ಪ್ರಾರ್ಥಿಸಿದರು. ಡಾ.ಮಹೇಶ ಸಿ. ಗುರನಗೌಡರ ನಿರೂಪಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ