ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ಶಿಕ್ಷಣಕ್ಕೆ ಮೊದಲ ಪ್ರಾಧಾನ್ಯತೆ ದೊರೆತರೆ ಮಾತ್ರ ದೇಶವು ಸರ್ವತೋಮುಖ ಬೆಳೆಯಲು ಸಾಧ್ಯ’ ಎಂದು ಹುಣಶ್ಯಾಳ ಪಿಜಿಯ ಸತೀಶ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪೀಪಲ್ಸ್ ಚಾಣಕ್ಯ ಲೇಖಕ ಸಿದ್ಧಾರ್ಥ ವಾಡೆನ್ನವರ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2018-19ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದ ಪ್ರಗತಿಗೆ ಬೇಕಾದ ಅಂಶಗಳ ಬಗ್ಗೆ ಗಂಭೀರ ಚಿಂತನೆಯಾಗಬೇಕು ಮತ್ತು ದೇಶವನ್ನು ಆಳುವವರಲ್ಲಿ ಅಂಥ ಇಚ್ಛಾಶಕ್ತಿಗಳು ಇರಬೇಕು ಎಂದರು.
ವಿದ್ಯಾರ್ಥಿಗಳು ಲಕ್ಷ್ಮೀ, ಸರಸ್ವತಿಯಂತ ಕಾಲ್ಪನಿಕ ದೇವರುಗಳನ್ನು ಹೃದಯದಲ್ಲಿಟ್ಟುಕೊಳ್ಳಿರಿ. ಆದರೆ ಯಶಸ್ಸಿಗೆ, ಉನ್ನತಿಗೆ ಪ್ರೇರಣೆಯಾಗುವ ಸಾಧಕರ ಸಂದೇಶ, ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಯಶಸ್ಸು, ಸಾಧನೆ ಮಾಡಿರಿ ಎಂದರು.
ನಿರುತ್ಸಾಹಿ, ದೌರ್ಬಲ್ಯ ಹಾಗೂ ವಿಫಲ ವ್ಯಕ್ತಿಗಳನ್ನು ಬೆನ್ನುಹತ್ತದೆ ಸದಾ ಚಿಂತನಶೀಲ, ಸಾಧಕರನ್ನು ಅನುಸರಿಸಿರಿ. ಜ್ಞಾನ, ಶ್ರದ್ಧೆ ಸಾಧಿಸುವ ಛಲ ಇದ್ದರೆ ಯಶಸ್ಸು ನಿಮ್ಮ ಬೆನ್ನುಹತ್ತುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲ್ಕರ್ ಕ್ರೀಡೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ನಿವೃತ್ತರಾದ ಮಹಾವಿದ್ಯಾಲಯದ ದೈಹಿಕ ನಿರ್ದೇಶಕ ಎಂ.ಎಸ್. ಮುನ್ನೋಳಿ ಹಾಗೂ ವಿಶ್ವವಿದ್ಯಾಲಯ ಖೋಖೋ ಬ್ಲೂ ನಾಗರಾಜ ಢವಳೇಶ್ವರ ಅವರನ್ನು ಸನ್ಮಾನಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್. ಸೋನವಾಲ್ಕರ್, ನಿರ್ದೇಶಕ ಎಂ.ಎಚ್. ಸೋನವಾಲ್ಕರ್, ವಿದ್ಯಾರ್ಥಿ ಒಕ್ಕೂಟ ಅಧ್ಯಕ್ಷ ಡಾ. ಎಸ್.ಎಲ್. ಚಿತ್ರಗಾರ ವೇದಿಕೆಯಲ್ಲಿದ್ದರು.
ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಸ್ವಾಗತಿಸಿದರು, ಬಾಲಶೇಖರ ಬಂದಿ ಪರಿಚಯಿಸಿದರು, ಪ್ರೊ.ಎಸ್.ಎ. ಶಾಸ್ತ್ರೀಮಠ, ಪ್ರೊ. ಎ.ಪಿ. ರಡ್ಡಿ, ಪ್ರೊ. ಸಂಗಮೇಶ ಗುಜಗೊಂಡ ನಿರೂಪಿಸಿದರು, ಡಾ. ಎಸ್.ಎಲ್. ಚಿತ್ರಗಾರ ವಂದಿಸಿದರು.
ಪ್ರಶಸ್ತಿ : ಉತ್ತಮ ವಿದ್ಯಾರ್ಥಿ ಪ್ರಶಸ್ತಿ ವಿಠ್ಠಲ ಕೊಂಗಾಲಿ ಉತ್ತಮ ವಿದ್ಯಾರ್ಥಿನಿ ಪ್ರಶಸ್ತಿ ಲಕ್ಷ್ಮೀ ಪೂಜಾರಿ, ವೀರಾಗ್ರ ಪ್ರಶಸ್ತಿಯನ್ನು ಕೇತು ನಾಶಿ, ಶಿವಾನಂದ ಅವರಾದಿ, ಶ್ರೀಶೈಲ್ ಪುರಾಣಿಕ ಹಾಗೂ ವೀರಾಗ್ರಣಿ ಪ್ರಶಸ್ತಿಯನ್ನು ಸವಿತಾ ನೇರ್ಲಿ, ಗಾಯತ್ರಿ ನಿಡಗುಂದಿ ಅವರಿಗೆ ಪಾರಿತೋಷಕಗಳನ್ನು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ