Latest

ಶ್ರೀಗಳ ದರ್ಶನಕ್ಕೆ ಬರುವ ಗಣ್ಯರಿಗಾಗಿ ತುಮಕೂರಿನಲ್ಲಿ ದಿಢೀರ್ 10 ಹೆಲಿಪ್ಯಾಡ್ ನಿರ್ಮಾಣ

   ಪ್ರಗತಿವಾಹಿನಿ ಸುದ್ದಿ, ತುಮಕೂರು

ನಡೆದಾಡುವ ದೇವರು, ತ್ರಿವಿದ ದಾಸೋಹಿ, 112 ವರ್ಷದ ತುಮಕೂರಿನ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮಿಗಳ ಆರೋಗ್ಯ ಕ್ಷೀಣಿಸಿರುವ ಹಿನ್ನೆಲೆಯಲ್ಲಿ ಅವರನ್ನು ನೋಡಲು ಬರುವ ಗಣ್ಯರ ಸಂಖ್ಯೆ ಹೆಚ್ಚುವ ಸಾಧ್ಯತೆ ಇರುವುದರಿಂದ ತುರ್ತಾಗಿ 10ಕ್ಕೂ ಹೆಚ್ಚು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ. 

ತುಮಕೂರು ವಿವಿ ಆವರಣದಲ್ಲಿ 4, ಪಂಡಿತನಹಳ್ಳಿ ಗೇಟ್​ ಬಳಿ 3,  ಎಸ್‍ಐಟಿ ಕಾಲೇಜಿನಲ್ಲಿ 2, ಮಹಾತ್ಮಗಾಂಧಿ ಸ್ಟೇಡಿಯಂ ಬಳಿ 1 ಹೀಗೆ ಒಟ್ಟು 10 ಹೆಲಿಪ್ಯಾಡ್​ಗಳನ್ನ ನಿರ್ಮಾಣ ಮಾಡಲಾಗುತ್ತಿದೆ. ಶ್ರೀಗಳನ್ನು ನೋಡಲು ವಿವಿಐಪಿಗಳ ದಂಡು ಹರಿದು ಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತೆ ಕ್ರಮವಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ. 

ಈ ಮಧ್ಯೆ ಸ್ವಾಮಿಗಳನ್ನು ನೋಡಲು ಭಕ್ತರ ದಂಡು ಇನ್ನಷ್ಟು ಹೆಚ್ಚಾಗಿದೆ. ಚಿಕಿತ್ಸೆಗೆ ಶ್ರೀಗಳ ದೇಹ ನಿರೀಕ್ಷಿಸಿದಷ್ಟು ಸ್ಪಂದನೆ ನೀಡುತ್ತಿಲ್ಲ.  ಎಲ್ಲವನ್ನೂ ಕಾಲವೇ ನಿರ್ಧರಿಸಬೇಕು ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ತಂಡ ಹೇಳಿದೆ. ಈ ವಯಸ್ಸಿನಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಆದಾಗ್ಯೂ ಎಲ್ಲ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಗುರುವಾರ ಸ್ವಲ್ಪಕಾಲ ಕೃತಕ ಉಸಿರಾಟದ ಯಂತ್ರ ತಪ್ಪಿಸಿ ಸ್ವತಂತ್ರವಾಗಿ ಉಸಿರಾಡುವಂತೆ ಮಾಡಲಾಗಿತ್ತು. ಕೆಲಕಾಲ ಅವರು ಉಸಿರಾಟ ನಡೆಸಿದರು. ಆದಾಗ್ಯೂ ಇಷ್ಟು ಬೇಗ ಅವರು ಚೇತರಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಈ ಮಧ್ಯೆ ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪ್ರಧಾನಿಗಳ ಬಳಿ ಮನವಿ ಮಾಡಲಾಗಿದೆ. ಅಗತ್ಯವಾದರೆ ಪ್ರಧಾನಿಗಳನ್ನು ಭೇಟಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಗುರುವಾರ ಉಪಮುಖ್ಯಮಂತ್ರಿ ಜಿ. ಪರಮೇಶ್ವರ, ಗೃಹಸಚಿವ ಎಂ.ಬಿ.ಪಾಟೀಲ, ಮುರಾಘಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಮಠಕ್ಕೆ ಭೇಟಿ ನೀಡಿದ್ದರು. 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button