ಜಾರಕಿಹೊಳಿ ಗೈರು ಗಂಭೀರ ಪರಿಗಣನೆ -ದಿನೇಶ ಗುಂಡೂರಾವ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸಚಿವ ರಮೇಶ ಜಾರಕಿಹೊಳಿ ಸಚಿವಸಂಪುಟ ಸಭೆಗಳಿಗೆ ಹಾಗೂ ಶಾಸಕಾಂಗ ಸಭೆಗಳಿಗೆ ಸತತ ಗೈರಾಗುತ್ತಿರುವುದನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.
ಮಂಗಳವಾರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ಅವರು ಮಾತನಾಡಿದರು. ರಮೇಶ ಜಾರಕಿಹೊಳಿ ಇಂದಿನ ಶಾಸಕಾಂಗ ಸಭೆಗೆ ಅನಾರೋಗ್ಯದ ಕಾರಣದಿಂದ ಬರಲಾಗುತ್ತಿಲ್ಲ ಎಂದು ಪತ್ರ ಕೊಟ್ಟಿದ್ದಾರೆ. ಹಾಗಾಗಿ ಇದಕ್ಕೆ ಅಪಾರ್ಥ ಬೇಡ ಎಂದ ಅವರು, ಏನೇ ಆದರೂ ಪಕ್ಷ ಈ ವಿಷಯವನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.
ಶಾಸಕಾಂಗ ಪಕ್ಷದ ಸಭೆಯಲ್ಲಿ ಮೂರು ವಿಚಾರ ಚರ್ಚೆಯಾಗಿದೆ. ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಶಾಸಕಾಂಗ ಸಭೆ ಅಭಿನಂದಿಸಿ ನಿರ್ಣಯ ಅಂಗೀಕರಿಸಿದೆ. ರಾಜ್ಯದಲ್ಲಿ ಅಭಿವೃದ್ಧಿಯಲ್ಲಿ ಹಿನ್ನೆಡೆಯಾಗುತ್ತಿರುವ ಕುರಿತು ಹಾಗೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎನ್ನುವ ಕೂಗಿನ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಪುನಾರಚನೆ:
ರಾಜ್ಯ ಸಮ್ಮಿಶ್ರ ಸರಕಾರದ ಸಚಿವ ಸಂಪುಟ ವಿಸ್ತರಣೆ 22ರಂದೇ ನಡೆಯಲಿದೆ ಎಂದು ದಿನೇಶ ಗುಂಡೂರಾವ್ ತಿಳಿಸಿದ್ದಾರೆ. 20ರಂದು ತಾವು ದೆಹಲಿಗೆ ತೆರಳುವುದಾಗಿ ತಿಳಿಸಿದ ಅವರು, ಸಂಪುಟ ಪುನಾರಚನೆಯೂ ಆಗಬಹುದು ಎಂದು ತಿಳಿಸಿದರು.
ನಾಮ ನಿರ್ದೇಶನ ಸಂದರ್ಭಗಳಲ್ಲಿ ಮೈತ್ರಿ ಸೂತ್ರ ಅಳವಡಿಸಲಾಗುವುದು ಎಂದೂ ಅವರು ಹೇಳಿದರು.
ಎಂ.ಬಿ.ಪಾಟೀಲ, ಆರ್.ವಿ.ದೇಶಪಾಂಡೆ, ರಾಮಲಿಂಗಾರೆಡ್ಡಿ, ರಮೇಶ ಜಾರಕಿಹೊಳಿ ಸೇರಿ ಸುಮಾರು 20 ಶಾಸಕರು ಶಾಸಕಾಂಗ ಸಭೆಗೆ ಗೈರಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ