Latest

ಸಕಲ ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರ

 

     ಪ್ರಗತಿವಾಹಿನಿ ಸುದ್ದಿ, ನಾಗರಮುನ್ನೋಳಿ

ನಾಗರಮುನ್ನೋಳ್ಳಿ ಗ್ರಾಮದ ಹತ್ತಿರ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಮೇಲೆ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನದ ಮಧ್ಯೆ ನಡೆದ ರಸ್ತೆ ಅಪಘಾತದಲ್ಲಿ ಮೃತನಾದ ಯೋಧ ಸಿಕಂದರ ಗೈಬುಸಾಬ ಮುಲ್ತಾನಿ(೨೮) ಕುಟುಂಬಸ್ಥರಲ್ಲಿ ರೋಧನ ಮುಗಿಲು ಮುಟ್ಟಿದೆ.

ಯೋಧ ಸಿಕಂದರನನ್ನು ಕಳೆದುಕೊಂಡ ತನ್ನ ಸಹ ಪಾಠಿಗಳು ಸಹ ಮಮ್ಮಲನೆ ಮರುಗುತ್ತಿದ್ದಾರೆ. ಕಳೆದ ಒಂಭತ್ತು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಸಿಕಂದರ ಮುಲ್ತಾನಿ ಅವರು ಪಂಜಾಬ್ ಮದ್ರಾಸ ಇಂಜನಿಯರಿಂಗ್ ಗ್ರೂಪ್ ಆಫ್ ಸೆಂಟರನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ರಜೆ ಮೇಲೆ ಬಂದು 20 ದಿನ ಕಳೆದಿತ್ತು.

ನಾಗರಮುನ್ನೋಳ್ಳಿ ಗ್ರಾಮದ ಹತ್ತಿರ ಇರುವ ಕಬ್ಬೂರ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಲಕ್ಷ್ಮೀದೇವಿ ಜಾತ್ರೆಗೆ ಹೋಗಿ ಮಧ್ಯ ರಾತ್ರಿ ತಮ್ಮ ಮನೆಗೆ ಬರುವಾಗ ಟ್ರ್ಯಾಕ್ಟರ್ ಹಿಂಬದಿಗೆ ದ್ವಿಚಕ್ರ ಡಿಕ್ಕಿಯಾಗಿದೆ. ಹೀಗಾಗಿ ಯೋಧ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಕೇವಲ ಒಂದು ನಿಮಿಷ ಮುಂದೆ ಹೋಗಿದ್ದರೆ ಯೋಧ ಮನೆ ಸೇರುತ್ತಿದ್ದ. ಆದರೆ ವಿಧಿ ಅಟ್ಟಹಾಸ ಯೋಧನ ಜೀವ ಬಲಿ ಪಡೆದುಕೊಂಡಿದೆ. ಮೃತ ಯೋಧನಿಗೆ ತಂದೆ-ತಾಯಿ, ಸಹೊದರ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.

ಪಾರ್ಥಿವ ಶರೀರದ ಮೆರವಣಿಗೆ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ಬಳಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಾಗರಮುನ್ನೋಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನಡೆಯಿತು. ಗ್ರಾಮದ ಅಂಬೇಡ್ಕರ ಸರ್ಕಲ್ ದಿಂದ ಹಿರಿಯ ಪ್ರಾಥಮಿಕ ಶಾಲೆಯ ಮೈದಾನದವರೆಗೆ ಸೇನಾ ವಾಹನದಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಶಾಲೆ ಮೈದಾನದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ವಂದನೆ ಸಲ್ಲಿಸಿದರು. ನಂತರ ಮುಸ್ಲಿಂ ಗೋರಸ್ಥಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಿತು. ತಹಶೀಲ್ದಾರ ಸಂತೋಷ ಬಿರಾದರ ಮಾತನಾಡಿ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರ ಕುಟುಂಬಕ್ಕೆ ದೊರಕಿಸಿಕೊಡಲಾಗುವುದು ಎಂದರು. 
ಗ್ರಾಮ ಪಂಚಾಯತ್ ಅಧ್ಯಕ್ಷ ಸಿದ್ದಪ್ಪ ಮರ‍್ಯಾಯಿ, ಜಿ.ಪಂ ಮಾಜಿ ಅಧ್ಯಕ್ಷ ಮಲಗೌಡ ನೇರ್ಲಿ, ಕುರುಬರ ಯುವ ಘಟಕದ ಅಧ್ಯಕ್ಷ ಶಿವು ಮರ‍್ಯಾಯಿ, ದಾನಪ್ಪ ಕೊಟಬಾಗಿ, ತಹಶೀಲ್ದಾರ ಸಂತೋಷ ಬಿರಾದಾರ, ಉಪತಹಶೀಲ್ದಾರ ಸಿ.ಎ.ಪಾಟೀಲ, ಗುಲಾಬ ಜಮಾದಾರ, ಅಮೀರ ಮುಲ್ತಾನಿ, ಸಿಕಂದರ ಮುಲ್ತಾನಿ, ಗೈಬು ಮುಲ್ತಾನಿ, ಮಹಾದೇವ ಚೌಗಲಾ, ಎಂ.ಎಸ್.ಈಟಿ, ರಮೇಶ ಕಾಳನ್ನವರ, ಲಕ್ಷ್ಮೀಸಾಗರ ಈಟಿ, ಅನಿಲ ಈಟಿ, ಕಾಶೀಮ ಮುಲ್ತಾನಿ, ರಘು ಬಡಿಗೇರ, ಶಾಲೆ ಮುಖ್ಯೋಪಾಧ್ಯಾಯ ವೈ.ಎಸ್. ಬುಡ್ಡಗೋಳ, ಪಿಎಸ್‌ಐ ಸಂಗಮೇಶ ಹೊಸಮನಿ ಸೇರಿದಂತೆ ಮಿಲಿಟರಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button