ಪ್ರಗತಿವಾಹಿನಿ ಸುದ್ದಿ, ಬೆಂಗಳೂರು
ಸಣ್ಣ-ಪುಟ್ಟ ವಿಚಾರಗಳ ಬಗ್ಗೆ ನಾನು ತಲೆ ಕೆಡಿಸಿಕೊಳ್ಳಲ್ಲ, ಪಾಲಿಗೆ ಸಿಕ್ಕಿದ್ದು ಪಂಚಾಮೃತ. ಮಾಡ್ಬೇಕು ಅಷ್ಟೇ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ನಿಗಮ ಮಂಡಳಿ ನೇಮಕ ಪಟ್ಟಿಗೆ ಸಿಎಂ ಅಂಕಿತ ಹಾಕದ ವಿಚಾರದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ಗೊತ್ತಿಲ್ಲ. ನಾನು ಇರಲಿಲ್ಲ. ನನಗೆ ಮಾಡಲು ಸಾಕಷ್ಟು ಕೆಲಸ ಇದೆ. ಮೇಕೆದಾಟು, ತುಂಗಭದ್ರಾ, ಕೃಷ್ಣಮೇಲ್ದಂಡೆ ಬಗ್ಗೆ ಕೆಲಸ ಮಾಡಬೇಕಿದೆ. ಅದನ್ನು ಬಿಟ್ಟು ಸಣ್ಣ ಪುಟ್ಟ ವಿಚಾರಗಳ ಬಗ್ಗೆ ತಲೆಕೆಡಿಸಿಕಳ್ಳುವುದಿಲ್ಲ ಎಂದರು.
ಸಂಪುಟ ಪುನರಚನೆ ವೇಳೆ ಹಿನ್ನಡೆಯಾದ ಬಗ್ಗೆ ಪ್ರಶ್ನಿಸಿದಾಗ, ನೋಡ್ರಿ ಇದು ಕಾಂಗ್ರೆಸ್ ಪಕ್ಷ ಯಾರ ಮೇಲೆ ಟೋಪಿ ಇಡ್ತಾರೆ ಅವರೇ ನಾಯಕರು.
ಸಂಪುಟ ವಿಸ್ತರಣೆ ಸಂಬಂಧ ಎಲ್ಲ ರೀತಿಯ ಚರ್ಚೆಯಾಗಿದೆ. ಯಾರಿಗೆ ಯಾವ ಖಾತೆ ಅನ್ನೋದರ ಬಗ್ಗೆ ಮೊದಲೇ ಚರ್ಚೆಯಾಗಿದೆ. ನನಗೂ ಆಕಾಶದಲ್ಲೇ ಇರಬೇಕು ಅಂತಾ ಅನ್ಸುತ್ತೆ ಆಗುತ್ತಾ? ಎಂದು ಪ್ರಶ್ನಿಸಿದರು.
ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಇದೀಗ ಹಿರಿಯ ಮುಖಂಡ ಹೆಚ್. ಕೆ. ಪಾಟೀಲರಿಗೆ ಕೊಟ್ಟಿದ್ದಾರೆ. ಹಿಂದೆ ಎಸ್. ಎಂ. ಕೃಷ್ಣ, ಸಿದ್ದರಾಮಯ್ಯ, ಪರಮೇಶ್ವರ್ ಕೂಡ ಈ ಹುದ್ದೆಯಲ್ಲಿದ್ದರು. ಇದು ನನಗೆ ತಪ್ಪಿತು, ಹಿನ್ನಡೆ ಆಯ್ತು ಅಂತಾ ನೀವೇ ಖುಷಿ ಪಡಬೇಕು. ವೈದ್ಯಕೀಯ ಶಿಕ್ಷಣ ಖಾತೆ ನನಗೆ ಹೆಚ್ಚುವರಿ ಖಾತೆಯಾಗಿತ್ತು. ಇದೀಗ ತುಕಾರಾಂಗೆ ಸಿಕ್ಕಿದೆ. ಯುವಕ ಮೂರು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸ್ವಲ್ಪ ಗೈಡ್ ಮಾಡ್ಬೇಕು, ಗೈಡ್ ಮಾಡ್ತಿನಿ. ಅವರು ನಮ್ಮ ಸ್ನೇಹಿತ, ಪ್ರಾಮಾಣಿಕ ಎಂದು ಶಿವಕುಮಾರ ಹೇಳಿದರು.
ಪರಮೇಶ್ವರ್ ಗೆ ಗೃಹ ಖಾತೆ ತಪ್ಪಿದ್ದಕ್ಕೆ ಹೆಚ್. ಡಿ. ರೇವಣ್ಣನೀಡಿರುವ ಹೇಳಿಕೆ ಬಗ್ಗೆ ಪ್ರಶ್ನಿಸಿದಾಗ, ರೇವಣ್ಣಗೆ ನಾನು ಪಿಆರ್ ಒ ನಾ ? ಎಂದರು.
ವಾರದಲ್ಲಿ ಬಿಜೆಪಿ ಸರಕಾರ ರಚಿಸುತ್ತದೆ ಎನ್ನುವ ಉಮೇಶ ಕತ್ತಿ ಹೇಳಿಕೆ ಪ್ರತಿಕ್ರಿಯಿಸಿ, ಅವರನ್ನು ಭೇಟಿ ಮಾಡಿ ಜ್ಯೋತಿಷ್ಯ ಕೇಳಬೇಕಾಗಿದೆ ಎಂದರು ಡಿಕೆಶಿ.
ಮಧುಕರ ಶೆಟ್ಟಿ ಸಾವಿನ ಬಗ್ಗೆ ತನಿಖೆ ಆಗಲಿ ಎಂದೂ ಅವರು ಅಭಿಪ್ರಾಯಪಟ್ಟರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ