Latest

ಮೌಢ್ಯ ವಿರೋಧಿ ಹೋರಾಟಗಾರ ಸತೀಶ್ ಜಾರಕಿಹೊಳಿ

 

 

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

 ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರದಲ್ಲಿ ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರದ್ದು ಸದಾ ಹೋರಾಟದ ಬದುಕು.

ಜೂನ್ 1 , 1962 ರಲ್ಲಿ ಲಕ್ಷ್ಮಣರಾವ್ -ಭೀಮವ್ವ ದಂಪತಿಗೆ ಜನಿಸಿದ ಸತೀಶ ಹೆಚ್ಚೇನೂ ಓದಿದವರಲ್ಲ. ದ್ವಿತೀಯ ಪಿಯುಸಿ ಉತ್ತೀರ್ಣರಾಗಿರುವ ಅವರು, ನಾಯಕ ಸ್ಟುಡೆಂಟ್ ಫೆಡರೇಶನ್ ಅಧ್ಯಕ್ಷರಾಗಿ, ವಿಧಾನ ಪರಿಷತ್ ಸದಸ್ಯ (1997-2013), ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳದ ನಿರ್ದೇಶಕ, ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ, ಗೋಕಾಕ ನಗಾರಭಿವೃದ್ದಿ ಸಂಘದ ಅಧ್ಯಕ್ಷ, ಸತೀಶ ಶುಗರ್ಸ್ ನ ಚೇರ್ಮನ್ ಆಗಿಯೂ  ಕಾರ್ಯನಿರ್ವಹಿಸಿದ್ದಾರೆ.

ಜವಳಿ, ಸಣ್ಣ ಕೈಗಾರಿಕೆ ಮತ್ತು ಅಬಕಾರಿ ಸಚಿವ ಹುದ್ದೆಗಳನ್ನು ನಿಭಾಯಿಸಿದ್ದಲ್ಲದೇ  ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 

ಸೂಕ್ತವಾದ ಖಾತೆ ನೀಡಿಲ್ಲ ಎಂದು ಸಿದ್ದರಾಮಯ್ಯ ಸರಕಾರದ ಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದು ಭಾರೀ ಸುದ್ದಿಯಾಗಿದ್ದರು. ಈ ಬಾರಿಯೂ ಮೊದಲ ಹಂತದಲ್ಲಿ ಸಚಿವಸ್ಥಾನ ಸಿಕ್ಕಿಲ್ಲ ಎಂದು ತೀವ್ರ ಅಸಮಾಧಾನಗೊಂಡಿದ್ದರು. 

ವೃತ್ತಿಯಿಂದ ಕೃಷಿಕ ಹಾಗೂ ಉದ್ಯಮಿಯಾಗಿರುವ ಸತೀಶ ಜಾರಕಿಹೊಳಿ ಉತ್ತಮ ಕ್ರೀಡಾಪಟು ಕೂಡ ಹೌದು. ಕ್ರಿಕೆಟ್ ಮತ್ತು ವಾಲಿಬಾಲ್ ಸತೀಶ ಅವರ ಅಚ್ಚುಮೆಚ್ಚಿನ ಆಟಗಳು. 1981 ರಿಂದ ಬಿಯುಸಿಸಿ ಕ್ರಿಕೆಟ್ ಕ್ಲಬ್ ಸದಸ್ಯರಾಗಿದ್ದ ಅವರು, 1994 ರಲ್ಲಿ ನಡೆದ ಕಾಲೇಜುಗಳ ವಲಯಮಟ್ಟದ  ಕ್ರೀಡೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೇ ಇವರು 1985 ರ ಮಾರ್ಚನಲ್ಲಿ 17 ನೇ ಅಖಿಲಭಾರತದ ವಾಲಿಬಾಲ್ ಫೆಡರೇಷನ್ ಪಂದ್ಯಾವಳಿಯನ್ನು ಗೋಕಾಕದಲ್ಲಿ ಅತ್ಯಂತ ಶ್ರಮಪಟ್ಟು ಯಶಸ್ವಿಯಾಗಿ ನಡೆಸಿದ್ದಾರೆ.

1986 ರಲ್ಲಿ ಲಕ್ಷ್ಮೀ ಎಜ್ಯುಕೇಶನ್ ಟ್ರಸ್ಟ್ ಸಂಸ್ಥೆಯನ್ನು ಪ್ರಾರಂಭಿಸಿ ಗೋಕಾಕ ನಗರದಲ್ಲಿ ಉತ್ತಮ ಶಿಕ್ಷಣ ದೊರೆಯುವಂತೆ ಮಾಡಿದ್ದಾರೆ. 1992 ರಲ್ಲಿ ಬಡ ಹಿಂದುಳಿದ ಹಾಗೂಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಯೋಗ್ಯ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಗೋಕಾಕ ಹಾಗೂ ಬೆಳಗಾವಿ ಜಿಲ್ಲೆಯ ಇನ್ನೂ ಅನೇಕ ಸ್ಥಳಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳನ್ನು ಪ್ರಾರಂಭಿಸಿದ್ದಾರೆ.

ಅಭಿವೃದ್ಧಿ ಸಂಘದ ಅಧ್ಯಕ್ಷರಾಗಿ, ನಗರದ ಪ್ರತಿಯೊಂದು “ಓಣಿಗಳಲ್ಲಿ ಸಿಮೆಂಟ್ ಗಟಾರ, ಸಿಮೆಂಟ್ ರಸ್ತೆಗಳನ್ನು ನಿರ್ಮಿಸಿ, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.

ಮೌಢ್ಯ ವಿರೋಧಿ:

ಮಾನವ ಬಂಧುತ್ವ ವೇದಿಕೆ ಮೂಲಕ ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಸಾರುತ್ತಿರುವ ಸತೀಶ ಜಾರಕಿಹೊಳಿ, ಮೌಢ್ಯ ವಿರೋಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ  ಇಡೀ ದೇಶದ ಗಮನವನ್ನು ಸೆಳೆಯುತ್ತಿದ್ದಾರೆ.

ಸ್ಮಶಾನದಲ್ಲಿ ಭೋಜನ, ಉಪಾಹಾರ ಸೇವನೆ, ವಾಸ್ತವ್ಯ ಮಾಡುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದಾರೆ. ಪ್ರಗತಿಪರರ ವಿಚಾರಗಳನ್ನು ಜನರಿಗೆ ಈ  ಕಾರ್ಯಕ್ರಮಗಳ ಮೂಲಕ ಅವರು ತಲುಪಿಸುತ್ತಿದ್ದಾರೆ.

ಪ್ರತಿಭಾವಂತ ಮಕ್ಕಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಪ್ರತಿವರ್ಷ ಸತೀಶ ಶುಗರ್ಸ್ ಅವಾರ್ಡ್ ಮೇಲೆಯೇ ಕೋಟ್ಯಂತರ ರೂ. ಗಳನ್ನು ವೆಚ್ಚ ಮಾಡುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button