Latest

ಸಿದ್ದಗಂಗಾ ಶ್ರೀಗಳಿಗೆ ಕೃತಕ ಉಸಿರಾಟ ವ್ಯವಸ್ಥೆ: ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಬಂದೋಬಸ್ತ್

     ಪ್ರಗತಿವಾಹಿನಿ ಸುದ್ದಿ, ತುಮಕೂರು

111 ವರ್ಷದ ಕಾಯಕಯೋಗಿ, ತ್ರಿವಿದ ದಾಸೋಹಿ, ನಡೆದಾಡುವ ದೇವರು ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದ್ದು, ಮಠದಲ್ಲಿಯೇ ಚಿಕಿತ್ಸೆ ಮುಂದುವರಿಸಲಾಗಿದೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಗುರುವಾರ ಬೆಳಗ್ಗೆ ಮಠಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಸ್ಥಿತಿಯಲ್ಲಿಲ್ಲ. ಹಾಗಾಗಿ ಮಠದಲ್ಲಿಯೇ ಎಲ್ಲ ವ್ಯವಸ್ಥೆ ಮಾಡಲಾಗಿದ್ದು, ಸೋಂಕು ತಗುಲಬಾರದೆಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತಿಲ್ಲ ಎಂದರು.

ಅವರ ಆರೋಗ್ಯ ಶೀಘ್ರ ಚೇತರಿಕೆ ಕಾಣಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುವುದೊಂದೇ ನಮ್ಮ ಕೈಯಲ್ಲಿರುವುದು ಎಂದು ಅವರು ಹೇಳಿದರು. 

ಮುರುಘಾಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳು ಸಹ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆರೋಗ್ಯ ವಿಚಾರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕೆಲ ಹೊತ್ತಿನಲ್ಲಿ ಮಠಕ್ಕೆ ಆಗಮಿಸುವ ನಿರೀಕ್ಷೆ ಇದೆ. 

ಶ್ರೀಗಳ ಆರೋಗ್ಯ ನಿರೀಕ್ಷಿತ ಮಟ್ಟದಲ್ಲಿ ಚೇತರಿಕೆ ಕಾಣುತ್ತಿಲ್ಲ. ಹಾಗಂತ ಕ್ಷೀಣಿಸಿಯೂ ಇಲ್ಲ. ಅರ್ಧಭಾಗ ಅವರು ಉಸಿರಾಡುತ್ತಿದ್ದಾರೆ, ಇನ್ನರ್ಧ ಭಾಗ ಕೃತಕ ಉಸಿರಾಟದ ಯಂತ್ರದಿಂದ ಉಸಿರಾಡುತ್ತಿದ್ದಾರೆ. ದ್ರವಾಹಾರ ನೀಡಲಾಗಿದೆ ಎಂದು ಶ್ರೀಗಳನ್ನು ನೋಡಿಕೊಳ್ಳುತ್ತಿರುವ ವೈದ್ಯ ಡಾ.ಪರಮೇಶ್ವರ ತಿಳಿಸಿದ್ದಾರೆ.

ಶ್ರೀಗಳು ಪೂಜೆ ಮಾಡಲು ಸಾಧ್ಯವಾಗುತ್ತಿಲ್ಲ. ಚೆನ್ನೈ ವೈದ್ಯರ ಸಲಹೆಯೊಂದಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಭಕ್ತರು ಆತಂಕಪಡುವ ಅಗತ್ಯವಿಲ್ಲ. ಮಠಕ್ಕೆ ಬಂದು ಇಲ್ಲಿನ ವ್ಯವಸ್ಥಗೆ ತೊಂದರೆ ಮಾಡಬೇಡಿ ಎಂದು ವೈದ್ಯರು ಮನವಿ ಮಾಡಿದರು.

ಈ ಮಧ್ಯೆ ಮಠದ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಕ್ಷಣದಿಂದ ಕ್ಷಣಕ್ಕೆ ಭಕ್ತರ ದಂಡು ಹೆಚ್ಚುತ್ತಿದೆ. ಗಣ್ಯರು ಸಹ ಭಾರೀ ಸಂಖ್ಯೆಯಲ್ಲಿ ಮಠದತ್ತ ಹರಿದುಬರುತ್ತಿದ್ದಾರೆ.

ಇನ್ನು ಕೆಲವೇ ಕ್ಷಣದಲ್ಲಿ, ಎಲ್ಲ ತಪಾಸಣೆ ಪೂರ್ಣಗೊಂಡ ನಂತರ ಅವರ ಆರೋಗ್ಯ ಕುರಿತು ಹೆಲ್ತ್ ಬುಲಿಟನ್ ಬಿಡುಗಡೆ ಮಾಡುವುದಾಗಿ ವೈದ್ಯರು ತಿಳಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button