ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಸೈಬರ್-ಸೆಕ್ಯುರಿಟಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಸಂಶೋಧನೆಗೆ ಪ್ರೋತ್ಸಾಹಿಸಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ಕೆ ಎಲ್ ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಎಂ ಸಿ ಎ ವಿಭಾಗವು “ನೆಟ್ವರ್ಕ್ ಕಮ್ಯುನಿಕೇಶನ್ ಮತ್ತು ಅಡ್ವಾನ್ಸಸ್ ಇನ್ ಸೈಬರ್ ಸೆಕ್ಯೂರಿಟಿ ರಿಸರ್ಚ್” ಎರಡು ದಿನಗಳ ವಿಚಾರ ಸಂಕೀರಣವನ್ನು ಹಮ್ಮಿಕೊಂಡಿತ್ತು.
ಸೈಬರ್ ಸೆಕ್ಯೂರಿಟಿ ವಿಷಯದ ತಜ್ಞರಾದ ದೆಹಲಿಯ ಐ ಐ ಐ ಟಿ ಯಲ್ಲಿ ಪ್ರಾಧ್ಯಾಪಕರಾಗಿರುವ ಪ್ರೊ.ಪೊನ್ನುರಂಗಮ್ ಕುಮಾರಗುರು, ಪ್ರಖ್ಯಾತ ಅಂತರಾಷ್ಟ್ರೀಯ ವಿದ್ಯುನ್ಮಾನ ಕಂಪನಿಯಾದ ಸ್ಯಾಮ್ ಸಂಗ್ ದ ಸಂಶೋಧನಾ ಮತ್ತು ಅಭಿವೃದ್ಧಿಯ ಬೆಂಗಳೂರು ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಜ್ಯೋತಿರ್ಮೋಯಿ ಕರ್ಜಿ, ಚೆನ್ನೈ ನ ರಾಷ್ಟ್ರೀಯ ಸೈಬರ್ ಡಿಫೆನ್ಸ್ ರಿಸರ್ಚ್ ಸೆಂಟರ್ (ಎನ್ಸಿಡಿಆರ್ಸಿ)ಯ ಆಶಿಶ್ ವಿವೇಕಾನಂದ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಅದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಈ ಸಂಪನ್ಮೂಲ ವ್ಯಕ್ತಿಗಳು ಬೆಳಕು ಚೆಲ್ಲಿದರು. ಸೈಬರ್ ಸುರಕ್ಷತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್, ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಆಂಡ್ರಾಯ್ಡ್ ಗೆ ಸಂಬಂಧಿಸಿದಂತೆ ಉಪಯೋಗಗಳು ಮತ್ತು ಸಂಶೋಧನಾ ಸಾಧ್ಯತೆಗಳ ಬಗ್ಗೆ ತಿಳಿಸಿದರು.
ಸೈಬರ್ ಸೆಕ್ಯೂರಿಟಿ ಬಗ್ಗೆ ಲೇಖನಗಳನ್ನು ಬಿತ್ತಿ ಚಿತ್ರಗಳ ಮೂಲಕ ಪ್ರಸ್ತುತ ಪಡಿಸುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪ್ರಥಮ ಬಹುಮಾನವನ್ನು ಐಶ್ವರ್ಯಾ ಮಹೇಂದ್ರಕರ ಮತ್ತು ಗೌರಿ ಚನಲ್ ತಂಡ, ಎರಡನೇ ಸ್ಥಾನವನ್ನು ಶ್ವೇತಾ ಸಾವಂತ್ ಮತ್ತು ರೋಷನ್ ಶೆಟ್ಟಿ, ಮೂರನೇ ಸ್ಥಾನವನ್ನು ಐಶ್ವರ್ಯಾ ದೇಶಪಾಂಡೆ ಮತ್ತು ವೈಭವಿ ನಾಯಕ್ ತಂಡವು ಪಡೆಯಿತು. ಅತ್ಯುತ್ತಮ ಪೋಸ್ಟರ್ ವಿನ್ಯಾಸ ಪ್ರಶಸ್ತಿಯನ್ನು ಸಾಗರ್ ಚವಾಣ್ ಮತ್ತು ಪ್ರಿಯಾಂಕಾ ಪಸನನೇ ತಂಡವು ಗೆದ್ದಿತು.
ಎಂ ಸಿ ಎ ವಿಭಾಗದ ಮುಖ್ಯಸ್ಥೆ ಪ್ರೊ. ಶ್ವೇತಾ ಗೌಡರ್ ಹಾಗೂ ಪ್ರೊ. ಪಿಜೂಷ್ ಭರತ್ಕುರ್ ಇದನ್ನು ಸಂಯೋಜಿಸಿದ್ದರು. ಇದರಲ್ಲಿ ಸುಮಾರು ಎರಡುನೂರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
(ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಪರಿಚಿತರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ