ಪ್ರಗತಿವಾಹಿನಿ ಸುದ್ದಿ, ಮೂಡಲಗಿ
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ಯಾವುದೇ ಒಂದು ಸಮುದಾಯ, ರಾಜಕೀಯ ಪಕ್ಷ, ಜಾತಿಗೆ ಸೇರಿದ ನಾಯಕರಲ್ಲ. ಅವರು ಸಮಗ್ರ ಭಾರತವನ್ನು ಪ್ರತಿನಿಧಿಸುವ ಸಾಂಸ್ಕೃತಿಕ ರಾಯಭಾರಿಯಾಗಿದ್ದರು ಎಂದು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯ ಸೋನವಾಲ್ಕರ ಹೇಳಿದರು.
ಅವರು ಸ್ಥಳೀಯ ಯುವ ಜೀವನ ಸಂಸ್ಥೆ, ಗಾರ್ಡನ್ ಅಭಿವೃದ್ದಿ ಸಂಸ್ಥೆ ಹಾಗೂ ವಿವಿಧ ಶಿಕ್ಷಣ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವದ ಪ್ರಯುಕ್ತ ನಡೆದ ಭವ್ಯ ಶೋಭಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಮೂಡಲಗಿ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ಮಾತನಾಡಿ, ಸ್ವಾಮಿ ವಿವೇಕಾನಂದರು ದೇಶದ ಯುವ ಶಕ್ತಿಯನ್ನು ಇಡೀ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮಹಾನ್ ಚೇತನ. ಇಂದು ಭಾರತದ ಯುವಶಕ್ತಿ ಪ್ರಪಂಚದ ಏಳ್ಗೆಗಾಗಿ ದುಡಿಯುತ್ತಿದೆ ಎಂದು ಹೇಳಿದರು.
ಎಮ್‌ಇಎಸ್ ಕಾಲೇಜಿನ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಗಣ್ಯರು ಪೂಜೆ ಸಲ್ಲಿಸಿದರು. ಶೋಭಯಾತ್ರೆ ಕಾಲೇಜ್ ರಸ್ತೆ, ಚೆನ್ನಮ್ಮ ವೃತ್ತ, ಕರೆಮ್ಮ ವೃತ್ತ, ಬಾಜಿ ಮಾರ್ಕೆಟ್, ಸಂಗಪ್ಪಣ್ಣ ವೃತ್ತದ ಮೂಲಕ ಸಾಗಿ ಕಲ್ಮೇಶ್ವರ ವೃತ್ತದಲ್ಲಿ ಮುಕ್ತಾಯಗೊಂಡಿತು. ಶೋಭಾಯಾತ್ರೆಯಲ್ಲಿ ಶ್ರೀ ಮಂಜುನಾಥ ಶಿಕ್ಷಣ ಸಂಸ್ಥೆ, ಎಂಇಎಸ್ ಶಿಕ್ಷಣ ಸಂಸ್ಥೆ, ಆರ್‌ಡಿಎಸ್ ಶಿಕ್ಷಣ ಸಂಸ್ಥೆ, ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೊಂಡು ಸ್ವಾಮಿ ವಿವೇಕಾನಂದರಿಗೆ ಜಯವಾಗಲಿ ಎಂಬ ಘೋಷವಾಕ್ಯವನ್ನು ಕೂಗುತ್ತ ಸಾಗಿದರು. ಸ್ವಾಮಿ ವಿವೇಕಾನಂದರ ವೇಷಧಾರಿಯಾಗಿದ್ದ ನಂದಗೋಕುಲ ಶಾಲೆಯ ವಿದ್ಯಾರ್ಥಿ ಸಮರ್ಥ ಮೇದಾರ ಎಲ್ಲರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಯುವ ಜೀವನ ಸೇವಾ ಸಂಸ್ಥೆ ಮತ್ತು ಶ್ರೀ ಕಲ್ಮೇಶ್ವರಬೋಧ ಸ್ವಾಮಿಜೀ ಸೇವಾ ಸಮಿತಿಯ ವತಿಯಿಂದ ಮೂಡಲಗಿ ಶಿಕ್ಷಣ ಸಂಸ್ಥೆಯ ನೂತನ ಅಧ್ಯಕ್ಷ ವಿಜಯ ಸೋನವಾಲ್ಕರ ಹಾಗೂ ೨೦೧೮-೧೯ನೇ ಸಾಲಿನ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಗಮೇಶ ಗುಜಗೊಂಡ, ಶಿವಾಜಿ ಮೌಳಿಕ, ಪುಲಕೇಶಿ ಸೋನವಾಲ್ಕರ, ಎಲ್.ವಾಯ್. ಅಡಿಹುಡಿ, ಸಾಗರ ಸಾಲಿಮಠ, ಪುರಸಭೆ ಸದಸ್ಯರಾದ ಶಿವು ಸಣ್ಣಕ್ಕಿ, ಹಣಮಂತ ಗುಡ್ಲಮನಿ, ಹಣಮಂತ ಸತರಡ್ಡಿ, ಶಿವಬಸು ಸುಣಧೋಳಿ, ಅಣ್ಣಪ್ಪ ಅಕ್ಕನ್ನವರ, ಚೇತನ ನಿಶಾನಿಮಠ, ಯಲ್ಲಪ್ಪ ಸಣ್ಣಕ್ಕಿ, ನವೀನ ಗಸ್ತಿ, ಸಿದ್ದಣ್ಣ ದುರದುಂಡಿ, ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೇಶ್ವರ, ಸುಭಾಸ ಗೊಡ್ಯಾಗೋಳ, ಗುರು ಗಂಗನ್ನವರ, ಭಗವಂತ ಉಪ್ಪಾರ, ಲಕ್ಷ್ಮೀಕಾಂತ ಪೂಜೇರಿ, ಈಶ್ವರ ಢವಳೇಶ್ವರ, ರಾಜು ಭಜಂತ್ರಿ, ಆನಂದ ಸುಳ್ಳನ್ನವರ, ಅಜಯ ಬಳಿಗಾರ, ಯೇಸು ದೊಡ್ಡಮನಿ ಮತ್ತಿತರರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ